Tuesday, February 28, 2017

ಪುಟ್ಟಿಯ ಬಾಲ್ಯ ಗಾಳಿಪಟದ ಪ್ರಸಂಗ ಕೆಲಸ ಮುಗಿಸಿ ಟೀ ಲೋಟ ಹಿಡಿದು ಬಂದ ರತ್ನ ಟಿವಿ ಹಾಕಿದಳು ಅದರಲ್ಲಿ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಇಬ್ಬರೂ ಗಾಳಿಪಟದ ಹಾಡು ಹೇಳ್ತಿದ್ದರು. " ಗಾಳಿಪಟ"ಎಂಬ ಪದ ಕೇಳಿದೊಡನೆಯೇ ರತ್ನಳ ಮನಸ್ಸು ಪುಟ್ಟಿಯಾಗಲು ತವಕಿಸಿತು. ಆವತ್ತು ಪುಟ್ಟಿಗೆ ರಜ ಇತ್ತು.ಅವಳು ಚಿನ್ನಿ ವಿಜಿ ಮೂವರೂ ಸೇರಿ ಗಾಳಿಪಟದ ತಯಾರಿಯಲ್ಲಿದ್ದರು.ಹಳೇ ದಿನಪತ್ರಿಕೆಯನ್ನು ಚೌಕಾಕಾರವಾಗಿ ಕತ್ತರಿಸಿದರು. ತೆಂಗಿನ ಪೊರಕೆ ಕಡ್ಡಿಯನ್ನು ಬಿಲ್ಲಿನಂತೆ ಬಾಗಿಸಿ ಆ ಕಾಗದಕ್ಕೆ ಅಂಟಿಸಿದರು. ಇನ್ನೊಂದನ್ನು ಮೂಲೆಯಿಂದ ಮೂಲೆಗೆ ಅಂಟಿಸಿದರು. ಅದಕ್ಕೆ ಸೂತ್ರ ಕಟ್ಟಿ, ಟ್ಯೈ ನ್ ದಾರ ಕಟ್ಟಿ ಹಾರಿಸಲು ಹೊರಟರು.  ಹೊರಗೆ ಬಂದ ಚಿಕ್ಕಕ್ಕ "ಯೇ ಗಾಂಪರೊಡೆಯರ ಶಿಷ್ಯರಾ ಬಾಲಂಗೋಚಿ ಕಟ್ಟಲ್ವಾ?" ಅಂದಳು. "ಅಯ್ಯೋ ಮರ್ತೆ ಬಿಟ್ಟೆ" ಅಂತಾ ರೇಡಿಯೋದ ಈರಣ್ಣನ (ಎ ಎಸ್ ಮೂರ್ತಿ)ಸ್ಟೈಲಲ್ಲಿ ಹೇಳಿದ ಪುಟ್ಟಿ ಉದ್ದಕ್ಕೆ ಕಾಗದ ಹರಿದು ಬಾಲಂಗೋಚಿ ಕಟ್ಟಿದಳು. ಪಟ ಹಾರಿಸಲು ಬಯಲಿಗೆ ನಡೆದರು. ಚಿನ್ನಿ ಪಟ ಕೈಯಲ್ಲಿ ಹಿಡಿದಳು. ಪುಟ್ಟಿ ದಾರದುಂಡೆ ಹಿಡಿದು ಸ್ವಲ್ಪ ದೂರದಲ್ಲಿ ನಿಂತಳು.ವಿಜಿ" ಗಾಳಿ ಬಂತು ಪಟ ಬಿಡೇ " ಎಂದು ಕೂಗಿದ.ಚಿನ್ನಿ ಪಟ ಬಿಟ್ಟಳು ಪುಟ್ಟಿ ದಾರ ಹಿಡಿದು ಓಡಿದಳು.ಮೇಲೇರಿದ ಪಟ ಪುಟ್ಟಿ ನಿಂತೊಡನೆಯೇ ಕೆಳಗಿಳಿಯಿತು.ಮತ್ತೆ ಮತ್ತೆ ಅದೇ ಪುನರಾವರ್ತನೆಯಾಯಿತು.ಅಯ್ಯೋ ಇದು ಓಡೋ ಪಟ ಅಂತ ಅದನ್ನ ಬಿಸಾಕಿ, ಮನೆಗೆ ಬಂದು ಇನ್ನೊಂದು ಪಟ ಕಟ್ಟಿದರು.ಅದು ಕೈ ಬಿಟ್ಟೊಡನೆ ಗಾಳಿಯಲ್ಲಿ ಲಾಗ ಹಾಕಲು ತೊಡಗಿತು. ನಿಮ್ಮ ಪಟ ಗೋತ ಅಂತ ಅಲ್ಲಿದ್ದ ಮಕ್ಕಳು ಕೈತಟ್ಟಿ ನಕ್ಕರು. ಗೋತಾ ಪಟವನ್ನು ಸಿಟ್ಟಿನಿಂದ ಹರಿದು ಹಾಕಿ ಚಿನ್ನಿ ಮನೆಗೆ ಓಡಿದಳು. ವಿಜಿ ಅಳುತ್ತಾ ಮನೆಗೆ ಹೋದನು.ಬಯಲಿನಲ್ಲಿ ಎತ್ತರಕ್ಕೆ ಹಾರುತ್ತಿದ್ದ ಪಟವನ್ನು ನೋದುತ್ತಾ ಪುಟ್ಟಿ ಅಲ್ಲೇ ನಿಂತಳು. ಪಟ ಬಿಡುತ್ತಿದ್ದ ಮಲ್ಲೇಶ ಅವಳ ಕೈಗೆ ದಾರ ಕೊಟ್ಟು ತಾನೂ ಭದ್ರವಾಗಿ ಹಿಡಿದುಕೊಂಡ."ಮಲ್ಲೇಶ ನಂಗೂ ಗಾಳಿಪಟ ಕಟ್ಕೊಡೋ" ಪುಟ್ಟಿ ಬೇಡಿದಳು." ನನ್ನತ್ರ ಕಾಗ್ಜ ಇಲ್ಲ ಕಾಗ್ಜ ತಂದ್ಕೊಟ್ರೆ ಕಟ್ಕೊಡ್ತೀನಿ." ಅಂದ ಮಲ್ಲೇಶ.ಪುಟ್ಟಿ ಮನೆಗೋಡಿದಳು. ಪಟ ಕಟ್ಟುವ ಕಾಗದಕ್ಕಾಗಿ ಅಲ್ಲಿ ಇಲ್ಲಿ ಹುಡುಕಿದಳು.ಕಾಗದ ಸಿಗಲಿಲ್ಲ.ಹಾಲಿಗೆ ಬಂದಳು.ಗೋಡೆಯನ್ನಲಂಕರಿಸಿದ್ದ ಸರಸ್ವತಿಯ ಕ್ಯಾಲೆಂಡರ್ ನೋಡಿದಳು.ಚೌಕಾಕಾರವಾಗಿದ್ದ ಅದು ಪಟ ಕಟ್ಟಲು ಚೆನ್ನಾಗಿರುತ್ತೆಂದು, ಕುರ್ಚಿಯ ಮೇಲೆ ಹತ್ತಿ ಅದನ್ನು ತೆಗೆದಳು.ಅಂಚಿನಲ್ಲಿದ್ದ ಲೋಹದ ಪಟ್ಟಿಯನ್ನು ಕತ್ತರಿಸಿ ತೆಗೆದು ಹೊರಗೆ ಓಡಿದಳು.ಮಲ್ಲೇಶ ಅದರಲ್ಲಿ ಪಟ ಕಟ್ಟಿದ. ಇಬ್ಬರೂ ಸೇರಿ ಪಟ ಹಾರಿಸಿದರು.ಆಕಾಶವನ್ನೇ ಮುಟ್ಟುವಂತೆ ಪಟ ಮೇಲೇರತೊಡಗಿತು".ಆಷ್ಟು ಎತ್ತರಕ್ಕೆ ಯಾವ ಪಟಾನೂ ಹಾರ್ಸೇ ಇಲ್ಲ" ಅಂತ ಪುಟ್ಟಿ ಅಂದರೆ ಮಲ್ಲೇಶ ಸಹ ಹೂಗುಟ್ಟಿದ."ಇನ್ನು ಸಾಕು ಪಟ ಇಳಿಸೋ"ಪುಟ್ಟಿಯ ಮಾತಿನಂತೆ ಮಲ್ಲೇಶ ಮೆಲ್ಲಗೆ ಪಟ ಇಳಿಸತೊಡಗಿದ.ಆ ಸಂಭ್ರಮದಲ್ಲಿ ಪಟದ ದಾರ ತುಂಡಾಗಿ ಗಾಳಿಯಲ್ಲಿ ತೇಲಿಕೊಂಡು ಹೋಗಿ ಎತ್ತರದ ಸುರಗಿ ಮರಕ್ಕೆ ಸಿಕ್ಕಿಹಾಕಿಕೊಂಡಿತು. ಅಷ್ಟು ಎತ್ತರಕ್ಕೆ ಹಾರಿದ ಪಟವನ್ನು ಯಾರೂ ನೋಡಲೇ ಇಲ್ಲವಲ್ಲ ಅಂತ ನಿರಾಸೆಯಿಂದ ಪುಟ್ಟಿ ಮನೆಗೆ ಬಂದಳು. ; ಪಟ ಎತ್ತರಕ್ಕೆ ಹಾರಿದ್ದನ್ನು ಚಿಕ್ಕಕ್ಕನ ಮುಂದೆ ವರ್ಣಿಸಿದಳು.ಅವಳು ಹೌದಾ ಎಂದ ರೀತಿಯಿಂದಲೇ ನಂಬಲಿಲ್ಲವೆಂದು ಗೊತ್ತಾಯಿತು ಪುಟ್ಟಿ-.ಸತ್ಯವಾಗ್ಲೂ ಮೇಲಕ್ಕೆ ಹಾರಿತು. ಚಿಕ್ಕಕ್ಕ-ಮತ್ತೆ ವಿಜಿ ಗೋತ ಹೊಡೀತು ಅಂದ ಪುಟ್ಟಿ-.ಅದಲ್ವೆ ಮಲ್ಲೇಶ ಬೇರೆ ಪಟ ಕಟ್ಕೊಟ್ ಚಿಕ್ಕಕ್ಕ- ಕಾಗದಎಲ್ಲಿತ್ತು? ಪುಟ್ಟಿ- ಸರಸ್ವತಿಯ ಕ್ಯಾಲೆಂಡರ್ ಚಿಕ್ಕಕ್ಕ-ನಿಂಗೇನ್ ತಲೇಲಿ ಬುದ್ಢಿ ಇದೆಯಾ ಇಲ್ವಾ? ಅಷ್ಟು ಚೆನ್ನಾಗಿದ್ದ ಸರಸ್ವತಿ ಚಿತ್ರ,ಯಾರಾದರೂ ಗಾಳಿಪಟ ಮಾಡ್ತಾರಾ? ಅಮ್ಮ ಅದನ್ನ ಕಟ್ ಹಾಕ್ಸಕ್ಕೇಂತ ಇಟ್ಕೊಂಡಿದ್ದರು. ಶಾಂತಸ್ವರೂಪಿಣಿಯಾದ ಅಮ್ಮನಿಂದ ಪುಟ್ಟಿಗೆ ಚೆನ್ನಾಗಿ ಪೂಜೆಯಾಯಿತು.ಪುಟ್ಟಿ ಪೆಚ್ಚಾದಳು.ಆಕಾಶದಲ್ಲಿದ್ದ ಬೇರೆ ದೇವತೆಗಳನ್ನು ಸೇರಲು ಸರಸ್ವತಿಯ ಪಟ ಅಷ್ಟೆತ್ತರಕ್ಕೆ ಹಾರಿರಬಹುದು ಅಂತ ಅಕ್ಕ ಪ್ರಸಂಗಕ್ಕೆ ಮುಕ್ತಾಯ ಹಾಡಿದಳು. ರತ್ನಳ ಮೊಗದಲ್ಲಿ ಮುಗುಳ್ನಗೆ ಮೂಡಿತು.  ಫೋನ್ ರಿಂಗಣಿಸಿತು. ದೊಡ್ಡಕ್ಕನ ಫೋನಿರಬಹುದು ಅಂತ ರತ್ನ ಸಡಗರದಿಂದ ಫೋನೆತ್ತಿದಳು.

3 comments:

  1. Shantaswaroopi ammanige kopa barisida tarale putti :-)

    ReplyDelete
  2. puttiya tunta balaleele sogasaagi varnitavaagide... nimma nenapugala saagaradinda muttina gaathegalu innoo hommali..namage muda needali...olleya nenapugalannu vastava kalakke tandu namma moreyalli nagu tantaddakke dhanyavadagalu

    ReplyDelete
  3. Hello Mam, All the parts so far has brought lot of smiles and memories of people and their childhood respectively. Will be eagerly looking forward to read many more.

    Reg
    Vijay

    ReplyDelete