Sunday, February 12, 2017

                            ಪುಟ್ಟಿಯ  ಬಾಲ್ಯ 

      ಪುಟ್ಟಿಯ ಹಣೆ ತೂತಾಯ್ತು


       ಮನೆಯ ಒಳಗೆ ಬಂದ ಪುಟ್ಟಿಗೆ ತಲೆ ಬಾಚಿಕೊಳ್ಳುತ್ತಿದ್ದ ಚಿಕ್ಕಕ್ಕ ಕಾಣಿಸಿದಳು. ಅಕ್ಕನ ಹೊಳೆಯುವ  ಕೂದಲನ್ನು ನೋಡಿದಾಕ್ಷಣ ಅವಳಿಗಿದ್ದ ಒಂದೇ ಕೊರತೆಯ ನೆನಪಾಯಿತು. ಭುಜದಿಂದ ಕೆಳಗೆ ಇಳಿಯದಿದ್ದ ಅವಳ ಕೂದಲನ್ನೊಮ್ಮೆ
ಮುಟ್ಟಿ ನೋಡಿಕೊಂಡಳು. ತಕ್ಷಣ ಗುಡಿಯ ಕಡೆಗೆ ಹೊರಟಳು.ದಾರಿಯಲ್ಲಿ  ಹೊಂಗೆಯ ಮರದಡಿ ಗೆಳೆಯನೊಂದಿಗೆ  ನಿಂತಿದ್ದ ಅಣ್ಣ ಅವಳನ್ನು ನೋಡಲಿಲ್ಲ. ಗಣೇಶನ ಗುಡಿಯ ಜಗುಲಿಯ ಪಕ್ಕದಲ್ಲಿ ಚೆನ್ನಕ್ಕ ಎಲೆಯಡಿಕೆ ತಿನ್ನುತ್ತಾ ಕುಳಿತಿದ್ದಳು. ಪುಟ್ಟಿ ಗುಡಿಯ ಸುತ್ತ ಪ್ರದಕ್ಶಿಣೆ ಹೊರಟಳು.ನಾಲೆಯಿಂದ ಬಂದ ರಾಮಮ್ಮ "ಯಾವುದು ಮಗ" ಎಂದಳು. " ಇದಾ ನಮ್ಮ ಚಿಕ್ಕಯ್ನೋರ ಮಗಳು ಪುಟ್ಟಿ. ದಿನಾ ಗುಡಿಗೆ ಬಂದು ಉದ್ದ ಕೂದಲು ಬೆಳೀಲಿ ಅಂತ ಕೇಳ್ಕೊಳತ್ತೆ". ಚೆನ್ನಕ್ಕ ಉತ್ತರಿಸಿದಳು.
"ಓ ಗೊತ್ತು ಬಿಡು. ಮೊನ್ನೆ ಅವರಪ್ಪನ ಜೊತೆ ಗದ್ದೆಗೆ ಬಂದಿತ್ತು. ನಾವೆಲ್ಲಾ ಹಾಡೇಳ್ತಾ ನಾಟಿ ಮಾಡ್ತಿದ್ರೆ, ನೋಡ್ತಾ ನಿಂತಿತ್ತು.
ಅಯ್ನೋರು ನೋಡು ಅವರೆಲ್ಲಾ ಎಷ್ಟು ಕಷ್ಟ ಪಟ್ಟು ಕೆಲಸ ಮಾಡ್ತಾರೆ. ಎಂದರೆ ನಾನೂ ಮಾಡ್ತೀನಿ ಅಂತು .ನಿಂಗಾಗಲ್ಲ ಹೋಗು ಎಂದರೂ ಕೇಳಲಿಲ್ಲ. ಅಯ್ನೋರು ಒಂದು ರೂಪಾಯಿ ಕೊಡ್ತೀನಿ ನಾಟಿ ಮಾಡು ನೋಡೋಣ ಅಂದ ಕೂಡಲೆ .ಗದ್ದೆಗೆ ಇಳಿದು ನಾಟಿ ಮಾಡಿ ಒಂದು ರುಪಾಯಿ ವಸೂಲ್ಮಾಡ್ಕೊಂಡು ಹೋಯ್ತು."
    ಪ್ರದಕ್ಷಿಣೆ  ಮುಗಿಸಿ, ಉದ್ದ ಕೂದಲಿನ ಬೇಡಿಕೆಯಿಟ್ಟು ಬಂದ ಪುಟ್ಟಿ , ಹಣತೆ ಇಡಲು ಹಾಕಿದ್ದ ಮರದ ಪಟ್ಟಿ ನೋಡಿದಳು.
ಜಗಲಿಯ ಮೇಲೆ ನಿಂತು, ಪಟ್ಟಿ ಹಿಡಿದು ನೇತಾಡಿದಳು . ಅವಳ  ಭಾರಕ್ಕೆ ಪಟ್ಟಿ ಮುರಿಯಿತು. ನೆಲದಲ್ಲಿದ್ದ ಚೂಪಾದ ಕಲ್ಲು
ಹಣೆಗೆ ಚುಚ್ಚಿ ರಕ್ತ ಸೋರಿತು.ಪುಟ್ಟಿಯ ಅಳು ಕೇಳಿದ ಚೆನ್ನಕ್ಕ "ಮಗ ಬಿತ್ತು" ಎಂದು ಕೂಗಿದಳು. ಅಣ್ಣ ಮನೆಗೆ ಹೋಗಿಯಾಗಿತ್ತು.
ಅಲ್ಲೇ ಇದ್ದ ಅಣ್ಣನ ಗೆಳೆಯ ಓಡಿ ಬಂದು ಪುಟ್ಟಿಯನ್ನೆತ್ತಿ ಅವನ ಸೈಕಲ್ಲಲ್ಲಿ ಕೂರಿಸಿಕೊಂಡು ಪಕ್ಕದ ಊರಿನ ಡಾಕ್ಟರ್ ಬಳಿ
ಕರೆದೊಯ್ದ . ಡಾಕ್ಟರರು ಹೊಲಿಗೆ ಹಾಕಿದ ಮೇಲೆ, ಮನೆಗೆ ಕರೆತಂದಿದ್ದ. ಹಣೆಗೆ ಪಟ್ಟಿ ಕಟ್ಟಿಕೊಂಡು ಬಿಸ್ಕೆಟ್ ತಿನ್ನುತ್ತಾ ಬಂದ
ಪುಟ್ಟಿಯನ್ನು ನೋಡಿದ ಮನೆಯವರಿಗೆಲ್ಲಾ ಗಾಬರಿ. ಅಣ್ಣನ ಗೆಳೆಯ ಹಣೆಗೆ ತೂತಾಗಿ ಮೂಳೆ ಕಾಣುತ್ತಿದ್ದ ವಿಚಾರ ಕೇಳಿದಾಗಲಂತೂ ಅಮ್ಮನಿಗೆ ದಿಗಿಲಾಗಿತ್ತು.
"ರತ್ನಾ ಟೀ ಕೊಡ್ತೀಯಾ" ಯಜಮಾನರ ಧ್ವನಿ
 "ಮಾವಾ ಅತ್ತೆ ಮಲಗಿದ್ದಾರೆ, ನಾನೇ ಮಾಡ್ಕೊಡ್ತೀನಿ " ಸೊಸೆಯ ಧ್ವನಿ.
"ಅವಳು ನಿದ್ದೆ ಮಾದ್ತಿರಲ್ಲ,  ಅವಳ ಚಿಕ್ಕ ವಯಸ್ಸಿನ ಘಟನೆಯೆಲ್ಲಾ ನೆನಪಿಸ್ಕೊತಾ ಇರ್ತಾಳೆ" ಯಜಮಾನರ ಉಲಿ.
ರತ್ನ ಟೀ ಮಾಡಲು ಎದ್ದಳು.

No comments:

Post a Comment