Tuesday, March 14, 2023

ನನ್ನ ಎಡವಟ್ಟು ಅವತ್ತು, ನನ್ನ ಗೆಳತಿ ರಮಾ ಕೆಲಸದ ನಿಮಿತ್ತ ತನ್ನ ಪರಿಚಯದ ಪ್ರಕಾಶಕರೊಬ್ಬರ ಕಾಂಟಾಕ್ಟ್ ನಂ ಕಳಿಸಿದ್ದಳು. ಅವರ ಹೆಸರು ಪರಮೇಶ್ವರ ಅಂತ ಇಟ್ಕೊಳೋಣ. ಆಗ ಮಗ ಮನೆಯಲ್ಲಿರಲಿಲ್ಲ. ನಾನೇ ಸೇವ್ ಮಾಡಿಕೊಳ್ಳಲು ಪ್ರಯತ್ನಿಸಿದೆ. ಯಶಸ್ವಿಯೂ ಆದೆ. ಹೆಮ್ಮೆಯಿಂದ ಬೀಗಿದೆ. ಮಾರನೆಯ ದಿನ ಕಾಲೇಜ್ ಗೆಳತಿಯರ ವಾಟ್ಸಪ್ ಗ್ರೂಪಲ್ಲಿ ಪರಮೇಶ್ವರ್ ಅವರಿಂದ ಎರಡು ಮೆಸೇಜ್. ಆ ಗ್ರೂಪ್ ಗೆ ರಮಾನೇ ಅಡ್ಮಿನ್. ಈ ಯಪ್ಪನ ನಂ ನಮ್ಮ ಗ್ರೂಪಲ್ಲಿ ಯಾಕೆ ಸೇರಿಸಿದ್ದಾಳೆ ಅಂತ ರಮಾನ ಚೆನ್ನಾಗಿ ಬೈಕೊಂಡೆ. ತಕ್ಷಣ ಅವಳಿಗೆ ಕರೆ ಮಾಡಿದೆ. ವ್ಯಾಪ್ತಿ ಪ್ರದೇಶದಲ್ಲಿ ಇಲ್ಲವೆಂಬ ಸಂದೇಶ ಬಂತು. ಸಂಜೆಗೆ ಮತ್ತೆ ಎರಡು ಪರಮೇಶ್ವರ್ ಕಳಿಸಿದ ಸಂದೇಶಗಳು ಗ್ರೂಪಲ್ಲಿ. ಪರಮೇಶ್ವರ್ ಹೆಸರು ಸೇರಿಸಿದ್ದಕ್ಕೆ ಬೇರೆ ಗೆಳತಿಯರ ಪ್ರತಿಕ್ರಿಯೆ ಇರಲಿಲ್ಲ. ಮತ್ತೆ ರಮಾಗೆ ಕರೆ ಮಾಡಿದೆ. ಅವಳು ಫೋನ್ ತೆಗೆದ ತಕ್ಷಣ ಚೆನ್ನಾಗಿ ಬೈದೆ. ತಾಳು ತಾಳು ಏನಾಗಿದೆಯೇ ನಿನಗೆ ಅಂದಳು ರಮಾ. ನಾನು ಪರಮೇಶ್ವರನ್ನ ನಮ್ಮ ಗ್ರೂಪ್ ಗೆ ಯಾಕೆ ಸೇರಿಸಿದ್ದೀಯ ಅಂತ ಜೋರು ಮಾಡಿದೆ. ಅವಳು ಇಲ್ಲ ಅಂದಳು. ನೋಡು ಎರಡು ಪೋಸ್ಟ್ ಇದೆ. ಅದರಲ್ಲಿ ಒಂದು ಹಕ್ಕಿಗಳದು ಅಂದೆ. ಅವಳು ಅದು ನಾನೇ ಕಳಿಸಿದ್ದು ಅಂದಳು. ನನ್ನ ಪೋನಿನಲ್ಲಿ ಪರಮೇಶ್ವರ್ ಅಂತ ಬಂದಿದೆ. ಅವಳ ಫೋನಲ್ಲಿ ಪರಮೇಶ್ವರ್ ಗ್ರೂಪಲ್ಲಿ ಇಲ್ಲ. ರಮಾ ಕಳಿಸಿದ ಮೆಸೇಜ್ ಪರಮೇಶ್ವರ್ ಹೆಸರಲ್ಲಿ ಹೇಗೆ ಬಂತು. ಚಿದಂಬರ ರಹಸ್ಯವಾಯಿತು. ಮಗ ಚೆಕ್ ಮಾಡಿದಾಗ ಗೊತ್ತಾಯ್ತು ರಮಾ ನಂಬರ್ ನ ವಾಟ್ಸಪ್ ನಲ್ಲಿ ಪರಮೇಶ್ವರ್ ಹೆಸರಲ್ಲಿ ಸೇವ್ ಮಾಡಿಬಿಟ್ಟಿದ್ದೆ.