Thursday, September 17, 2009

ಗಾದೆಮಾತು

ನಾನಾಗ ಪಿಯುಸಿ ಓದುತ್ತಿದ್ದೆ ಅನ್ಸುತ್ತೆ. ನನ್ನ ಅಕ್ಕನ ಮಕ್ಕಳೊಂದಿಗೆ ಕಾಂಪೌಂಡಲ್ಲಿ ಆಡ್ತಾ ಇದ್ದೆ. ಪಕ್ಕದ ಮನೆಯ ಹಿತ್ತಲಲ್ಲಿ ಬಾಳೆ ಗೊನೆ ಬಿಟ್ಟಿತ್ತು.ಅದನ್ನು ಕತ್ತರಿಸಲು ಕೆಲಸದವನು ಬಂದಿದ್ದ. ಗಿಡ ಕತ್ತರಿಸಲು ಹೋದಾಗ ಬೇಡ ಅಂದಿರಬೇಕು.ಆಗ ಅವನು ಹೇಳಿದ್ದು "ಗಾದೆ ಕೇಳಿಲ್ವಾ, ಬಾಳೆಗೆ ಒಂದೇ ಗೊನೆ. ಬಾಳೋರ್ಗೆ ಒಂದೇ ಮಾತು."ಎಂತಹ ಸುಂದರ ಗಾದೆ ಮಾತು.ಅದಕ್ಕೆ ಮುಂಚೆ ಬೇಕಾದಷ್ಟು ಗಾದೆಗಳನ್ನು ಕೇಳಿದ್ದೆ. ಆಮೇಲೂ ಕೇಳಿದೀನಿ. ಆದರೆ ಈ ಗಾದೆ ಮಾತ್ರ ನನ್ನನ್ನು ಯಾವಾಗಲೂ ಕಾಡ್ತಾನೆ ಇರುತ್ತೆ.ಬದುಕಿನಲ್ಲಿ,ನಮ್ಮ ಕೆಲಸದಲ್ಲಿ ,ನಮ್ಮ ಮಾತಿನಲ್ಲಿ ಬದ್ಧತೆಯಿರಬೇಕೆಂಬುದನ್ನು ಒಂದು ಸರಳ ಅರ್ಥಪೂರ್ಣ ವಾಕ್ಯದಲ್ಲಿ ಹೇಳಲಾಗಿದೆ.

ಗಾದೆಗಳು ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಿವೆ.ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಲ್ಲ -ಆನ್ನುವ ಗಾದೆ ಮಾಡ್ಬೇಕಾದ್ರೆ ನಮ್ಮ ಜನಪದರಿಗೆ ಎಂಥಹ ಆತ್ಮವಿಶ್ವಾಸ ಇದ್ದಿರಬೇಕು. ಆದಿಪ್ರಾಸ ಆಥವಾ ಆಂತ್ಯ ಪ್ರಾಸದಿಂದ ಒಡಗೂಡಿ ಬದುಕಿನ ಸಾರವೇ ಅಡಕವಾಗಿರುವ ಸುಂದರ ವಾಕ್ಯಗಳು ಗಾದೆಗಳು.

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ, ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ ಎಂಬಂಥ ಪದ್ಯಗಳ ಸಾಲುಗಳು ಸಹ ಗಾದೆಗಳಂತೆಯೇ ಉಪಯೋಗಿಸಲ್ಪಡುತ್ತಿವೆ.