Saturday, January 24, 2009

ವನಸುಮ

ವನಸುಮದೊಲೆನ್ನ ಜೀ
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ-ಹೇ ದೇವ

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎ
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನಳಿದು
ವಿಪುಲಾಶ್ರಯವನೀವ
ಸುಫಲ ಸುಮ ಭರಿತ ಪಾ
ದಪದಂತೆ ನೈಜಮಾದೊಳ್ಪಿಂ ಬಾಳ್ವವೊಲು
ಡಿ.ವಿ.ಜಿ.


ಇದು ನನಗಿಷ್ಟವಾದ ಡಿ.ವಿ.ಜಿ. ಯವರ ಪದ್ಯ..ಕಾಡುಮಲ್ಲಿಗೆಯಂತೆ, ಸುವಾಸನೆಯನ್ನು ಮಾತ್ರ ಆನಂದಿಸುವಂತೆ ಜಗಕ್ಕೆ ಕೊಟ್ಟು ತಾನು ಮರೆಯಲ್ಲಿರಬೇಕೆನ್ನುವುದು ಕವಿತೆಯ ಆಶಯ.ಇದನ್ನು ನನ್ನ ಬ್ಲಾಗಿನ ಅಡಿಬರಹವನ್ನಾಗಿಸಿದ್ದೇನೆ.

Friday, January 9, 2009

ಆಶಾವಾದ?

ಒಬ್ಬಳೇ ನಡೆಯುತ್ತಿದ್ದೆ. ನಡೆಯುತ್ತ ನಡೆಯುತ್ತ ನಡೆಯುತ್ತಲೇ ಇದ್ದೆ.ದೂರದಲ್ಲಿ ಬೆಳಕಿನ ಗೊಂಚಲು ಕಾಣಿಸಿತು.ಓಡಿ ಓಡಿ ಹತ್ತಿರ ಬಂದೆ. ದಿನವೂ ನನ್ನ ಕನಸಿನಲ್ಲಿ ಮೂಡಿ ಮಾಯವಾಗುತ್ತಿದ್ದ ಅರಮನೆ ಕಣ್ಣೆದುರೇ ನಿಂತಿತ್ತು. ಅದೇ ಭವ್ಯತೆ. ಬೆಳಕಿನರಮನೆ ಕೈಬೀಸಿ ಕರೆಯಿತು. ಮುಂದಡಿಯಿಟ್ಟೆ , ಮಹಾದ್ವಾರ ತಾನೇ ತಾನಾಗಿ ತೆರೆಯಿತು. ಆವರಣವನ್ನು ಪ್ರವೇಶಿಸಿದೆ.ಸುಂದರ ತೋಟ ಹಣತೆಯ ಬೆಳಕಿನಲ್ಲಿ ಹೊಳೆಯುತ್ತಿತ್ತು.ಆ ಗುಲಾಬಿ, ಮಲ್ಲಿಗೆ, ಸೇವಂತಿಗೆಗಳ ನಡುವೆ ಓಲಾಡುತ್ತಿದ್ದ ನನ್ನ ಕೈಯಲ್ಲಿ ಗಡಿಯಾರವಿರಲಿಲ್ಲ.ಆದರೆ ಹೂವಿನ ತೂಗಾಟಕ್ಕೆ ಎಲೆಗಳ ಬಳುಕಾಟಕ್ಕೆ ಸಂಗೀತ ನೀಡುವ ಬಳೆಗಳಿದ್ದವು.

ದಿನ,ವಾರ ತಿಂಗಳುಗಳುರುಳಿದವು.ಒಂದೊಂದೇ ಹೆಜ್ಜೆ ಇಡುತ್ತಾ, ಪ್ರತಿಯೊಂದು ಹೂವಿನ ಸೊಬಗನ್ನೂ ಮನದಲ್ಲಿ ತುಂಬಿಕೊಳುತಾ,ನಿಧಾನವಾಗಿ ಬಲು ನಿಧಾನವಾಗಿ ಮನೆಯನ್ನು ಪ್ರವೇಶಿಸಿದೆ. ಒಳಗೆಲ್ಲಾ ಕತ್ತಲೆ.ಆದರೆ ಸುಖದ ಮತ್ತಿನಲ್ಲಿದ್ದ ನನಗೆ ಅದರ ಪರಿವೆಯೇ ಇರಲಿಲ್ಲ. ಹಣತೆಯ ಬೆಳಕಿನ ಕಿರಣವೊಂದು ತೂರಿ ಬಂದು ಮೆತ್ತನೆಯ ಹಾಸಿಗೆಯ ದರ್ಶನ ಮಾಡಿಸಿತು.ನಾನು ಹಾಯಾಗಿ ನಿದ್ರಿಸಿದೆ.ಕನಸಿನಲ್ಲೆಲ್ಲಾ ಹೂಗಳು ನರ್ತನ ಮಾಡಿದವು-ಹಣತೆಯ ಬೆಳಕಿನಲ್ಲಿ. ಆದರೆ ಹಟಾತ್ತನೆ ಆ ಬೆಳಕು ಆರಿತು.ಹೂಗಳ ನಾಟ್ಯ ನಿಂತಿತು.

ನಾನು ಎದ್ದೆ .ಮೈಯಡಿಗೆ ತಣ್ಣನೆಯ ನೆಲ ಕೊರೆಯುತ್ತಿತ್ತು.ಸುಪ್ಪತ್ತಿಗೆ ಮಾಯವಾಗಿತ್ತು.ಇಲ್ಲ, ಇದು ನನ್ನ ಕನಸಿನರಮನೆಯಲ್ಲ.
ಗೋಡೆಗೆ ತಿಳಿ ಗುಲಾಬಿ ಬಣ್ಣದ ಬದಲು ರಕ್ತ ಕೆಂಪಿನ ಬಣ್ಣ. ಶುಭ್ರವಾಗಿ ಹೊಳೆಯುತ್ತಿದ್ದ ನೆಲದ ಬದಲು ಧೂಳು ತುಂಬಿ ಅಲ್ಲಲ್ಲಿ ಮಸುಕಾಗಿ, ಕಿತ್ತುಹೋಗಿರುವ ನೆಲ. ಇಲ್ಲ-ಇದು ನಾನು ಹುಡುಕಿ ಬಂದ ಸ್ಥಳವಲ್ಲ. ಈ ಧೂಳು ತುಂಬಿದ ಪರಿಸರಕ್ಕೆ ನನ್ನ ಶುಭ್ರ ಉಡುಗೆ ಒಪ್ಪುತ್ತಿಲ್ಲ. ಇಲ್ಲಿ ಏನೋ ತಪ್ಪಾಗಿದೆ. ತಪ್ಪಿಸಿಕೊಳ್ಳಲು ಓಡಿದೆ.ಆದರೆ ಎಲ್ಲ ಕಡೆಯೂ ಗೋಡೆ ಎದುರಾಯಿತು.ಇಲ್ಲ ಇನ್ನೊಂದು ಕ್ಷಣವೂ ಅಲ್ಲಿರಲಾರೆನೆಂದು ತಪ್ಪಿಸಿಕೊಳ್ಳಲು ಬಾಗಿಲು ಹುಡುಕಿದೆ. ಸಿಗಲಿಲ್ಲ.
ಇದೇನಿದು ಎಲ್ಲಿಂದಲೋ ಬೆಳಕಿನ ಕೋಲೊಂದು ನನ್ನ ಮುಂದೆ ಕುಣಿಯುತ್ತಿದೆ.ಎಲ್ಲಿಂದ ಬಂತಿದು? ಆ ಕೋಲನ್ನೇ ಅನುಸರಿಸಿ ನೋಡಿದೆ.ಮೇಲೆ ಆ ಮನೆಯ ಮಾಡಿನಲ್ಲಿ ಬೆಳಕಿಂಡಿ ಇದೆ. ಹೌದು ನಾನು ಅಲ್ಲಿಂದ ಪಾರಾಗಬಹುದು.ಏಣಿಗಾಗಿ ಹುಡುಕಿದೆ.ಆದರೆ ಸಿಕ್ಕಿದ್ದು ಒಂದು ಪೊರಕೆ, ಒರಸುವ ಬಟ್ಟೆ, ಒಂದು ಡಬ್ಬ ಬಣ್ಣ ಮತ್ತು ಕುಂಚ.
ಪೊರಕೆಯಿಂದ ಧೂಳನ್ನು ಗುಡಿಸಿದೆ. ಬಟ್ಟೆಯಿಂದ ಒರೆಸಿದೆ. ನೆಲ ಕನ್ನಡಿಯಂತಾಗದಿದ್ದರೂ ಅಡ್ಡಿಯಿಲ್ಲ ಎನ್ನಿಸಿತು. ಕುಂಚವನ್ನು ಬಣ್ಣದಲ್ಲಿ ಅದ್ದಿ ಏಣಿಯನ್ನು ಬಿಡಿಸತೊಡಗಿದೆ. ಒಂದರ ಮೇಲೊಂದು ಪದರ ಬಣ್ಣ ಬಳಿದು ಅದು ಗಟ್ಟಿಯಾದ ನಂತರ ಅದನ್ನು ಏರಿ ಬೆಳಕಿಂಡಿಯಿಂದ ಬೆಳಕಿನ ಪ್ರಪಂಚಕ್ಕೆ ಕಾಲಿಡುತ್ತೇನೆ.
ನಾನು ಒಬ್ಬಂಟಿ. ನನಗೆ batman supermanಗಳ ಸಹಾಯವಿಲ್ಲ. ಆದರೂ ನೂರು, ಸಾವಿರ, ಲಕ್ಷ , ಕೋಟಿ ವರ್ಷಗಳಾದರೂ ಸಹ ನಾನು ಹೊರಗೆ ಬಂದೇ ಬರುತ್ತೇನೆ. ಇದು ಸತ್ಯ.

Thursday, January 8, 2009

ಯಾರು ಕರೆದರು ನಿನ್ನ
ಓ ನನ್ನ ಅಕ್ಕ
ಮಗುವಿನ ನಗುವು ಬೇಕಾಗಲಿಲ್ಲವೆ
ತಂದೆ ತಾಯಿಯರ ನೆನಹು ಸುಳಿಯಲಿಲ್ಲವೆ
ಪತಿಯ ಸಾಮೀಪ್ಯ ಸಾಕಾಯಿತೆ
ಜೀವನದ ಪಯಣದ ನಿಲ್ದಾಣವು
ಮೊದಲು ಹತ್ತಿದವರಿಗಿಂತ ಬೇಗನೆ ಸಿಕ್ಕಿತೆ
ನಿನ್ನ ಬದುಕು ಬೇರೆಲ್ಲೊ ಚಿಗುರಿತೆ
ಹಳೆಯ ಬದುಕಿನ ನಾವು
ಹೊಸ ಬದುಕಿನ ಕನಸಿನಲ್ಲಿ ಕಾಣುವುದಿಲ್ಲವೆ
ಕಂಡು ಕಾಡುವುದಿಲ್ಲವೆ

ಅಗಲಿಕೆ

ಮನಸ್ಸಿನ ಓಟ ಎಷ್ಟು ವಿಚಿತ್ರ.ಭೂಮಿಯ ಮೇಲಿದ್ದದ್ದು ಒಂದೇ ಕ್ಷಣದಲ್ಲಿ ಆಕಾಶವನ್ನು ಮುಟ್ಟುತ್ತದೆ.ಅಷ್ಟೇ ಬೇಗ ಪಾತಾಳವನ್ನು ಸಹ
ತಲುಪುತ್ತದೆ.ಸಾವು ನೋವುಗಳು ಈ ಜೀವನದ ಅಂಗವೇನೋ ಹೌದು.ಆದರೂ ಆತ್ಮೀಯರ ಅಗಲಿಕೆ ಸಹಿಸಲಸಾಧ್ಯ.ಮತ್ತೆ ಯಾವುದೋ ಜನ್ಮದಲ್ಲಿ,ಯಾವುದೋ ಮುಹೂರ್ತದಲ್ಲಿ ನಾವು ಮತ್ತೆ ಸಂಧಿಸಿದರೂ ಸಹ ಅವರನ್ನು ಗುರುತಿಸಲು ಸಾಧ್ಯವೇ?

Monday, January 5, 2009

ಹೀಗೊಂದು ಸಂಭಾಷಣೆ

ದಿನಾಂಕ ೧-೧-೦೯ ಸಮಯ ರಾತ್ರಿ ಹತ್ತೂವರೆ
ಅಮ್ಮ: ರಜ ಮುಗಿದೇಹೋಯ್ತು ಒಂದು ದಿನಾನೂ ಓದಿಕೊಳ್ಳಲೇ ಇಲ್ಲ.
ಮಗ:ಅದು ಹೋದ್ವರ್ಷದ ವಿಷಯ ಮರೆತ್ಬಿಡಬೇಕು. ಹೊಸ ನೆನಪು ಇಟ್ಕೊಬೇಕು.
ಅಮ್ಮ: ಹಂಗಂದ್ರೇನೋ ನಾನು ಅಮ್ಮ ನೀನು ಮಗ ಅನ್ನೋದನ್ನೂ ಮರೀಬೇಕಾ
ಮಗ: ಅಯ್ಯೋ ಹಾಗಲ್ಲಮ್ಮ ನಾವು ಛೇಂಜ್ ಆಗ್ಬೇಕು.
ಅಮ್ಮ: ಸರಿ ಇನ್ನು ನಿನ್ನ ಮುದ್ಮಾಡೋದು ಬಿಟ್ಬಿಟ್ ಹೊಡಿಯಕ್ಕೆ ಶುರು ಮಾಡ್ತೀನಿ.
ಮಗ:ಅಲ್ಲಮ್ಮ ಹಳೆ ತರ್ಲೆ ಕೆಲ್ಸಗಳನ್ನೆಲ್ಲ ಬಿಟ್ಬಿಟ್ಟು ಹೊಸ ತರ್ಲೆಕೆಲ್ಸಗಳನ್ನ ಯೋಚಿಸ್ಬೇಕು. ನೀನೂ ತುಂಬಾ ತರ್ಲೆ ಕೆಲಸ
ಮಾಡಿದೀಯಾ ಹೋದ್ವರ್ಷ ಈ ವರ್ಷನಾದ್ರೂ ಒಳ್ಳೆಯವಳಾಗು.

ಪರಿಚಯ

ನಾನು ಉದ್ಯೋಗಸ್ಠ ಗೃಹಿಣಿ
ಯಾಕೆ ಪ್ರಯೋಗ ವಿಚಿತ್ರವಾಗಿದೆಯಾ?
ನಾವೂ ಗೃಹಿಣಿಯರು ಮಾಡೋಎಲ್ಲಾ ಕೆಲ್ಸಾನೂ ಮಾಡ್ತೀವ್ರಿ.ಮಧ್ಯಾಹ್ನದ ನಿದ್ದೆ ಒಂದು ಬಿಟ್ಟು