Wednesday, April 19, 2017


ಬುದ್ಧ ಕಲಿಸಿದ ಪಾಠ


ಮಗುವಿನ ತಾಯಿ
 ಅತ್ತಳು
ಚೀರಿದಳು
ಬೇಡಿದಳು
ಪವಾಡ ಮಾಡಲಿಲ್ಲ ಬುದ್ಧ.
ಅವಳನ್ನು ತುಂಬು ಕರುಣೆಯಿಂದ ನೋಡಿ,
ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿ ಎದ್ದ.
ಸಿಗದ ವಸ್ತುವಿಗಾಗಿ ಅಲೆದಳು. ಅದು ಸಿಗುತ್ತಾ?
ಕೊನೆಗರಿವಾಯಿತು, ಹುಟ್ಟಿದ ಮೇಲೆ
ಸಾವೊಂದೆ ಖಚಿತ.
ಇರಬೇಕು ನಾವು ನಗುತ್ತಾ,ಅಳುತ್ತಾ
ಅಗಲಿದವರನ್ನು ನೆನೆಯುತ್ತಾ
ಕಣ್ಣು ಒದ್ದೆಯಾಗಿಸುತ್ತಾ

Saturday, April 15, 2017

                                                ಪುಟ್ಟಿಯ ಬಾಲ್ಯ

ಹಾವು ಹಾವು ಹಾವು

            ಆವತ್ತು ರಜಾದಿನ. ರತ್ನಳ ಮಕ್ಕಳೆಲ್ಲ ಮಗನ ಮುಂಜಿಯ ವಿಡಿಯೊ ನೋಡುತ್ತ ಕುಳಿತಿದ್ದರು.ಮುಂಜಿಯ  ದಿನದ ವಿಶೇಷಗಳನ್ನೆಲ್ಲ ನೆನಪಿಸಿಕೊಂಡು ಮಗ ಮುಂಜಿಯ ಹಿಂದಿನದಿನ ಉಪನಯನ ನಡೆದ  ತಾತನ ಮನೆಯ ಹಿತ್ತಿಲಲ್ಲಿ ಹಾವು
ಬಂದಿದ್ದ ವಿಚಾರ ಹೆಂಡತಿಗೆ ಹೇಳಿದ." ಹೌದಾ! ಆಮೇಲೆ?" ಸೊಸೆಯ ಪ್ರಶ್ನೆ. "ನಿಮ್ಮತ್ತೆ ನಾಗರಹಾವು ವಿಷ್ಣುವರ್ಧನ್ ತರ
ಹಾವನ್ನ್ ಎತ್ಕೊಂಡು ಹೋಗಿ ದೂರ ಬಿಟ್ಬಿಟ್ಟಳು."ಯಜಮಾನರ ತಮಾಶೆ.. " ಹೌದಾ?" ಸೊಸೆ ಚಿಕ್ಕ ಮಗಳನ್ನು ಕೇಳಿದಳು. "ಅವಳ್ಗೇನ್ ಗೊತ್ತು ಅವಳು ಆಗ ಹುಟ್ಟಿದ್ರೆ ತಾನೆ" ದೊಡ್ಡ ಮಗಳ ವಿವರಣೆ."ಅಮ್ಮ ಕೋಲಿಂದ ಹೆದರಿಸಿ ಓಡಿಸಿದರು." ಮಗ ನಡೆದದ್ದನ್ನ ಹೇಳಿದ." ನಿಮಗೆ ಭಯ ಆಗಲಿಲ್ವಾ?" ಸೊಸೆಯ ಪ್ರಶ್ನೆ. "ಭಯ ಯಾಕೆ ?ಅದಿನ್ನು ಪುಟ್ಟ ಮರಿ."ಉತ್ತರಿಸಿದ ರತ್ನಳ
ಮನ ಬಾಲ್ಯಕ್ಕೆ ಜಾರಿತು.
        
         ರಜಾದಿನ ಪುಟ್ಟಿ ಒಂದು ಹೊಸಾ ಅನುಭವ ಪಡೆಯಲು ಹೊರಟಿದ್ದಳು. ಸಹಪಾಠಿಯೊಬ್ಬ ಏಡಿ ಹಿಡಿಯಲು ಕಾಲುವೆ
ಬಳಿ ಹೋಗುತ್ತಿದ್ದ. ಪುಟ್ಟಿ ಅವನ ಹಿಂದೆ ಹೋಗಿದ್ದಳು. ಅವನು ಮೂರ್ನಾಕು ಏಡಿಗಳನ್ನು ಹಿಡಿದು ಚೀಲವೊಂದಕ್ಕೆ ತುಂಬಿದ್ದ.ಪುಟ್ಟಿಗೆ ಏಡಿಯನ್ನು ಮುಟ್ಟಬೇಕೆನಿಸಲಿಲ್ಲ.ಮತ್ತೆ ಇಬ್ಬರೂ ಕಾಲುವೆಯ ಮೆಟ್ಟಿಲ  ಮೇಲೆ ನಿಂತಿದ್ದರು.ಅಷ್ಟರಲ್ಲಿ ಮಿಡಿನಾಗರವೊಂದು ನೀರಲ್ಲಿ ತೇಲುತ್ತಾ ಬಂದಿತ್ತು.ಇಬ್ಬರೂ ಮನೆಕಡೆಗೆ ಓಟ  ಕಿತ್ತರು.
         ಆ ದಿನಗಳಲ್ಲಿ ಪುಟ್ಟಿಯ ಶಾಲೆ ಒಂದು ಗುಡಿಸಿಲಿನಲ್ಲಿ ನಡೆಯುತ್ತಿತ್ತು.ಪುಟ್ಟಿ ಕೈಕಟ್ಟಿ ನಿಂತು ತೂಗಾಡುತ್ತಾ ಎರಡೊಂದ್ಲ
ಎರಡು ಮಗ್ಗಿ ಹೇಳಿಕೊಡುತ್ತಿದ್ದಳು.ಮೇಷ್ಟ್ರು ಬಾಗಿಲಿನ ಚೌಕಟ್ಟಿಗೆ ಒರಗಿ ಚಾಚಿದ ತೋಳ ಮೇಲೆ ಒರಗಿ ತೂಕಡಿಸುತ್ತಿದ್ದರು.
ಮಾಡಿಂದ ಹಾವೊಂದು ಪುಟ್ಟಿಯ ಪಕ್ಕದಲ್ಲೇ ಬಿದ್ದಿತ್ತು.ಅಲ್ಲಿಂದ ಮೇಷ್ಟ್ರ ಕೈ ಕೆಳಗೆ ತೂರಿ ಓಡಿದ ಪುಟ್ಟಿ ನಿಂತಿದ್ದು ಪಕ್ಕದ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆಯಲ್ಲಿದ್ದ ಅಕ್ಕನ ಬಳಿ.
        ಒಂದು ದಿನ ಪುಟ್ಟಿ ಚಿನ್ನಿಯೊಂದಿಗೆ ಶಾಲೆಗೆ ಹೊರಟಿದ್ದಳು.ಬೇಲಿಯಲ್ಲಿ ಬಿಟ್ಟಿದ್ದ ಗಂಟೆ ಹೂವಿನ ಮೊಗ್ಗನ್ನು ಹಣೆಗೆ ಬಡಿದು
ಚಟ್ ಚಟ್ ಸದ್ದು ಮಾಡುತ್ತಾ ಹೋಗುತ್ತಿದ್ದರು.ಅಷ್ಟರಲ್ಲಿ ದುಂಡಾದ ಕಲ್ಲೊಂದು ಕಂಡಿತು. ಇಬ್ಬರೂ ಅದನ್ನು ಒಬ್ಬರ ನಂತರ
ಒಬ್ಬರು ಒದೆಯುತ್ತಾ ಹೊರಟರು. ಚಿನ್ನಿ ಒದೆದ ಕಲ್ಲು ಉರುಳುತ್ತಾ ಹೋಗಿ ಚರಂಡಿಯಲ್ಲಿ ಬಿತ್ತು. ಇಬ್ಬರೂ ಚರಂಡಿಯ ಬಳಿ
ಹೋಗಿ ಬಗ್ಗಿದರು.ನೀರಿಲ್ಲದ ಚರಂಡಿಯಲ್ಲಿ ದೊಡ್ಡ ಹಾವೊಂದು ಸರಸರನೆ ಸರಿದು ಹೋಗುತ್ತಿತ್ತು. ಚರಂಡಿಯಲ್ಲಿ ಹಾವು ರಸ್ತೆಯಲ್ಲಿ ಇವರಿಬ್ಬರೂ ಮುಂದೆ ಸಾಗಿದರು. ಸ್ವಲ್ಪ ಹೊತ್ತಿನ ನಂತರ ಹಾವು ಬಿರುಕಿನಲ್ಲಿ ಮರೆಯಾಯಿತು.ಎತ್ತಿನ ಕೊರಳ
ಕಿರುಗಂಟೆಯ ದನಿ ಕೇಳಿದ್ದರಿಂದ, ಗಾಡಿಯವರ ಬಳಿ ಕಬ್ಬು ಬೇಡಲು ಗೆಳತಿಯರಿಬ್ಬರೂ ಓಡಿದರು.
        ಆ ದಿನ ಶಾಲೆಯಲ್ಲಿ ನರಸಿಂಹ ಮೂರ್ತಿ ಮೇಷ್ಟ್ರು ಗಾಂಧೀಜಿಯ ಬಗ್ಗೆ ತಿಳಿಸಿದರು.ಗಾಂಧೀಜಿಯವರು ತುಂಬಾ ಒಳ್ಳೆಯವರೆಂಬ ಭಾವನೆ ಪುಟ್ಟಿಗೆ ಬಂತು.ಮನೆಗೆ ಬಂದ ಪುಟ್ಟಿ ಆಟ ಪಾಠ ಊಟ ಮುಗಿಸಿ ಮಲಗಿದಳು.ರಾತ್ರಿ ಕನಸಿನಲ್ಲಿ--- ಪುಟ್ಟಿ ಜಗಲಿಯ ಮೇಲೆ ಗೆಳತಿಯರೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದಳು.ದೊಡ್ಡ ಹಾವೊಂದು ಜಗಲಿಯ ಕೊನೆಯಲ್ಲಿದ್ದ ಮೆಟ್ಟಿಲ ಮೇಲೆ ಮಲಗಿತು.ಮಕ್ಕಳಿಗೆಲ್ಲಾ ಗಾಬರಿ, ಭಯ.ಎತ್ತರವಾದ ಜಗಲಿಯಿಂದ ಇಳಿಯುವುದು ಹೇಗೆಂಬ ಆತಂಕ .ಅಷ್ಟರಲ್ಲಿ ಅಲ್ಲಿಗೆ ಗಾಂಧೀಜಿ ಬಂದರು.ಜಗಲಿಯ ಇನ್ನೊಂದು  ಪಕ್ಕ ಬೋರಲಾಗಿ ಮಲಗಿದರು ಮಕ್ಕಳೆಲ್ಲಾ  ಒಬ್ಬೊಬ್ಬರಾಗಿ ಗಾಂಧೀಜಿಯ ಬೆನ್ನ ಮೇಲೆ ಕಾಲಿಟ್ಟು ಜಿಗಿದರು .
        ಮಕ್ಕಳಿಗೆ ಹಾಲು ಕೊಡಲು ಎದ್ದ ರತ್ನ "ಮಕ್ಕಳಿಗೆಲ್ಲ ತಾತ ಲೋಕಕ್ಕೆಲ್ಲ ದಾತ ಅವರೆ ನಮ್ಮ ಗಾಂಧೀ ಶ್ರೀ ಮಹಾತ್ಮ ಗಾಂಧೀ" ಎಂದು ಗುನುಗುತ್ತಾ ಅಡುಗೆಮನೆಗೆ ನಡೆದಳು. 
       

Sunday, March 5, 2017

< ಪುಟ್ಟಿಯ ಬಾಲ್ಯ ಫೋಟೋ ತಂದ ನೆನಪು ಆವತ್ತು ಮನೆಯಲ್ಲಿ ರತ್ನ ಒಬ್ಬಳೆ.ಯಜಮಾನರು ಗೆಳೆಯರೊಬ್ಬರ ಮಗಳ ಮದುವೆಯ ಮಾತುಕತೆಗೆ ಹೋಗಿದ್ದರು.ಮಕ್ಕಳು ,ಅಳಿಯಂದಿರು ಸೊಸೆ ಎಲ್ಲಾ ಒಂದು ದಿನದ ಪ್ರವಾಸ ಹೋಗಿದ್ದರು.ಅಕ್ಕ ಹೊಲಿದುಕೊಟ್ಟಿದ್ದರವಿಕೆಗೆ ಹುಕ್ಸ್ ಹೊಲಿಯಲು ಕುಳಿತಳು. ಯಾಕೋ ಬೇಡವೆನಿಸಿತು. ತವರುಮನೆಗೆ ಹೋದಾಗ ಅಳಿಯ ಮೊಬೈಲಲ್ಲಿ ಪತ್ನಿಯ ಬಾಲ್ಯದ ಫೋಟೋ ಜೊತೆಗೆ ರತ್ನಳ ಬಾಲ್ಯದ ಫೋಟೋ ಸಹ ಹಾಕಿಕೊಟ್ಟಿದ್ದರು.ರತ್ನ ಅದನ್ನು ನೋಡುತ್ತಾ ಕುಳಿತಳು. ಪುಟ್ಟಿ ಫೋಟೋದಲ್ಲಿ ಕೆಂಪು ಡಮಾಸ್ ಬಟ್ಟೆಯ ಫ್ರಾಕ್ ಧರಿಸಿ ಕೈಯಲ್ಲಿ ಬೊಂಬೆ ಹಿಡಿದಿದ್ದಳು. ದೊಡ್ಡಕ್ಕ ಅದನ್ನು ಹೊಲಿದಿದ್ದಳು. ಎದೆಯ ಭಾಗದಲ್ಲಿ ಬಿಳಿಯ ಹೊಳೆಯುವ ದಾರದಲ್ಲಿ ಕಸೂತಿ ಮಾಡಿ ಅಂಚಿನಲ್ಲಿ ಬಿಳಿ ಲೇಸಿಟ್ಟು ಹೊಲಿದಿದ್ದಳು.ಆಗಿನ ಫ್ಯಾಶನ್ನಂತೆ ಅದಕ್ಕೆ ಪಫ್ ತೋಳು ಇಟ್ಟಿದ್ದಳು. ಫೋಟೋದ ಒಂದು ಕೊನೆಯಲ್ಲಿ ಕೈಕಟ್ಟಿ ನಿಂತ ಅಕ್ಕ ಕಾಣ್ತಿದ್ದಳು.ಇನ್ನೊಂದು ಫೋಟೋದಲ್ಲೂ ಅದೇ ಫ್ರಾಕ್ ತೊಟ್ಟ ಪುಟ್ಟಿ ಉಯ್ಯಾಲೆ ಮೇಲೆ ಕುಳಿತಿದ್ದಳು.ದೂರದಿಂದ ತೆಗೆದ ಆ ಫೋಟೋದಲ್ಲಿ ತುಳಸಿ ಕಟ್ಟೆಯ ಮುಂದೆ ಅಮ್ಮ ಹಾಕಿದ ಸುಂದರ ರಂಗೋಲಿ ಸಹ ಕಾಣುತ್ತಿತ್ತು. ಅಪ್ಪ ಹೊಸದಾಗಿ ಕ್ಯಾಮೆರಾ ಕೊಂಡಿದ್ದರು. ಅಣ್ಣ ಧೂಳು ಹೊಡೆಯುತ್ತಿದ್ದ ತಂಗಿಯರನ್ನು ಬಲವಂತವಾಗಿ ನಿಲ್ಲಿಸಿ ತೆಗೆದ ಫೋಟೋ,. ಪೆನ್ಸಿಲ್ನಲ್ಲಿ ಕಾಪಿ ಬರೆಯುತ್ತಿದ್ದ ಪುಟ್ಟಿಯನ್ನು ಕರೆದು ಹಿತ್ತಿಲ ಮೆಟ್ಟಿಲ ಮೇಲೆ ಕೂರಿಸಿ ತೊಡೆಯ ಮೇಲೆ ಪಕ್ಕದ ಮನೆಯವರ ಅಳುತ್ತಿದ್ದ ಮಗುವನ್ನು ಕೂರಿಸಿ ತೆಗೆದ ಫೋಟೋ . ಪುಟ್ಟಿಯ ಕೈಯಲ್ಲಿ ಪೆನ್ಸಿಲ್ ಹಾಗೇ ಇತ್ತು.ಫೋಟೋ ತೆಗಿಸಿಕೊಳ್ಳಲು ಒಪ್ಪದ ಅಜ್ಜಿಯ ಫೋಟೋ ಸಹ ಇತ್ತು, ಅಜ್ಜಿ ತೊಟ್ಟಿಯ ಬಳಿ ಬಂದ ಮೊಮ್ಮಗನಿಗೆ ನೀರು ಬೇಕಾಗಿರಬಹುದೆಂದು ಬಗ್ಗಿ ಮಗ್ಗಲ್ಲಿ ನೀರು ತೆಗೆಯುತ್ತಿರುವ -ಮೋಸದಿಂದ ತೆಗೆದ- ಫೋಟೊ. ಅಪ್ಪ ಅಮ್ಮನ ಫೋಟೋ ಎಲ್ಲ ಇತ್ತು. ಪುಟ್ಟಿನೂ ಅಣ್ಣನದೊಂದು ಫೋಟೋ ಕ್ಲಿಕ್ಕಿಸಿದ್ದಳು. ಒಂದು ದಪ್ಪ ಜಡೆ ಮುಂದೆ ಹಾಕಿ ಸೊಂಟದ ಮೇಲೆ ಕೈಯಿಟ್ಟು ಚಿಕ್ಕಕ್ಕ ಫೋಟೋದಲ್ಲಿ ಸುಂದರವಾಗಿ ನಗುತ್ತಿದ್ದಳು. ಇನ್ನೊಂದು ಫೋಟೋ ತಿರುಪತಿಯಲ್ಲಿ ನಡೆದ ಅಣ್ಣನ ಮುಂಜಿಯ ನಂತರ ತೆಗೆದದ್ದು. ಪುಟ್ಟಿ ಗುಂಡು ತಲೆಯ ಮೇಲೆ ಟೋಪಿ ಧರಿಸಿದ್ದಳು.ಅಕ್ಕ ಹೊಲಿದುಕೊಟ್ಟ ಆನಂದ ಬಣ್ಣದ (ಒಂದು ರೀತಿಯ ನೀಲಿ)ಪಂಜಾಬಿ ಡ್ರೆಸ್ ತೊಟ್ಟಿದ್ದಳು. ಅದರ ಮೇಲೆ ಸಹ ಅಕ್ಕ  ಮೆಶಿನ್ನಲ್ಲಿ ಮಾಡಿದ ಕಸೂತಿಯಿತ್ತು. ಹೊಸ ಬಟ್ಟೆಯೆಂದು ಅದನ್ನೇ ಹಾಕಿಕೊಂಡು ಮಾರನೆಯ ದಿನ ಶಾಲೆಗೆ ಹೋಗಿದ್ದಳು. ಶಾಲೆಯಿಂದ ವಾಪಸ್ ಬರುವಾಗ ಅಳುತ್ತಾ ಬಂದ ಪುಟ್ಟಿಯನ್ನು ನೋಡಿ ಎಲ್ಲರಿಗೂ ಗಾಬರಿ. ತನ್ನ ಹೊಸ ಬಟ್ಟೆ ಹರಿದಿದೆಯೆಂದು ಪುಟ್ಟಿ ಅಳುತ್ತಿದ್ದಳು. ಮೂರು ಕಡೆ ಸಣ್ಣ ಗೆರೆಯಂತೆ ಕಾಲಿನ ಭಾಗದಲ್ಲಿ ಹರಿದಿತ್ತು.ಹೇಗೆ ಹರಿಯಿತೆಂದು ಕೇಳಿದರೆ ಪುಟ್ಟಿ ಗೊತ್ತಿಲ್ಲವೆಂದು ಅಳುತ್ತಿದ್ದಳು. ಪುಟ್ಟಿ ಎಲ್ಲಾದರೂ ಬಿದ್ದು ಬಂದಿರಬಹುದೆಂದುಕೊಂಡರೆ ಹರಿದದ್ದು ಹಾಗಿರಲಿಲ್ಲ. ತಂತಿ ಅಥವಾ ಮುಳ್ಳಿಗೆ ಸಿಕ್ಕು ಹರಿದಂತೂ ಇರಲಿಲ್ಲ. ಹೊಸ ಬಟ್ಟೆ ಹೇಗೆ ಹರಿಯಿತೆಂಬುದು ಎಲ್ಲರಿಗೂ ಸೋಜಿಗವಾಗಿತ್ತು.ಅಣ್ಣ ಉಪಾಯವಾಗಿ ಬಟ್ಟೆ ಹರಿದುದರ ರಹಸ್ಯ ಪುಟ್ಟಿಯಿಂದ ಹೊರ ತೆಗೆದ. ಅಣ್ಣನ ಮಾತಿಗೆ ಮರುಳಾಗಿ ಪುಟ್ಟಿ ಬಾಯ್ಬಿಟ್ಟಳು. ಚಿನ್ನಿ ಕೊಟ್ಟ ಬ್ಲೇಡ್ ಚೂಪಾಗಿದಿಯೋ ಇಲ್ಲವೋ ಎಂದು ನೋಡಲು ತನ್ನ ಹೊಸ ಬಟ್ಟೆಗೆ ಬ್ಲೇಡ್ ಹಾಕಿದ್ದಳು ಪುಟ್ಟಿ.ಆದರೆ ಮೂರು ಬಾರಿ ಯಾಕೆ ಖಂಡಿತ ಪುಟ್ಟಿಗೆ ಸಹಾ ಗೊತ್ತಿಲ್ಲ. ಕಪ್ಪು ಬಿಳಿ ಫೋಟೋಗಳು ಬಣ್ಣ ಬಣ್ಣದ ನೆನಪನ್ನು ತಂದವು. ಕರೆಗಂಟೆಯ ಶಬ್ದ ಕೇಳಿ ರತ್ನ ಎದ್ದಳು.

Tuesday, February 28, 2017

ಪುಟ್ಟಿಯ ಬಾಲ್ಯ ಗಾಳಿಪಟದ ಪ್ರಸಂಗ ಕೆಲಸ ಮುಗಿಸಿ ಟೀ ಲೋಟ ಹಿಡಿದು ಬಂದ ರತ್ನ ಟಿವಿ ಹಾಕಿದಳು ಅದರಲ್ಲಿ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಇಬ್ಬರೂ ಗಾಳಿಪಟದ ಹಾಡು ಹೇಳ್ತಿದ್ದರು. " ಗಾಳಿಪಟ"ಎಂಬ ಪದ ಕೇಳಿದೊಡನೆಯೇ ರತ್ನಳ ಮನಸ್ಸು ಪುಟ್ಟಿಯಾಗಲು ತವಕಿಸಿತು. ಆವತ್ತು ಪುಟ್ಟಿಗೆ ರಜ ಇತ್ತು.ಅವಳು ಚಿನ್ನಿ ವಿಜಿ ಮೂವರೂ ಸೇರಿ ಗಾಳಿಪಟದ ತಯಾರಿಯಲ್ಲಿದ್ದರು.ಹಳೇ ದಿನಪತ್ರಿಕೆಯನ್ನು ಚೌಕಾಕಾರವಾಗಿ ಕತ್ತರಿಸಿದರು. ತೆಂಗಿನ ಪೊರಕೆ ಕಡ್ಡಿಯನ್ನು ಬಿಲ್ಲಿನಂತೆ ಬಾಗಿಸಿ ಆ ಕಾಗದಕ್ಕೆ ಅಂಟಿಸಿದರು. ಇನ್ನೊಂದನ್ನು ಮೂಲೆಯಿಂದ ಮೂಲೆಗೆ ಅಂಟಿಸಿದರು. ಅದಕ್ಕೆ ಸೂತ್ರ ಕಟ್ಟಿ, ಟ್ಯೈ ನ್ ದಾರ ಕಟ್ಟಿ ಹಾರಿಸಲು ಹೊರಟರು.  ಹೊರಗೆ ಬಂದ ಚಿಕ್ಕಕ್ಕ "ಯೇ ಗಾಂಪರೊಡೆಯರ ಶಿಷ್ಯರಾ ಬಾಲಂಗೋಚಿ ಕಟ್ಟಲ್ವಾ?" ಅಂದಳು. "ಅಯ್ಯೋ ಮರ್ತೆ ಬಿಟ್ಟೆ" ಅಂತಾ ರೇಡಿಯೋದ ಈರಣ್ಣನ (ಎ ಎಸ್ ಮೂರ್ತಿ)ಸ್ಟೈಲಲ್ಲಿ ಹೇಳಿದ ಪುಟ್ಟಿ ಉದ್ದಕ್ಕೆ ಕಾಗದ ಹರಿದು ಬಾಲಂಗೋಚಿ ಕಟ್ಟಿದಳು. ಪಟ ಹಾರಿಸಲು ಬಯಲಿಗೆ ನಡೆದರು. ಚಿನ್ನಿ ಪಟ ಕೈಯಲ್ಲಿ ಹಿಡಿದಳು. ಪುಟ್ಟಿ ದಾರದುಂಡೆ ಹಿಡಿದು ಸ್ವಲ್ಪ ದೂರದಲ್ಲಿ ನಿಂತಳು.ವಿಜಿ" ಗಾಳಿ ಬಂತು ಪಟ ಬಿಡೇ " ಎಂದು ಕೂಗಿದ.ಚಿನ್ನಿ ಪಟ ಬಿಟ್ಟಳು ಪುಟ್ಟಿ ದಾರ ಹಿಡಿದು ಓಡಿದಳು.ಮೇಲೇರಿದ ಪಟ ಪುಟ್ಟಿ ನಿಂತೊಡನೆಯೇ ಕೆಳಗಿಳಿಯಿತು.ಮತ್ತೆ ಮತ್ತೆ ಅದೇ ಪುನರಾವರ್ತನೆಯಾಯಿತು.ಅಯ್ಯೋ ಇದು ಓಡೋ ಪಟ ಅಂತ ಅದನ್ನ ಬಿಸಾಕಿ, ಮನೆಗೆ ಬಂದು ಇನ್ನೊಂದು ಪಟ ಕಟ್ಟಿದರು.ಅದು ಕೈ ಬಿಟ್ಟೊಡನೆ ಗಾಳಿಯಲ್ಲಿ ಲಾಗ ಹಾಕಲು ತೊಡಗಿತು. ನಿಮ್ಮ ಪಟ ಗೋತ ಅಂತ ಅಲ್ಲಿದ್ದ ಮಕ್ಕಳು ಕೈತಟ್ಟಿ ನಕ್ಕರು. ಗೋತಾ ಪಟವನ್ನು ಸಿಟ್ಟಿನಿಂದ ಹರಿದು ಹಾಕಿ ಚಿನ್ನಿ ಮನೆಗೆ ಓಡಿದಳು. ವಿಜಿ ಅಳುತ್ತಾ ಮನೆಗೆ ಹೋದನು.ಬಯಲಿನಲ್ಲಿ ಎತ್ತರಕ್ಕೆ ಹಾರುತ್ತಿದ್ದ ಪಟವನ್ನು ನೋದುತ್ತಾ ಪುಟ್ಟಿ ಅಲ್ಲೇ ನಿಂತಳು. ಪಟ ಬಿಡುತ್ತಿದ್ದ ಮಲ್ಲೇಶ ಅವಳ ಕೈಗೆ ದಾರ ಕೊಟ್ಟು ತಾನೂ ಭದ್ರವಾಗಿ ಹಿಡಿದುಕೊಂಡ."ಮಲ್ಲೇಶ ನಂಗೂ ಗಾಳಿಪಟ ಕಟ್ಕೊಡೋ" ಪುಟ್ಟಿ ಬೇಡಿದಳು." ನನ್ನತ್ರ ಕಾಗ್ಜ ಇಲ್ಲ ಕಾಗ್ಜ ತಂದ್ಕೊಟ್ರೆ ಕಟ್ಕೊಡ್ತೀನಿ." ಅಂದ ಮಲ್ಲೇಶ.ಪುಟ್ಟಿ ಮನೆಗೋಡಿದಳು. ಪಟ ಕಟ್ಟುವ ಕಾಗದಕ್ಕಾಗಿ ಅಲ್ಲಿ ಇಲ್ಲಿ ಹುಡುಕಿದಳು.ಕಾಗದ ಸಿಗಲಿಲ್ಲ.ಹಾಲಿಗೆ ಬಂದಳು.ಗೋಡೆಯನ್ನಲಂಕರಿಸಿದ್ದ ಸರಸ್ವತಿಯ ಕ್ಯಾಲೆಂಡರ್ ನೋಡಿದಳು.ಚೌಕಾಕಾರವಾಗಿದ್ದ ಅದು ಪಟ ಕಟ್ಟಲು ಚೆನ್ನಾಗಿರುತ್ತೆಂದು, ಕುರ್ಚಿಯ ಮೇಲೆ ಹತ್ತಿ ಅದನ್ನು ತೆಗೆದಳು.ಅಂಚಿನಲ್ಲಿದ್ದ ಲೋಹದ ಪಟ್ಟಿಯನ್ನು ಕತ್ತರಿಸಿ ತೆಗೆದು ಹೊರಗೆ ಓಡಿದಳು.ಮಲ್ಲೇಶ ಅದರಲ್ಲಿ ಪಟ ಕಟ್ಟಿದ. ಇಬ್ಬರೂ ಸೇರಿ ಪಟ ಹಾರಿಸಿದರು.ಆಕಾಶವನ್ನೇ ಮುಟ್ಟುವಂತೆ ಪಟ ಮೇಲೇರತೊಡಗಿತು".ಆಷ್ಟು ಎತ್ತರಕ್ಕೆ ಯಾವ ಪಟಾನೂ ಹಾರ್ಸೇ ಇಲ್ಲ" ಅಂತ ಪುಟ್ಟಿ ಅಂದರೆ ಮಲ್ಲೇಶ ಸಹ ಹೂಗುಟ್ಟಿದ."ಇನ್ನು ಸಾಕು ಪಟ ಇಳಿಸೋ"ಪುಟ್ಟಿಯ ಮಾತಿನಂತೆ ಮಲ್ಲೇಶ ಮೆಲ್ಲಗೆ ಪಟ ಇಳಿಸತೊಡಗಿದ.ಆ ಸಂಭ್ರಮದಲ್ಲಿ ಪಟದ ದಾರ ತುಂಡಾಗಿ ಗಾಳಿಯಲ್ಲಿ ತೇಲಿಕೊಂಡು ಹೋಗಿ ಎತ್ತರದ ಸುರಗಿ ಮರಕ್ಕೆ ಸಿಕ್ಕಿಹಾಕಿಕೊಂಡಿತು. ಅಷ್ಟು ಎತ್ತರಕ್ಕೆ ಹಾರಿದ ಪಟವನ್ನು ಯಾರೂ ನೋಡಲೇ ಇಲ್ಲವಲ್ಲ ಅಂತ ನಿರಾಸೆಯಿಂದ ಪುಟ್ಟಿ ಮನೆಗೆ ಬಂದಳು. ; ಪಟ ಎತ್ತರಕ್ಕೆ ಹಾರಿದ್ದನ್ನು ಚಿಕ್ಕಕ್ಕನ ಮುಂದೆ ವರ್ಣಿಸಿದಳು.ಅವಳು ಹೌದಾ ಎಂದ ರೀತಿಯಿಂದಲೇ ನಂಬಲಿಲ್ಲವೆಂದು ಗೊತ್ತಾಯಿತು ಪುಟ್ಟಿ-.ಸತ್ಯವಾಗ್ಲೂ ಮೇಲಕ್ಕೆ ಹಾರಿತು. ಚಿಕ್ಕಕ್ಕ-ಮತ್ತೆ ವಿಜಿ ಗೋತ ಹೊಡೀತು ಅಂದ ಪುಟ್ಟಿ-.ಅದಲ್ವೆ ಮಲ್ಲೇಶ ಬೇರೆ ಪಟ ಕಟ್ಕೊಟ್ ಚಿಕ್ಕಕ್ಕ- ಕಾಗದಎಲ್ಲಿತ್ತು? ಪುಟ್ಟಿ- ಸರಸ್ವತಿಯ ಕ್ಯಾಲೆಂಡರ್ ಚಿಕ್ಕಕ್ಕ-ನಿಂಗೇನ್ ತಲೇಲಿ ಬುದ್ಢಿ ಇದೆಯಾ ಇಲ್ವಾ? ಅಷ್ಟು ಚೆನ್ನಾಗಿದ್ದ ಸರಸ್ವತಿ ಚಿತ್ರ,ಯಾರಾದರೂ ಗಾಳಿಪಟ ಮಾಡ್ತಾರಾ? ಅಮ್ಮ ಅದನ್ನ ಕಟ್ ಹಾಕ್ಸಕ್ಕೇಂತ ಇಟ್ಕೊಂಡಿದ್ದರು. ಶಾಂತಸ್ವರೂಪಿಣಿಯಾದ ಅಮ್ಮನಿಂದ ಪುಟ್ಟಿಗೆ ಚೆನ್ನಾಗಿ ಪೂಜೆಯಾಯಿತು.ಪುಟ್ಟಿ ಪೆಚ್ಚಾದಳು.ಆಕಾಶದಲ್ಲಿದ್ದ ಬೇರೆ ದೇವತೆಗಳನ್ನು ಸೇರಲು ಸರಸ್ವತಿಯ ಪಟ ಅಷ್ಟೆತ್ತರಕ್ಕೆ ಹಾರಿರಬಹುದು ಅಂತ ಅಕ್ಕ ಪ್ರಸಂಗಕ್ಕೆ ಮುಕ್ತಾಯ ಹಾಡಿದಳು. ರತ್ನಳ ಮೊಗದಲ್ಲಿ ಮುಗುಳ್ನಗೆ ಮೂಡಿತು.  ಫೋನ್ ರಿಂಗಣಿಸಿತು. ದೊಡ್ಡಕ್ಕನ ಫೋನಿರಬಹುದು ಅಂತ ರತ್ನ ಸಡಗರದಿಂದ ಫೋನೆತ್ತಿದಳು.

ಕನ್ನಡತಿಯೊಬ್ಬಳ ಅನಿಸಿಕೆಗಳು

     ನೆನ್ನೆ ನಾನು ರಸ್ತೆಯಲ್ಲಿ ಹೋಗುತ್ತಿದ್ದಾಗ,ಎದುರಿಗೆ ಇಬ್ಬರು ಕಾಲೇಜು ಕನ್ಯೆಯರು ಬಂದರು.ರಾತ್ರಿ ನಾನು ಮಂಚದ ಮೇಲೆ ಹಾಸಿಗೆ ಹಾಕ್ತಿದ್ದಾಗ, ನಮ್ಮಕ್ಕ ಅಂತ ಏನೋ ಹೇಳ್ಕೊಂಡು ಹೋದರು.ನನ್ನ ಕಿವಿ ನೆಟ್ಟಗಾಯಿತು. ಮನೆಯಿಂದ ಹೊರಗೆ ಈ ಪದಗಳು ಕಿವಿಗೆ ಕೇಳುವುದು ಅಪರೂಪ.ಸುಮಾರು ಜನ ಕಾಟ್, ಬೆಡ್, ಐರನ್ ಅಂತ ವರ್ಡ್ಸ್ ಯೂಸ್ ಮಾಡ್ತಾರೆ.
       ಮನೆಗೆ ಬಂದು ಟಿವಿ ಹಾಕಿದರೆ ಟಿವಿ ೯ ನಲ್ಲಿ ಕನ್ನಡದ ಸ್ಥಾನಮಾನದ ಬಗ್ಗೆ ಏಟು ಎದಿರೇಟು ಕಾರ್ಯಕ್ರಮ ನಡೆಯುತ್ತಿತ್ತು.ನಿರೂಪಕ-ಕನ್ನಡ ಸಾಯುತ್ತಿರುವ ಭಾಷೆಯಾ-ಎಂದು ಕೇಳಿದರು.ಆ ಪದಬಳಕೆ ಇಷ್ಟವಾಗಲಿಲ್ಲ. ಕಾರ್ಯಕ್ರಮ ಸಹ ಕಾರಣಾಂತರದಿಂದ ನೋಡಲಾಗಲಿಲ್ಲ.ಆದರೆ ನನ್ನ ಅನಿಸಿಕೆಗಳನ್ನಾದರೂ ಬರೆಯಬೇಕೆನಿಸಿತು.
        ಯಾವುದೇ ಭಾಷೆ ಅದು ಉಪಯೋಗದಲ್ಲಿರುವ ತನಕ ಜೀವಂತವಾಗಿರುತ್ತದೆ.ಪ್ರತಿಯೊಬ್ಬ ಕನ್ನಡಿಗನೂ ತನ್ನ ಮನೆಯಲ್ಲಿ ಕನ್ನಡವನ್ನೇಉಪಯೋಗಿಸಿ,ಮಕ್ಕಳಿಗೆ ತಪ್ಪಿಲ್ಲದೇ ಓದಲು ಹಾಗೂ ಬರೆಯಲು ಕಲಿಸಿದರೆ ಮುಗಿಯಿತು.ಸರ್ಕಾರ ಏನು ಮಾಡಲಿ ಬಿಡಲಿ ,ಶಾಲೆಯಲ್ಲಿ ಕಲಿಸಲಿ ಬಿಡಲಿ ಭಾಷೆ ಬಳಕೆಯಲ್ಲಿರುತ್ತದೆ.ಮನೆಯಲ್ಲಿ ಅಕ್ಕ ತಂಗಿಯರು ಅಣ್ಣತಮ್ಮಂದಿರು ಮಾತೃಭಾಷೆಯಲ್ಲಿಯೇ ಮಾತನಾಡಬೇಕು.ಕನ್ನಡ ಸದಾ ಜೀವಂತವಾಗಿರುತ್ತದೆ.ಇರಬೇಕು.

Saturday, February 25, 2017

ವಿಜಯತ್ತೆಯ ವಿವೇಕವಾಣಿ

ನಮ್ಮ ವಿಜಯತ್ತೆ ಅನುಭವಿಗಳು. ದೇಶ ವಿದೇಶ ಸುತ್ತಿದವರು. ಅನೇಕ ಪುಸ್ತಕಗಳನ್ನು ಓದಿದವರು.ತಮಗೆ ಸರಿ ಅನಿಸಿದ್ದನ್ನು ಆತ್ಮೀಯವಾದ ಭಾಷೆಯಲ್ಲಿ
ಹೇಳಬಲ್ಲವರು. ಅವರು ಆಗಾಗ ಹೇಳಿದ ಮಾತುಗಳೇ -ವಿಜಯತ್ತೆಯ ವಿವೇಕವಾಣಿ ಮೊನ್ನೆ ಸಹೋದ್ಯೋಗಿಯೊಬ್ಬರ ಮಾತುಗಳಿಂದ ಬೇಜಾರಾಗಿದ್ದೆ. ಯಾವತ್ತೂ ಉದ್ಯೋಗದ ಟೆಂಷನ್ಗಳನ್ನು ಮನೆಗೆ ತರದ ನಾನು, ಸಪ್ಪೆ ಮುಖ ಹೊತ್ತು ತಿರುಗುತ್ತ ಮನೆಯವರಿಂದ ಮಗನಿಂದ ಬೈಸಿಕೊಂಡಿದ್ದೆ. ವಿಜಯತ್ತೆ ಕೇಳಿದಾಗ ಸಹೋದ್ಯೋಗಿಯ ನುಡಿಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿದೆಯೆಂದು ಹೇಳಿದೆ. ಆಗ ಅವರು ಹೇಳಿದ್ದು. ನಮ್ಮ ಮನಸ್ಸು ಒಂದು ಚೌಕಟ್ಟಿನಂತೆ. ಅದರಲ್ಲಿ ಬೇಡದಮನ ನೋಯಿಸುವ ವಿಚಾರಗಳು ,ಆಗಿ ಹೋದ ಘಟನೆಗಳು ಕಪ್ಪು ಚುಕ್ಕೆಯಂತೆ ತುಂಬಿರುತ್ತವೆ. ಬೇರೆಯವರು ನಮ್ಮನ್ನು ನೋಯಿಸಿದಾಗ ಅದನ್ನು undo ಮಾಡಲಾಗುವುದಿಲ್ಲ ಆದರೆ ಚೌಕಟ್ಟನ್ನು ಹಿಗ್ಗಿಸಿದರೆ ಆ ಕಪ್ಪು ಚುಕ್ಕೆ ಒಂದು ಮೂಲೆಗೆ ಸರಿಯುತ್ತದೆ. ನಮ್ಮ ಮನಸ್ಸನ್ನು ವಿಶಾಲ ಮಾಡಿಕೊಂಡರೆ ಇಂಥ ಮನ ನೋಯಿಸುವ ಮಾತುಗಳು ಪಕ್ಕಕ್ಕೆ ಹೋಗಿ ಬೇರೆಯ ಸುವಿಚಾರಗಳಿಗೆ ಮನಸ್ಸಿನಲ್ಲಿ ಸ್ಥಳ ದೊರೆಯುತ್ತದೆ.

Sunday, February 12, 2017

                            ಪುಟ್ಟಿಯ  ಬಾಲ್ಯ 

      ಪುಟ್ಟಿಯ ಹಣೆ ತೂತಾಯ್ತು


       ಮನೆಯ ಒಳಗೆ ಬಂದ ಪುಟ್ಟಿಗೆ ತಲೆ ಬಾಚಿಕೊಳ್ಳುತ್ತಿದ್ದ ಚಿಕ್ಕಕ್ಕ ಕಾಣಿಸಿದಳು. ಅಕ್ಕನ ಹೊಳೆಯುವ  ಕೂದಲನ್ನು ನೋಡಿದಾಕ್ಷಣ ಅವಳಿಗಿದ್ದ ಒಂದೇ ಕೊರತೆಯ ನೆನಪಾಯಿತು. ಭುಜದಿಂದ ಕೆಳಗೆ ಇಳಿಯದಿದ್ದ ಅವಳ ಕೂದಲನ್ನೊಮ್ಮೆ
ಮುಟ್ಟಿ ನೋಡಿಕೊಂಡಳು. ತಕ್ಷಣ ಗುಡಿಯ ಕಡೆಗೆ ಹೊರಟಳು.ದಾರಿಯಲ್ಲಿ  ಹೊಂಗೆಯ ಮರದಡಿ ಗೆಳೆಯನೊಂದಿಗೆ  ನಿಂತಿದ್ದ ಅಣ್ಣ ಅವಳನ್ನು ನೋಡಲಿಲ್ಲ. ಗಣೇಶನ ಗುಡಿಯ ಜಗುಲಿಯ ಪಕ್ಕದಲ್ಲಿ ಚೆನ್ನಕ್ಕ ಎಲೆಯಡಿಕೆ ತಿನ್ನುತ್ತಾ ಕುಳಿತಿದ್ದಳು. ಪುಟ್ಟಿ ಗುಡಿಯ ಸುತ್ತ ಪ್ರದಕ್ಶಿಣೆ ಹೊರಟಳು.ನಾಲೆಯಿಂದ ಬಂದ ರಾಮಮ್ಮ "ಯಾವುದು ಮಗ" ಎಂದಳು. " ಇದಾ ನಮ್ಮ ಚಿಕ್ಕಯ್ನೋರ ಮಗಳು ಪುಟ್ಟಿ. ದಿನಾ ಗುಡಿಗೆ ಬಂದು ಉದ್ದ ಕೂದಲು ಬೆಳೀಲಿ ಅಂತ ಕೇಳ್ಕೊಳತ್ತೆ". ಚೆನ್ನಕ್ಕ ಉತ್ತರಿಸಿದಳು.
"ಓ ಗೊತ್ತು ಬಿಡು. ಮೊನ್ನೆ ಅವರಪ್ಪನ ಜೊತೆ ಗದ್ದೆಗೆ ಬಂದಿತ್ತು. ನಾವೆಲ್ಲಾ ಹಾಡೇಳ್ತಾ ನಾಟಿ ಮಾಡ್ತಿದ್ರೆ, ನೋಡ್ತಾ ನಿಂತಿತ್ತು.
ಅಯ್ನೋರು ನೋಡು ಅವರೆಲ್ಲಾ ಎಷ್ಟು ಕಷ್ಟ ಪಟ್ಟು ಕೆಲಸ ಮಾಡ್ತಾರೆ. ಎಂದರೆ ನಾನೂ ಮಾಡ್ತೀನಿ ಅಂತು .ನಿಂಗಾಗಲ್ಲ ಹೋಗು ಎಂದರೂ ಕೇಳಲಿಲ್ಲ. ಅಯ್ನೋರು ಒಂದು ರೂಪಾಯಿ ಕೊಡ್ತೀನಿ ನಾಟಿ ಮಾಡು ನೋಡೋಣ ಅಂದ ಕೂಡಲೆ .ಗದ್ದೆಗೆ ಇಳಿದು ನಾಟಿ ಮಾಡಿ ಒಂದು ರುಪಾಯಿ ವಸೂಲ್ಮಾಡ್ಕೊಂಡು ಹೋಯ್ತು."
    ಪ್ರದಕ್ಷಿಣೆ  ಮುಗಿಸಿ, ಉದ್ದ ಕೂದಲಿನ ಬೇಡಿಕೆಯಿಟ್ಟು ಬಂದ ಪುಟ್ಟಿ , ಹಣತೆ ಇಡಲು ಹಾಕಿದ್ದ ಮರದ ಪಟ್ಟಿ ನೋಡಿದಳು.
ಜಗಲಿಯ ಮೇಲೆ ನಿಂತು, ಪಟ್ಟಿ ಹಿಡಿದು ನೇತಾಡಿದಳು . ಅವಳ  ಭಾರಕ್ಕೆ ಪಟ್ಟಿ ಮುರಿಯಿತು. ನೆಲದಲ್ಲಿದ್ದ ಚೂಪಾದ ಕಲ್ಲು
ಹಣೆಗೆ ಚುಚ್ಚಿ ರಕ್ತ ಸೋರಿತು.ಪುಟ್ಟಿಯ ಅಳು ಕೇಳಿದ ಚೆನ್ನಕ್ಕ "ಮಗ ಬಿತ್ತು" ಎಂದು ಕೂಗಿದಳು. ಅಣ್ಣ ಮನೆಗೆ ಹೋಗಿಯಾಗಿತ್ತು.
ಅಲ್ಲೇ ಇದ್ದ ಅಣ್ಣನ ಗೆಳೆಯ ಓಡಿ ಬಂದು ಪುಟ್ಟಿಯನ್ನೆತ್ತಿ ಅವನ ಸೈಕಲ್ಲಲ್ಲಿ ಕೂರಿಸಿಕೊಂಡು ಪಕ್ಕದ ಊರಿನ ಡಾಕ್ಟರ್ ಬಳಿ
ಕರೆದೊಯ್ದ . ಡಾಕ್ಟರರು ಹೊಲಿಗೆ ಹಾಕಿದ ಮೇಲೆ, ಮನೆಗೆ ಕರೆತಂದಿದ್ದ. ಹಣೆಗೆ ಪಟ್ಟಿ ಕಟ್ಟಿಕೊಂಡು ಬಿಸ್ಕೆಟ್ ತಿನ್ನುತ್ತಾ ಬಂದ
ಪುಟ್ಟಿಯನ್ನು ನೋಡಿದ ಮನೆಯವರಿಗೆಲ್ಲಾ ಗಾಬರಿ. ಅಣ್ಣನ ಗೆಳೆಯ ಹಣೆಗೆ ತೂತಾಗಿ ಮೂಳೆ ಕಾಣುತ್ತಿದ್ದ ವಿಚಾರ ಕೇಳಿದಾಗಲಂತೂ ಅಮ್ಮನಿಗೆ ದಿಗಿಲಾಗಿತ್ತು.
"ರತ್ನಾ ಟೀ ಕೊಡ್ತೀಯಾ" ಯಜಮಾನರ ಧ್ವನಿ
 "ಮಾವಾ ಅತ್ತೆ ಮಲಗಿದ್ದಾರೆ, ನಾನೇ ಮಾಡ್ಕೊಡ್ತೀನಿ " ಸೊಸೆಯ ಧ್ವನಿ.
"ಅವಳು ನಿದ್ದೆ ಮಾದ್ತಿರಲ್ಲ,  ಅವಳ ಚಿಕ್ಕ ವಯಸ್ಸಿನ ಘಟನೆಯೆಲ್ಲಾ ನೆನಪಿಸ್ಕೊತಾ ಇರ್ತಾಳೆ" ಯಜಮಾನರ ಉಲಿ.
ರತ್ನ ಟೀ ಮಾಡಲು ಎದ್ದಳು.

Friday, February 10, 2017

                                           ಪುಟ್ಟಿಯ ಬಾಲ್ಯ 

   ಪುಟ್ಟಿಯ ಒಂದು ದಿನ

          ಮನೆ ಕೆಲಸವನ್ನೆಲ್ಲಾ ಮುಗಿಸಿದ ರತ್ನ ಕೈಯಲ್ಲಿ ಅವತ್ತಿನ ಪೇಪರ್ ಹಿಡಿದು ಮಂಚದ ಮೇಲೆ ಉರುಳಿಕೊಂಡಳು .
ಪೇಪರ್ನಲ್ಲಿ ಎಲ್ಲಾ ಶಾಲೆಗಳಲ್ಲೂ  ರೋಗನಿರೋಧಕ ಚುಚ್ಚುಮದ್ದು ನೀಡುತ್ತಿರುವ ವಿಚಾರ ಓದುತ್ತಿದ್ದಂತೆ ಅವಳ ಕಣ್ಣ ಮುಂದೆ ಪುಟ್ಟಿ ಬಂದಳು, ಅವಳು ಪುಟ್ಟಿಯೇ ಆಗಿಬಿಟ್ಟಳು.ಅಂದು ಪುಟ್ಟಿಯ ಶಾಲೆಗೆ ಚುಚ್ಚುಮದ್ದು ಹಾಕಲು ಜನ ಬಂದಿದ್ದರು.ದಾಂಡಿಗ
ಹುಡುಗರನೇಕರು ಹೆದರಿ ಓಡಿಹೋಗಿದ್ದರು. ಮೇಷ್ಟ್ರು ಅವರನ್ನು ಎಳೆಸಿ ಕರೆತಂದಿದ್ದರು.ಪುಟ್ಟಿಗೆ ಮಾತ್ರ ಭಯವಿರಲಿಲ್ಲ.ಅವಳು
ಇನಾಕ್ಯುಲೇಶನ್ ಹಾಕಿಸಿಕೊಂಡುದಲ್ಲದೆ. "ಏನೂ ನೋವಾಗಲ್ಲ ಕಣ್ರೋ ಇರುವೆ ಕಚ್ಚಿದಂಗೆ ಆಗುತ್ತೆ ಅಷ್ಟೆ" ಅಂತ ಎಲ್ಲರಿಗೂ
ಹೇಳುತ್ತ ಅಲ್ಲೇ ನಿಂತಿದ್ದಳು."ಆ ಪುಟ್ಟ ಹುಡುಗಿಗಿಂತ ಕಡೆಯೇನ್ರೋ ನೀವು" ಅಂತ ಮೇಷ್ಟ್ರು ಸಹ ಆ ದಾಂಡಿಗರನ್ನ   ಚುಚ್ಚುತ್ತಿದ್ದರು.
    ಅಂದು ಶಾಲೆಯಿಂದ ಮನೆಗೆ ಬಂದ ಪುಟ್ಟಿ  ಗೇಟಿನ ಬಳಿ ಕಾದಿದ್ದ ಅಕ್ಕನ ಕೈಗೆ   ಪುಸ್ತಕದ ಚೀಲ ಕೊಟ್ಟು, "ಏನಾದರೂ ತಿಂದ್ಕೊಂಡು ಹೋಗು" ಎಂದು ಅಕ್ಕ ಹೇಳುತ್ತಿದ್ದರೂ ಕಿವಿ ಮೇಲೆ ಹಾಕಿಕೊಳ್ಳದೆ ಎದುರುಗಡೆಯ ಪಾರ್ಕಿಗೆ ಓಡಿದಳು.
ಜಾರುಬಂಡೆಯ  ಮೆಟ್ಟಿಲು ಹತ್ತದೆ, ಜಾರುವ ಕಡೆಯಿಂದ ಕೋತಿಯಂತೆ ಹತ್ತಿ, ಬೋರಲು ಮಲಗಿ ಜಾರಿದಳು. ಅಲ್ಲಿ ಗೆಳತಿಯರಾರೂ ಕಾಣಲಿಲ್ಲ. ಪಕ್ಕದ ಮನೆಗೆ ಹೋಗಿ "ವಿಜೀ ಕುಂಟೆಬಿಲ್ಲೆ ಆಡೋಣ ಬಾರೋ" ಅಂತ ಕೂಗಿದಳು. ವಿಜಿ
"ಆಟ ಆಡಕ್ಕೆ ಬರಲ್ಲ ಕಣೇ ", ಅಂದ . ಅಂತೂ ಪುಟ್ಟಿ ಮನೆಗೆ ಬಂದಳು.  ಮನೆಯನ್ನು ಬಳಸಿ ಹಿತ್ತಲಿಗೆ ಬಂದಳು.ಕಾಚಿ ಗಿಡದಲ್ಲಿದ್ದ ಹಣ್ಣನ್ನೆಲ್ಲಾ ಕಿತ್ತಳು. ಆಕಾಶಕ್ಕೊಂದು ಎನ್ನುತ್ತಾ ಒಂದು ಹಣ್ಣನ್ನು ಮೇಲೆ ಎಸೆದಳು. ಇನ್ನೊಂದನ್ನು ಭೂಮಿತಾಯಿಗೆನ್ನುತ್ತಾ ನೆಲಕ್ಕೆ ಹಾಕಿದಳು. ಉಳಿದದ್ದೆಲ್ಲಾ ತಿಂದು ಲಂಗಕ್ಕೆ ಕೈ ಒರಸಿಕೊಂಡು  ತೊಟ್ಟಿಯ ಬಳಿ ಬಂದಳು.
ಅಕ್ಕನ ದನಿ ಕೇಳಿದ್ದರಿಂದ ತೊಟ್ಟಿಯ ಹಿಂದೆ ಬಚ್ಚಿಟ್ಟುಕೊಂಡಳು.ಅಕ್ಕ ಹತ್ತಿರ ಬಂದೊಡನೆಯೇ ಎದ್ದು ಅಕ್ಕನ ಮೇಲೆ ನೀರು ಎರಚಿದಳು. ಅಕ್ಕ "ಥೂ ಕೋತಿ" ಎಂದು  ಬೈದಳು. ಪುಟ್ಟಿ ಹಲ್ಕಿರಿಯುತ್ತಾ ಹಿತ್ತಿಲ ಬಾಗಿಲಿಂದ ಮನೆಯ ಒಳಗೋಡಿದಳು.    

Thursday, February 2, 2017

 


                                                     ಪುಟ್ಟಿಯ ಬಾಲ್ಯ                                        

ಉಯ್ಯಾಲೆ ಆಡೋಣ ಬನ್ನಿರೋ



    ಬಟ್ಟೆ ಒಣಗ್ಹಾಕಕ್ಕೆ ಬಾಲ್ಕನಿಗೆ ಬಂದ ರತ್ನ ,ಕೆಲಸ ಮುಗಿದ ಮೇಲೆ ಒಳಗೆ ಹೋಗದೆ ಉಯ್ಯಾಲೆಯಲ್ಲಿ ಕುಳಿತಳು.
ಹಿಂದಿನ ದಿನ ಯಜಮಾನರ ಹುಟ್ಟಿದ ಹಬ್ಬಕ್ಕಾಗಿ ಮಕ್ಕಳು ಉಡುಗೊರೆಯಾಗಿ ಕೊಟ್ಟ ಬೆತ್ತದ ಸ್ಪ್ರಿಂಗ್ ಉಯ್ಯಾಲೆ. ಉಯ್ಯಾಲೆ ತೂಗಿದಾಗ ಅವಳ ಕಣ್ಣ ಮುಂದೆ ಕಂದು ಬಣ್ಣದ ಫ಼್ರಾಕ್ ತೊಟ್ಟ ಪುಟ್ಟಿ ಬಂದಳು.ಫ಼್ರಾಕಿನ ಎದೆಯ ಭಾಗದಲ್ಲಿ ಕಸೂತಿ ಹಾಕಿದ ಎರಡು ತೆಂಗಿನ ಮರಗಳು ಹಾಗೂ ಒಂದು ಮನೆಯಿತ್ತು. ಅದು ಕಾಲೇಜಿನಲ್ಲಿ ಓದುತ್ತಿದ್ದ ಪುಟ್ಟಿಯ ಅಣ್ಣ ಅವಳಿಗಾಗಿ ತಂದ ಫ಼್ರಾಕ್.ಅದು ಹಳೆಯದು ತುಂಬಾ ಚಿಕ್ಕದಾಗಿದೆ ಎಂದು ಅಮ್ಮ ಹೇಳಿದರೂ ಕೇಳದೆ ಅದನ್ನೇ ತೊಟ್ಟಿದ್ದಳು. ಆವತ್ತಷ್ಟೇ ಅವಳ
ಪರೀಕ್ಷೆ ಮುಗಿದಿತ್ತು.ಮಾರನೆಯ ದಿನ ಉಗಾದಿ ಹಬ್ಬ. ತೋಳಿಗೆ ಹಗ್ಗದ ಸುರುಳಿ ಸೇರಿಸಿ, ಅಣ್ಣನ ಹಿಂದೆ "ಉಯ್ಯಾಲೆ ಕಟ್ಕೊಡೋ" ಅಂತ ಬೇಡುತ್ತಾ ಸುತ್ತುತ್ತಿದ್ದಳು. ಅಣ್ಣ - ನೀರು ತಂದ್ಕೊಡು,  ನಾಳೆ ಕಾಯಿ ಒಬ್ಬಟ್ಟು ಮಾಡ್ತಾರೋ, ಬೇಳೆ ಒಬ್ಬಟ್ಟು ಮಾಡ್ತಾರೋ ಅಮ್ಮನ್ನ ಕೇಳ್ಕೊಂಡ್ ಬಾ , ತುಲಸಿಗಿಡದ ಪಕ್ಕದ ಬಿಳಿ ದಾಸವಾಳದ ಗಿಡದಲ್ಲಿ ಎಷ್ಟು ಹೂ ಬಿಟ್ಟಿದೆ ಎಣಸಿಕೊಂಡು ಬಾ - ಅಂತ ಒಂದಾದ ಮೇಲೊಂದು ಕೆಲಸ ಹೇಳಿ ಅವಳನ್ನ ಒಂದು ಗಂಟೆ ಸತಾಯಿಸಿ, ಕೊನೆಗೂ ಉಯ್ಯಾಲೆ
ಕಟ್ಟಿಕೊಟ್ಟು ಬಿಟ್ಟ.ಹಗ್ಗದ ಉಯ್ಯಾಲೆ ಒತ್ತದಂತೆ, ಅಕ್ಕ ಅಮ್ಮನ ಹಳೆಯ ಹತ್ತಿಯ ಸೀರೆಯೊಂದನ್ನು ಅದರಮೇಲೆ ಹಾಕಿದಳು.
ಪುಟ್ಟಿ ಉಯ್ಯಾಲೆಯ ಮೇಲೆ ಕುಳಿತು ಜೀಕಿದಳು. ಅವಳ ಆನಂದಕ್ಕೆ ಪಾರವೇ ಇರಲಿಲ್ಲ. ಆಗ ಅವಳ ಆತ್ಮೀಯ ಗೆಳತಿ ಚಿನ್ನಿ,
ಒಂದು ಜಡೆ ಹಾಕಿಕೊಂಡು ಇನ್ನೊಂದು ಜಡೆ ಬಿಚ್ಚಿಕೊಂಡು ಗೇಟಿನ ಬಳಿ ಬಂದಳು.  ಪುಟ್ಟಿ "ಉಯ್ಯಾಲೆ ಆಡೋಣ ಬಾರೆ ",ಎಂದು ಕೂಗಿದಳು." ನಾನೂ ಉಯ್ಯಾಲೆ ಕಟ್ಟಿಸ್ಕೊಳ್ತೀನಿ" ಎನ್ನುತ್ತ ಚಿನ್ನಿ ಓಡಿದಳು. ಕೆಲವು ಕ್ಷಣದಲ್ಲೇ ’ಪುಟ್ಟಿ ಉಯ್ಯಾಲೆ ಆಡ್ತಿದಾಳೆ ನಂಗೂ ಕಟ್ಕೊಡು" ಎನ್ನುವ ರಾಗ ಪಕ್ಕದ ಮನೆಯಿಂದ ತೇಲಿಬಂತು.
      ಅವರೂರಿನಲ್ಲಿ ಉಗಾದಿಯನ್ನ ಉಯ್ಯಾಲೆ ಹಬ್ಬ ಅಂತಾನೇ ಕರೀತಿದ್ರು. ಮನೆಮನೆಯಲ್ಲಿ ಉಯ್ಯಾಲೆ ಕಟ್ಟುವುದಲ್ಲದೆ ಊರಿನ ಬೀದಿಯ ಮರಗಳಿಗೆಲ್ಲಾ ಉಯ್ಯಾಲೆ ಕಟ್ಟಿರುತ್ತಿದ್ದರು.ಮನೆಯಲ್ಲಿ ಆಡುವುದಷ್ಟೇ ಅಲ್ಲದೆ ಪುಟ್ಟಿ ಮರಕ್ಕೆ ಕಟ್ಟಿದ ಉಯ್ಯಾಲೆಯಲ್ಲಿ ಸಹ ಯಾರದಾದರೂ ತೊಡೆಯ ಮೇಲೆ ಕುಳಿತು ಜೀಕೇ ಬಿಡ್ತಿದ್ಲು.ಎತ್ತರದ ಮರದ ಜೋಕಾಲಿಯಲ್ಲಿ ಕುಳಿತು.ಬೀದಿಯ ಆ ಕಡೆಯ ಮರದ ಎಲೆಯನ್ನು ಕೈಯಲ್ಲೋ ಎರಡು ಕಾಲುಗಳ ಮಧ್ಯನೋ ತರಿದು ತಂದು "ಅದ್ದು ಮಜಾ"
ಅಂತ ಕೂಗ್ತಿದ್ದಳು.
     ಪುಟ್ಟಿಗೆ ಚಿಕ್ಕವಳಿದ್ದಾಗಿನಿಂದಲೂ  ಉಯ್ಯಾಲೆಯ ಮೇಲೆ ವಿಶೇಷ ಪ್ರೀತಿ.ಅದರ ಮೇಲೆ ಕೂರಿಸಿ ಹಾಡು ಹೇಳುತ್ತಾ
ಅಕ್ಕ ಊಟ ತಿನ್ನಿಸುತ್ತಿದ್ದಳು.ಅವಳು ಯುವತಿಯಾದ ನಂತರ ನಿದ್ದೆಯಲ್ಲಿ  ಸಹಾ ಅವಳು ಒಂದು ಸುಂದರವಾದ ಜಲಪಾತದ ಬದಿಯಲ್ಲಿ ಎತ್ತರವಾದ ಮರಕ್ಕೆ ಕಟ್ಟಿದ ಉಯ್ಯಾಲೆಯಾಡುತ್ತಿದ್ದ ಕನಸೇ ಪದೇ ಪದೇ ಬೀಳುತ್ತಿತ್ತು. ಮನೆಯ ಮುಂದೆ ಪಾರ್ಕ್ನಲ್ಲಿ
ಉಯ್ಯಾಲೆ ಜಾರುಬಂಡೆ ಬಂದ ನಂತರ ಪುಟ್ಟಿ ಒಂದು ಉಯ್ಯಾಲೆಯ ಮೇಲೆ ಸದಾ ಇರ್ತಾಳೆ ಬೇರೆಯವರಿಗೆ ಆಡಕ್ಕೇ ಬಿಡಲ್ಲ
ಎಂಬ ದೂರು ಸಹ ಇತ್ತು.
        ’ಅತ್ತೇ’ ಸೊಸೆಯ ದನಿ ಕೇಳಿ ರತ್ನಾ ಒಳ ನಡೆದಳು.