Friday, February 15, 2019

ಮನೋಲಹರಿ--ಮನಸ್ಸಿಗೆ ಬಂದಿದ್ದೆಲ್ಲಾ ಪೀಠಿಕೆ ನಾನು ಕೆಲಸ ಬಿಟ್ಟೆ. ಏನಾದರೂ ಬರೀಬೇಕು. ಯಾಕೆ ಬರೀಬೇಕು:-ಪ್ರಶ್ನೆ. ಕೈಕಾಲು ಆಡಿಸ್ದೇ ಇರಕ್ಕೆ ನೆವ---ಮಗನ ಉವಾಚ ಸ್ವಲ್ಪ ಪ್ರತಿಭೆ ಇದೆ-----ಅಕ್ಕನ ಮಗಳು ಟೈಮ್ ಪಾಸ್ ಆಗುತ್ತೆ------ ಅಕ್ಕನ ಇನ್ನೊಬ್ಬ ಮಗಳು ಏನಾದರೂ ಮಾಡ್ಕೊ ಸಧ್ಯ ನನ್ನ ತಲೆ ತಿಂದೇ ಇದ್ದರೆ ಸರಿ----ಯಜಮಾನರ ಸ್ವಗತ. ಯಾವ ವಿಷಯದ ಮೇಲೆ ಬರೆಯೋದು? ಭೂಮಿಯಾಗಸದ ಮಧ್ಯದ ಯಾವುದೇ ವಿಚಾರವಾದರೂ ಸರಿ. ಕಂಡಿದ್ದು, ಕೇಳಿದ್ದು, ನೋಡಿದ್ದು ಅಥವಾ ಇದಾವುದೂ ಅಲ್ಲದ ಬರೀ ಕಲ್ಪನೆ. ಓದುವವರು? ನಾನು ಶ್ರೀ ಜಿ ಎಸ್ ಶಿವರುದ್ರಪ್ಪನವರನ್ನು ನೆನೆಯುತ್ತಾ ಬರೆಯುವುದು ಅನಿವಾರ್ಯ ಕರ್ಮ ನನಗೆ. ಯಾರು ಕಣ್ಮುಚ್ಚಿದ್ದರೂ ----ಅಯ್ಯಯ್ಯೋ ಇದು ಬೇರೆನೇ ಅರ್ಥ ಬರುತ್ತೆ. ಸಾರಿ. ಎಲ್ಲರೂ ದಯವಿಟ್ಟು ಓದಿ. ಎಲ್ಲಿ ಬರೆಯೋದು? ಇನ್ನೆಲ್ಲಿ ನನ್ನ ಬ್ಲಾಗಲ್ಲಿ. ನಿಮಗೆ ಗೊತ್ತಾ ನಾವೆಲ್ಲ ಚಿಕ್ಕವರಾಗಿರುವಾಗ ಸಹ ಬ್ಲಾಗ್ ಇತ್ತು. ಎಲ್ಲರ ಮನೆಯ ಗೋಡೆಗೆ ನೆಲದಿಂದ ಸುಮಾರು ಎರಡಡಿಯ ಎತ್ತರದವರೆಗೆ ರೆಡ್ ಆಕ್ಸೈಡ್ ಬಳಿದಿರ್ತಾ ಇದ್ದರು. ಅದೇ ನಮ್ಮ ಬ್ಲಾಗ್ ಅದನ್ನು ಮೇಜುಕಟ್ಟು ಅಂತಾ ಇದ್ದರು.ಅದರ ಮೇಲೆ ನಮ್ಮ ಪಾಠ, ಕೆಟ್ಟದಾಗಿ ಬರೆದ ಚಿತ್ರಗಳು, ಹೊಸದಾಗಿ ಕಲಿತ ರಂಗೋಲಿ, ಮಗ್ಗಿ ಎಲ್ಲಾ ಇರ್ತಿತ್ತು. ಮನೆಗೆ ಬಂದವರಿಗೆಲ್ಲಾ ನಮ್ಮ ಜಾಣತನ (ದಡ್ಡತನ)ದ ಪ್ರದರ್ಶನವಾಗುತ್ತಿತ್ತು. ನಾವು ಹಳೆಯದಾದ ವಠಾರದ ಮನೆಯಲ್ಲಿ ವಾಸವಿದ್ದರಿಂದ ನನ್ನ ಮಗನಿಗೂ ಈ ಭಾಗ್ಯಇತ್ತು. ಒಂದು ಉಗಾದಿ ಹಬ್ಬದಲ್ಲಿ "ಹ್ಯಾಪಿ ಉಗಾದಿ ಟು ಮಾಮ" ಅಂತ ಬರೆದು , ಫೋನ್ ಮಾಡಿ , ಬಂದು ಓದ್ಕೊಂಡ್ ಹೋಗಿ ಅಂತ ಹೇಳಿದ್ದ.. ಮಾಮ ಬರಲೇ ಇಲ್ಲ. ಮನಸ್ಸೇ ಹೀಗೆ ಎಲ್ಲಿಂದ ಎಲ್ಲಿಗೋ ಅದರ ಪಯಣ.
ನಮ್ಮ ಎದುರು ಮನೆಯಲ್ಲಿ ಒಬ್ಬರು ಇದ್ದರು. ಅವರು ಮಾತಾಡುವಾಗ ಯಾವುದಾದರೂ ಸ್ವಾರಸ್ಯಕರ ವಿಚಾರ ಬಂದರೆ, ಇದು ನಮ್ಮ ಇಂದಿನ ಊಟದ ಸಮಯದ ಟಾಪಿಕ್ ಅಂತಿದ್ದರು. ಇವತ್ತಿನ ಟಾಪಿಕ್---ಟಿವಿ ಟಿವಿಯ ಎಷ್ಟೊಂದು ನೆನಪುಗಳು ಯಾವುದು ಬರೆಯೋದು? ಯಾವುದು ಬಿಡೋದು ಗೊತ್ತಾಗಲ್ಲ? ಟಿವಿ ಮೊದಲಿಗೆ ಬಂದಾಗ ನಮ್ಮನೆಯಲ್ಲಿ ಟಿವಿ ಇರಲಿಲ್ಲ. ಬೆಂಗಳೂರು ದೂರದರ್ನಶದಲ್ಲಿ ಎರಡನೆಯ ವಾರ ಹಾಕಿದ್ದ 'ಕಿಲಾಡಿ ಜೋಡಿ' ಸಿನಿಮಾ ಸಂಬಂಧಿಕರ ಮನೆಯಲ್ಲಿ ನೋಡಿದ ನೆನೆಪು. ಎದುರು ಮನೆಯಲ್ಲಿ ಅಕ್ಕನ ಮಗನ ಜೊತೆ ಯಾವುದೋ ಹಿಂದಿ ಸಿನೆಮಾ ನೋಡುವಾಗ ಅಮ್ಮ ಕರೆದರು. ಹೋಗುವಾಗ ಟಿವಿ ಹತ್ರ ಹೋಗಬೇಡಾ ಅಂತ ಅಕ್ಕನ ಮಗ ಕಿರುಚಿದ. ಟಿವಿಯಲ್ಲಿ ಒಬ್ಬ ಎಲ್ಲರನ್ನು ಈಜುಕೊಳಕ್ಕೆ ದಬ್ಬುತ್ತಿದ್ದ. ನನ್ನನ್ನೂ ಎತ್ತಿ ಬಿಸಾಕಬಹುದೆಂದು ಅವನ ಭಯ. ಯಾವುದೋ ಸಿನಿಮಾವೊಂದರಲ್ಲಿ ರೈಲಿನ ಮೇಲಿನ ಬರ್ತ್ ನಲ್ಲಿ ಕುಳಿತು ವಕ್ರ ವಕ್ರ ಮುಖ ಮಾಡುತ್ತಾ, ಅಕ್ಕನ ಪುಟ್ಟ ಮಕ್ಕಳಾದಿಯಾಗಿ ಎಲ್ಲರನ್ನೂ ರಂಜಿಸಿದ್ದ ಶಮ್ಮಿ ಕಪೂರ್ ಸತ್ತಾಗ ಬಿಕ್ಕಿ ಬಿಕ್ಕಿ ಅಳುವಷ್ಟು ಆಪ್ತನಾಗಿಬಿಟ್ಟಿದ್ದ. ಆಗಿನ ಮುಖ್ಯ ಆಕರ್ಷಣೆ ಚಿತ್ರಮಂಜರಿ.. ಆಗ ನಡೆದ ಏಶಿಯಾಡ್ , ನಮ್ಮ ಆಟಗಾರರು ಪದಕ ಗೆದ್ದು ಜನಗಣಮನ ಬರುವಾಗ ಆಗುತ್ತಿದ್ದ ಹೆಮ್ಮೆ. ಎಲ್ಲ ಸವಿಸವಿ ನೆನಪು. ಆ ವರ್ಷ ಜಪಾನಿನ ಮೈಕೊ ಮೊರಿಯ ಎಂಬ ಹುಡುಗಿ ಜಿಮ್ನಾಸ್ಟಿಕ್ ನಲ್ಲಿ ಹಲವಾರು ಪದಕ ಗೆದ್ದಿದ್ದಳು. ಎದುರು ಮನೆಯವರು ಅದನ್ನು ನೋಡಿ ತಮ್ಮ ನಾಯಿಯನ್ನು ನನ್ನ ಮೈಕೊ ಮೊರಿಯಾ ಎಂದು ಮುದ್ದಾಡಿದ್ದು ಇನ್ನೂ ನೆನಪಿದೆ. ( ಇನ್ನೊಂದು ಎದುರು ಮನೆಯ ಮಗು ಆ ದಂಪತಿಗಳನ್ನು ನಾಯಿದು ಪಪ್ಪ ನಾಯಿದು ಅಮ್ಮ ಅಂತಿದ್ದ). ನಮ್ಮನೆಗೆ ಟಿವಿ ಬಂದ ನಂತರ ನೋಡಿದ ತಮಸ್, ಹಮ್ ಲೋಗ್, ತಸವೀರ್ ಕಿ ದೂಸರಾ ರುಖ್ ಭಟ್ಟಿಯವರ ವಿಡಂಬನಾತ್ಮಕ ಫ್ಲಾಪ್ ಶೋ. ಭಾನುವಾರದ ಬೆಳಗಿನ ಕಾರ್ಟೂನ್ಸ್, ರಾಮಾಯಣ, ಮಹಾಭಾರತ,ಆಗ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್, ಅದರಲ್ಲಿ ಬರುತ್ತಿದ್ದ ಕನ್ನಡದ ಕಲಾವಿದರು. ಆರ್ ಕೆ ಲಕ್ಷ್ಮಣ್ ಅವರ ಚಿತ್ರಗಳು ಅದರ ತಾನಾನತನನ, ಮುದ್ದು ಸ್ವಾಮಿ ಮಂಜುನಾಥ್ ಜಂಭದ ರೋಹಿತ್(ಶ್ರೀನಾಥ್ ಮಗ) ಎಲ್ಲಾ ಎಷ್ಟು ಹತ್ತಿರ. ಅಷ್ಟೇ ಹತ್ತಿರವಾದ ಬಾನದಾರಿಯಲ್ಲಿ ಸೂರ್ಯ ಜಾರಿಹೋದ ಎಂದು ಹಾಡುತ್ತಾ ಬಂದ ಮುಗ್ಧ ಪುನೀತ್ (ಆಗ ಲೋಹಿತ್),ಮಿಮಿಕ್ರಿಯಿಂದ ಮೆಚ್ಚುಗೆ ಪಡೆದ ಚುರುಕು ಆನಂದ್. ಇತ್ತೀಚೆಗೆ ನಮ್ಮನ್ನು ರಂಜಿಸಿದ ಬಾಲನಟರಿಬ್ಬರಲ್ಲಿ ಒಂದು ಮಗು ದೆವ್ವ ಆಗಿ ಅವರಮ್ಮನಿಗೇ ಕಾಟ ಕೊಡ್ತಿದೆ. ಇನ್ನೊಂದು ಸಂಚು ಮಾಡಿ ತೀರ್ಥದಲ್ಲಿ ಔ಼ಷಧಿ ಬೆರೆಸಿ ತನ್ನ ಸಹಪಾಟಿಯನ್ನು ಮೂಟೆಕಟ್ಟಿ ಹಳ್ಳದಲ್ಲಿ ಎಸೆದಿದೆ. ಮಕ್ಕಳಲ್ಲಿ ಈ ಮಟ್ಟದ ಕ್ರೌರ್ಯ ಬೇಕಾ? (ದೊಡ್ಡವರಿಗೂ ಬೇಡ ಅದು ಬೇರೆ ಮಾತು) ಕೆಲವು ದಿನಗಳ ಹಿಂದೆ ಒಂದು ದೃಶ್ಯದಲ್ಲಿ ಶ್ರೀನಿವಾಸ್ ಪ್ರಭುರವರ ನಟನೆ ಹೇಗಿತ್ತೆಂದರೆ, ಅವರ ಕ್ರೌರ್ಯ ನೋಡಿ ನಾನು ಬೆಚ್ಚಿ ಹಿಂದೆ ಸರಿದಿದ್ದೆ. ಅದು ಅವರ ನಟನಾ ಸಾಮರ್ಥ್ಯ.ಆದರೆ ಮಕ್ಕಳಲ್ಲಿ? ಈಗಿನ ಹೆಚ್ಚಿನ ಸೀರಿಯಲ್ ಗಳಲ್ಲಿ ನ ಸಾಮಾನ್ಯ ಅಂಶಗಳು. ನಾನು ಪ್ರೊಮೊಗಳನ್ನು ನೋಡಿ ಅರ್ಥ ಮಾಡಿಕೊಂಡಿದ್ದು ತಪ್ಪಿದ್ದರೆ ಕ್ಷಮಿಸಿ. ಹೀರೋಗಳು ಸ್ವಲ್ಪ ಗಡ್ಡ ಬಿಟ್ಟದಾರೆ . ಭಾರಿ ಶ್ರೀಮಂತರು ತಾಯಿಗೆ ತಕ್ಕ ಮಗ. ಅಮ್ಮ ಅಥವಾ ಅಜ್ಜಿಯರದೇ ದರ್ಬಾರ್. ಪೆಕರು ಪೆಕರಾದ ನಾಮಕಾವಾಸ್ಥೆ ಅಪ್ಪ(ತಾತ) ಎಣ್ಣೆ ಸುರಿಯಲು, ಸುಲಭವಾಗಿ ಜಾರಿ ಬೀಳಲು ಅನುಕೂಲವಾದ ಮೆಟ್ಟಿಲುಗಳು. ತಂತ್ರ ಮಾಡುವ ಸೋದರತ್ತೆಯರು.( ನಮ್ಮಂಥ ಪಾಮರರ ಸೋದರತ್ತೆಯರು ಸದಾ ಪ್ರೀತಿ ಹಂಚುವವರು ಸಧ್ಯ)
ಮನೆಯಲ್ಲೇ ಯಾವಾಗಲೂ ರೆಡಿಯಿರುವ ವಿಷದ ಇಂಜೆಕ್ಷನ್/ಮತ್ತು ಬರೆಸುವ ಔಷಧಿ ಮೊಬೈಲ್ ನಲ್ಲಿ ಸೇವಾಗಿರುವ ರೌಡಿಗಳ ನಂಬರ್ ಫೋನ್ ಮಾಡಿದರೆ ಸಾಕು, ಅಮ್ಮಾವ್ರೆ ಅಂಥ ಹೆದರಿ ಓಡಿ ಬರುವ ರೌಡಿಗಳು (ರೌಡಿಗಳ ಸಂಘದವರು- ಅಂಥದೊಂದಿದ್ದರೆ ಖಂಡಿತ ಈ ಅಪಮಾನವನ್ನು ಪ್ರತಿಭಟಿಸಬೇಕು.) ಸೀರಿಯಲ್ ಹೀರೋಯಿನ್ ಗಳು ಹಳ್ಳಿಯವರು, ಭಾರಿ ಧೈರ್ಯಶಾಲಿಗಳು ಸಕಲ ಕಲಾ ವಲ್ಲಭೆಯರು ಎಲ್ಲರಿಗೂ ರುಚಿಯಾಗಿ ಅಡುಗೆ ಮಾಡಲು ಗೊತ್ತು (ಪಾಪ ಮಗಳು ಜಾನಕಿಯನ್ನು ಬಿಟ್ಟು ಅವಳು ಮೈಸೂರ್ ಪಾಕ್ ಮಾಡಿದ್ರೆ ಕಲ್ಲು ಥರಾ ಇರತ್ತೆ), ಎಲ್ಲರ ಹೆಸರೂ ಪೌರಾಣಿಕ. ಎಲ್ಲ ಮನೆಯಲ್ಲೂ ಹಬ್ಬಗಳು ತುಂಬಾ ಚೆನ್ನಾಗಿ ಮಾಡ್ತಾರೆ. ಎಲ್ಲಾ ಇಜ್ಜೋಡು. ಮದುವೆ ಮಂಟಪದಲ್ಲಿ ವರ /ವಧು ಬದಲಾಗಿ ಆದ ಮದುವೇಗಳೇ ಹೆಚ್ಚು.. ಮದುವೆಯೇನೋ ಆಗಿದೆ, ಪಾಪ ಯಾರ ಶೃಂಗಾರದ ಹೊಂಗೆ ಮರವೂ ಹೂ ಬಿಟ್ಟಿಲ್ಲ ( ತಮಾಶೆ ಅಂದರೆ ಹೀರೋ ಒಬ್ಬನ ಅಪ್ಪ - ಅಮ್ಮನ ಶೃಂಗಾರದ ಹೊಂಗೆ ಮರ ಹೂ ಬಿಟ್ಟು. ಹಣ್ಣಾಗುವ ಸ್ಥಿತಿಯಲ್ಲಿದೆ.) ಅರ್ಥ ಆಯ್ತಲ್ವಾ ಇನ್ನು ರಿಯಾಲಿಟಿ ಶೋಗಳು ನಿರೂಪಕ/ನಿರೂಪಕಿ ಯಾರಾದರೊಬ್ಬ ಜಡ್ಜ್ ಗೆ ಲೈನ್ ಹೊಡೀಲೇಬೇಕು (ಮದುವೆಯಾಗಿದ್ದರೂ) ಜಡ್ಜ್ ಗಳು ತಮ್ಮಲ್ಲಿಲ್ಲದ ಪ್ರತಿಭೆಯನ್ನು ತೋರಿಸಬೇಕು ಸ್ಪರ್ಧಿಗಳನ್ನು ಕೀಟಲೆ ಮಾಡಬೇಕು. ಮಿತಿ ಮೀರಿದಾಗ ಹಂಗಿಸುವ ಮಟ್ಟಕ್ಕೆ ಹೋಗುತ್ತದೆ. ಆಗೆಲ್ಲಾ ಅವರೇ ಸ್ಪರ್ಧಿಗಳ ಹೆಸರು ಹೇಳಿ, ಅವರು ಹಾಡಿದಾಗ ಹೊಗಳಿ, ತಪ್ಪಿದ್ದರೆ ತಿದ್ದಿ , ಮಕ್ಕಳು ಸ್ವಲ್ಪ ಮಾದಕತೆಯಿರುವ ಹಾಡು ಹಾಡಿದರೆ ಪೋ಼ಷಕರು ಹಾಡಿನ ಆಯ್ಕೆಯಲ್ಲಿ ಎಚ್ಚರವಹಿಸಲು ಹೇಳುತ್ತಿದ್ದ, ಕಾರ್ಯಕ್ರಮ ಸುಸಂಪನ್ನವಾಯಿತು(ಆ ಪದ ನಾನು ಕೇಳಿರಲೇ ಇಲ್ಲ) ಎಂದು ಹೇಳುತ್ತಿದ್ದ ಸುಸಂಸ್ಕೃತ ಎಸ್ಪಿಬಿ ನೆನಪಾಗುತ್ತಾರೆ.ಎದೆ ತುಂಬಿ ಬರುತ್ತದೆ. ಟಿವಿ ನೋಡುತ್ತಾ ನಮ್ಮನ್ನು ಮೈಮರೆಯುವಂತೆ ಮಾಡಿದ, ಮಾಡುತ್ತಿರುವ ಎಲ್ಲಾ ಹಿರಿ ಕಿರಿಯ ಪ್ರತಿಭೆಗಳಿಗೆ ನನ್ನ ನಮಸ್ಕಾರ. ಕೊನೆಯದಾಗಿ ಇತ್ತೀಚೆಗೆ ನನ್ನನ್ನು ತುಂಬಾ ನಗಿಸಿದ ಒಂದು ಮಾತು. ಸಿಎಸ್ ಪಿ:-- ಶ್ಯಾಮಲಾ ಬೆಳಗ್ಗೇನೆ ಈ ನಿರಂಜನ್ ಬಂದಿದ್ದ ಹಲ್ ಕಿರ್ಕೊಂಡು. ಎಲ್ಲಾರಿಗೂ 32 ಹಲ್ಲು ಇದ್ದರೆ ನಿರಂಜನ್ ಗೆ ಐವತ್ತೋ ನೂರೋ ಇರಬೇಕು. ಉಷಾ ರಮೇಶ್