Saturday, April 15, 2017

                                                ಪುಟ್ಟಿಯ ಬಾಲ್ಯ

ಹಾವು ಹಾವು ಹಾವು

            ಆವತ್ತು ರಜಾದಿನ. ರತ್ನಳ ಮಕ್ಕಳೆಲ್ಲ ಮಗನ ಮುಂಜಿಯ ವಿಡಿಯೊ ನೋಡುತ್ತ ಕುಳಿತಿದ್ದರು.ಮುಂಜಿಯ  ದಿನದ ವಿಶೇಷಗಳನ್ನೆಲ್ಲ ನೆನಪಿಸಿಕೊಂಡು ಮಗ ಮುಂಜಿಯ ಹಿಂದಿನದಿನ ಉಪನಯನ ನಡೆದ  ತಾತನ ಮನೆಯ ಹಿತ್ತಿಲಲ್ಲಿ ಹಾವು
ಬಂದಿದ್ದ ವಿಚಾರ ಹೆಂಡತಿಗೆ ಹೇಳಿದ." ಹೌದಾ! ಆಮೇಲೆ?" ಸೊಸೆಯ ಪ್ರಶ್ನೆ. "ನಿಮ್ಮತ್ತೆ ನಾಗರಹಾವು ವಿಷ್ಣುವರ್ಧನ್ ತರ
ಹಾವನ್ನ್ ಎತ್ಕೊಂಡು ಹೋಗಿ ದೂರ ಬಿಟ್ಬಿಟ್ಟಳು."ಯಜಮಾನರ ತಮಾಶೆ.. " ಹೌದಾ?" ಸೊಸೆ ಚಿಕ್ಕ ಮಗಳನ್ನು ಕೇಳಿದಳು. "ಅವಳ್ಗೇನ್ ಗೊತ್ತು ಅವಳು ಆಗ ಹುಟ್ಟಿದ್ರೆ ತಾನೆ" ದೊಡ್ಡ ಮಗಳ ವಿವರಣೆ."ಅಮ್ಮ ಕೋಲಿಂದ ಹೆದರಿಸಿ ಓಡಿಸಿದರು." ಮಗ ನಡೆದದ್ದನ್ನ ಹೇಳಿದ." ನಿಮಗೆ ಭಯ ಆಗಲಿಲ್ವಾ?" ಸೊಸೆಯ ಪ್ರಶ್ನೆ. "ಭಯ ಯಾಕೆ ?ಅದಿನ್ನು ಪುಟ್ಟ ಮರಿ."ಉತ್ತರಿಸಿದ ರತ್ನಳ
ಮನ ಬಾಲ್ಯಕ್ಕೆ ಜಾರಿತು.
        
         ರಜಾದಿನ ಪುಟ್ಟಿ ಒಂದು ಹೊಸಾ ಅನುಭವ ಪಡೆಯಲು ಹೊರಟಿದ್ದಳು. ಸಹಪಾಠಿಯೊಬ್ಬ ಏಡಿ ಹಿಡಿಯಲು ಕಾಲುವೆ
ಬಳಿ ಹೋಗುತ್ತಿದ್ದ. ಪುಟ್ಟಿ ಅವನ ಹಿಂದೆ ಹೋಗಿದ್ದಳು. ಅವನು ಮೂರ್ನಾಕು ಏಡಿಗಳನ್ನು ಹಿಡಿದು ಚೀಲವೊಂದಕ್ಕೆ ತುಂಬಿದ್ದ.ಪುಟ್ಟಿಗೆ ಏಡಿಯನ್ನು ಮುಟ್ಟಬೇಕೆನಿಸಲಿಲ್ಲ.ಮತ್ತೆ ಇಬ್ಬರೂ ಕಾಲುವೆಯ ಮೆಟ್ಟಿಲ  ಮೇಲೆ ನಿಂತಿದ್ದರು.ಅಷ್ಟರಲ್ಲಿ ಮಿಡಿನಾಗರವೊಂದು ನೀರಲ್ಲಿ ತೇಲುತ್ತಾ ಬಂದಿತ್ತು.ಇಬ್ಬರೂ ಮನೆಕಡೆಗೆ ಓಟ  ಕಿತ್ತರು.
         ಆ ದಿನಗಳಲ್ಲಿ ಪುಟ್ಟಿಯ ಶಾಲೆ ಒಂದು ಗುಡಿಸಿಲಿನಲ್ಲಿ ನಡೆಯುತ್ತಿತ್ತು.ಪುಟ್ಟಿ ಕೈಕಟ್ಟಿ ನಿಂತು ತೂಗಾಡುತ್ತಾ ಎರಡೊಂದ್ಲ
ಎರಡು ಮಗ್ಗಿ ಹೇಳಿಕೊಡುತ್ತಿದ್ದಳು.ಮೇಷ್ಟ್ರು ಬಾಗಿಲಿನ ಚೌಕಟ್ಟಿಗೆ ಒರಗಿ ಚಾಚಿದ ತೋಳ ಮೇಲೆ ಒರಗಿ ತೂಕಡಿಸುತ್ತಿದ್ದರು.
ಮಾಡಿಂದ ಹಾವೊಂದು ಪುಟ್ಟಿಯ ಪಕ್ಕದಲ್ಲೇ ಬಿದ್ದಿತ್ತು.ಅಲ್ಲಿಂದ ಮೇಷ್ಟ್ರ ಕೈ ಕೆಳಗೆ ತೂರಿ ಓಡಿದ ಪುಟ್ಟಿ ನಿಂತಿದ್ದು ಪಕ್ಕದ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆಯಲ್ಲಿದ್ದ ಅಕ್ಕನ ಬಳಿ.
        ಒಂದು ದಿನ ಪುಟ್ಟಿ ಚಿನ್ನಿಯೊಂದಿಗೆ ಶಾಲೆಗೆ ಹೊರಟಿದ್ದಳು.ಬೇಲಿಯಲ್ಲಿ ಬಿಟ್ಟಿದ್ದ ಗಂಟೆ ಹೂವಿನ ಮೊಗ್ಗನ್ನು ಹಣೆಗೆ ಬಡಿದು
ಚಟ್ ಚಟ್ ಸದ್ದು ಮಾಡುತ್ತಾ ಹೋಗುತ್ತಿದ್ದರು.ಅಷ್ಟರಲ್ಲಿ ದುಂಡಾದ ಕಲ್ಲೊಂದು ಕಂಡಿತು. ಇಬ್ಬರೂ ಅದನ್ನು ಒಬ್ಬರ ನಂತರ
ಒಬ್ಬರು ಒದೆಯುತ್ತಾ ಹೊರಟರು. ಚಿನ್ನಿ ಒದೆದ ಕಲ್ಲು ಉರುಳುತ್ತಾ ಹೋಗಿ ಚರಂಡಿಯಲ್ಲಿ ಬಿತ್ತು. ಇಬ್ಬರೂ ಚರಂಡಿಯ ಬಳಿ
ಹೋಗಿ ಬಗ್ಗಿದರು.ನೀರಿಲ್ಲದ ಚರಂಡಿಯಲ್ಲಿ ದೊಡ್ಡ ಹಾವೊಂದು ಸರಸರನೆ ಸರಿದು ಹೋಗುತ್ತಿತ್ತು. ಚರಂಡಿಯಲ್ಲಿ ಹಾವು ರಸ್ತೆಯಲ್ಲಿ ಇವರಿಬ್ಬರೂ ಮುಂದೆ ಸಾಗಿದರು. ಸ್ವಲ್ಪ ಹೊತ್ತಿನ ನಂತರ ಹಾವು ಬಿರುಕಿನಲ್ಲಿ ಮರೆಯಾಯಿತು.ಎತ್ತಿನ ಕೊರಳ
ಕಿರುಗಂಟೆಯ ದನಿ ಕೇಳಿದ್ದರಿಂದ, ಗಾಡಿಯವರ ಬಳಿ ಕಬ್ಬು ಬೇಡಲು ಗೆಳತಿಯರಿಬ್ಬರೂ ಓಡಿದರು.
        ಆ ದಿನ ಶಾಲೆಯಲ್ಲಿ ನರಸಿಂಹ ಮೂರ್ತಿ ಮೇಷ್ಟ್ರು ಗಾಂಧೀಜಿಯ ಬಗ್ಗೆ ತಿಳಿಸಿದರು.ಗಾಂಧೀಜಿಯವರು ತುಂಬಾ ಒಳ್ಳೆಯವರೆಂಬ ಭಾವನೆ ಪುಟ್ಟಿಗೆ ಬಂತು.ಮನೆಗೆ ಬಂದ ಪುಟ್ಟಿ ಆಟ ಪಾಠ ಊಟ ಮುಗಿಸಿ ಮಲಗಿದಳು.ರಾತ್ರಿ ಕನಸಿನಲ್ಲಿ--- ಪುಟ್ಟಿ ಜಗಲಿಯ ಮೇಲೆ ಗೆಳತಿಯರೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದಳು.ದೊಡ್ಡ ಹಾವೊಂದು ಜಗಲಿಯ ಕೊನೆಯಲ್ಲಿದ್ದ ಮೆಟ್ಟಿಲ ಮೇಲೆ ಮಲಗಿತು.ಮಕ್ಕಳಿಗೆಲ್ಲಾ ಗಾಬರಿ, ಭಯ.ಎತ್ತರವಾದ ಜಗಲಿಯಿಂದ ಇಳಿಯುವುದು ಹೇಗೆಂಬ ಆತಂಕ .ಅಷ್ಟರಲ್ಲಿ ಅಲ್ಲಿಗೆ ಗಾಂಧೀಜಿ ಬಂದರು.ಜಗಲಿಯ ಇನ್ನೊಂದು  ಪಕ್ಕ ಬೋರಲಾಗಿ ಮಲಗಿದರು ಮಕ್ಕಳೆಲ್ಲಾ  ಒಬ್ಬೊಬ್ಬರಾಗಿ ಗಾಂಧೀಜಿಯ ಬೆನ್ನ ಮೇಲೆ ಕಾಲಿಟ್ಟು ಜಿಗಿದರು .
        ಮಕ್ಕಳಿಗೆ ಹಾಲು ಕೊಡಲು ಎದ್ದ ರತ್ನ "ಮಕ್ಕಳಿಗೆಲ್ಲ ತಾತ ಲೋಕಕ್ಕೆಲ್ಲ ದಾತ ಅವರೆ ನಮ್ಮ ಗಾಂಧೀ ಶ್ರೀ ಮಹಾತ್ಮ ಗಾಂಧೀ" ಎಂದು ಗುನುಗುತ್ತಾ ಅಡುಗೆಮನೆಗೆ ನಡೆದಳು. 
       

No comments:

Post a Comment