Wednesday, July 19, 2023

ಗೆಳತಿಗೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನೊಡನೆ ಅತ್ತಿದ್ದೆ, ನಕ್ಕಿದ್ದೆ ನಿನ್ನ ನೋಡಿ ನಾನು ಚಿನ್ನು ಬಂದಳೆಂದು ಕುಣಿದು ಕುಪ್ಪಳಿಸಿದ್ದೆ ಶಾಲೆಯಲ್ಲಿ ಒಟ್ಟಿಗೆ ಕಲಿತಿದ್ದೆ ಕಾಗೆಯೆಂಜಲು ಮಾಡಿ ಸೀಬೇಕಾಯಿ ಕೊಟ್ಟಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನೊಡನೆ ಚೌಕಾಭಾರ, ಚನ್ನೆಮಣೆ, ಕಲ್ಲಾಟ, ಕುಂಟೆಬಿಲ್ಲೆ ಆಡಿದ್ದೆ ಕಪ್ಪೆಗೂಡು, ಗಾಳಿಪಟ ಕಟ್ಟಿದ್ದೆ, ಪುರಿಯಲ್ಲಿ ಅನ್ನ ಮಾಡಿ ಬಡಿಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನೊಡನೆ ಜಗಳವಾಡಿ ಠೂ ಬಿಟ್ಟಿದ್ದೆ ನನ್ನನ್ನು ಜಾರುಬಂಡೆಯಿಂದ ತಳ್ಳಿದ್ದೆ ನಿನ್ನಮ್ಮ ಕೊಟ್ಟ ತಿಂಡಿಗಳನ್ನು ಹಂಚಿಕೊಂಡಿದ್ದೆ ನೀನು ಸೋತರೂ ನನ್ನ ಗೆಲುವಿಗೆ ಸಂಭ್ರಮಿಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನೀನು ನೋಡಿದ ಸಿನಿಮಾ ಕತೆಯನ್ನೆಲ್ಲಾ ಹೇಳಿದ್ದೆ ನಾನು ಪೆದ್ದು ಪೆದ್ದಾಗಿ ಬರೆದ ಪದ್ಯಗಳನ್ನು ಬರೆದು ಇಟ್ಟಿದ್ದೆ ನನ್ನೊಡನೆ ಲೈಬ್ರರಿಗೆ ಬಂದಿದ್ದೆ, ಓದಿದ್ದ ಕತೆಗಳನ್ನು ಚರ್ಚಿಸಿದ್ದೆ ನನ್ನ ಕಲಿಸುವ ಕೌಶಲ್ಯವನ್ನು ಮೊದಲು ಗುರುತಿಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನ ವೃತ್ತಿಬದುಕಿನ ಸುಂದರ ಕ್ಷಣಗಳಲ್ಲಿ ಭಾಗಿಯಾಗಿದ್ದೆ ನನ್ನ ಮದುವೆಯಲ್ಲಿ ಲಿಪ್ ಸ್ಟಿಕ್ ಹಚ್ಚಿ ಅಲಂಕಾರ ಮಾಡಿದ್ದೆ ನನ್ನ ಮಗುವನ್ನು ನನಗಿಂತ ಮೊದಲೇ ಎತ್ತಿಕೊಂಡಿದ್ದೆ ನನ್ನ ಬದುಕು ಸದಾ ಹಸಿರಾಗಲೆಂದು ಹಾರೈಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನ ಪೀಜೇಗಳಿಗೆಲ್ಲಾ ನಕ್ಕಿದ್ದೆ, ಕೊರತೆಯಾದಾಗ ಸಾಲವನ್ನೂ ಕೊಟ್ಟಿದ್ದೆ ಒಮ್ಮೆ ಅಮ್ಮ, ಒಮ್ಮೆ ಸೋದರಿ, ಒಮ್ಮೆ ಪತಿ, ಒಮ್ಮೆ ಮಗನ ರೂಪದಲ್ಲಿ ಗೆಳೆತನದ ಸವಿಯ ಉಣಬಡಿಸಿದ್ದೆ ಗೆಳತಿಯಾಗಿ ನೀನು ನನ್ನೊಡನಿದ್ದೆ ನನ್ನೊಡನೆ ಅತ್ತಿದ್ದೆ, ನಕ್ಕಿದ್ದೆ. ನೀನು ಕೇವಲ ಭೂತವಲ್ಲ ವರ್ತಮಾನ, ಭವಿ಼ಷ್ಯ ಸಹ ಆಗಿರುವೆ ಸದಾ ಜೊತೆಗಿರುವೆಯೆಂದು ಆಶಿಸುವೆ ಪೀಜೆ-PJ- Poor joke

Wednesday, July 5, 2023

ಪುಟ್ಟಿಯ ಬಾಲ್ಯ ಧೃವನ ಪ್ರಸಂಗ ಚಂದಮಾಮನನ್ನು ತೋರಿಸಿ ಮಗಳು ಮಗುವಿಗೆ ಊಟ ಮಾಡಿಸುತ್ತಿದ್ದಳು. ಅಮ್ಮ ಮಗನ ಸಂಭಾಷಣೆ ಕೇಳುತ್ತಾ ರತ್ನ ಬಾಲ್ಕನಿಯಲ್ಲಿ ಕೂತಿದ್ದಳು. ಮಗಳು ಮಗುವಿಗೆ ಧೃವ ನಕ್ಷತ್ರ ತೋರಿಸಿ- ಅಮ್ಮ ಧೃವನ ಕತೆ ಸ್ವಲ್ಪ ಮರೆತುಹೋಗಿದೆ, ನಿನಗೆ ನೆನಪಿದ್ದರೆ ಹೇಳು- ಅಂದಳು. ಈಗ ಪ್ರಾಣಿಗಳ ಕತೆ ಹೇಳು ಸಾಕು. ಧೃವನ ಕತೆ ಕೇಳಲು ಇನ್ನೂ ಸ್ವಲ್ಪ ದೊಡ್ಡವನಾಗಬೇಕು ಎಂದು ಹೇಳುತ್ತಾ ಅವಳು ಬಾಲ್ಯಕ್ಕೆ ಜಾರಿದಳು. ಪುಟ್ಟಿ ಮನ:ಪಟಲದ ಮೇಲೆ ಮೂಡಿದಳು. ಪುಟ್ಟಿಯ ಗೆಳತಿ ಚಿನ್ನುಗೆ ತಂಗಿ ಹುಟ್ಟಿದ್ದಳು. ಅದೇ ಸಮಯದಲ್ಲಿ ವಿಜಿಗೆ ಸಹ ತಂಗಿ ಹುಟ್ಟಿದ್ದಳು.ಕೆಂಪು ಕೆಂಪಾಗಿದ್ದಆ ಪುಟ್ಟ ಪಾಪುವನ್ನು ನೋಡಿ, ಪುಟ್ಟಿಗೂ ತಮ್ಮ ಅಥವಾ ತಂಗಿ ಬೇಕೆಂದು ಅನಿಸಿಬಿಟ್ಟಿತ್ತು. ಅಮ್ಮನನ್ನು ಕೇಳಿದಳು. ಅಮ್ಮ ನಕ್ಕುಬಿಟ್ಟರು ನಮಗೆ ನೀನೇ ಪಾಪು ಎಂದು ಮುದ್ದು ಮಾಡಿದರು. ಆಸ್ಪತ್ರೆಗೆ ಹೋಗಿ ಕೇಳಿದರೆ ಮಗು ಕೊಡ್ತಾರೆ, ಹೋಗಿ ತೊಗೊಂಡು ಬಾ ಎಂದು ಹಟ ಮಾಡುತ್ತಾ ಕುಳಿತಳು. ಅಮ್ಮ ಕ್ಯಾರೇ ಅನ್ನದೆ, ಕಸೂತಿ ಹಿಡಿದು ಕುಳಿತರು. ಚಿಕ್ಕಕ್ಕ ಅಣಕಿಸಿ ನಕ್ಕಳು. ದೊಡ್ಡಕ್ಕ ಕಡಲೆಕಾಯಿ ಬೀಜ ಕೊಟ್ಟು ಗಮನ ಬೇರೆಡೆಗೆ ಸೆಳೆದಳು. ಶಾಲೆಗೆ ಹೋಗಿದ್ದ ಮೇನೇಜರ್ ಮಕ್ಕಳೆಲ್ಲ ಮನೆಗೆ ಬಂದರು. ಅವರ ಅಪ್ಪ ಅಮ್ಮ ಯಾವುದೋ ಕೆಲಸದ ಮೇಲೆ ದೂರದ ಊರಿಗೆ ಹೋಗಿದ್ದರಿಂದ ಅವರೆಲ್ಲಾ ಪುಟ್ಟಿಯ ಮನೆಯಲ್ಲೇ ತಂಗಿದ್ದರು. ಸಂಜೆಯಾಯಿತು. ಎಲ್ಲಾ ವಾಕಿಂಗ್ ಹೊರಟರು. ಅಮ್ಮನೂ ಜೊತೆಗೆ ಬರ್ತಿದ್ದರು ಮತ್ತು ಕತೆ ಹೇಳ್ತಿದ್ದರು. ಪುಟ್ಟಿ ಮೊದಲ ಬಾರಿಗೆ ರಾಮಾಯಣದ ಕತೆ ವಾಕಿಂಗ್ ಹೋಗುವಾಗಲೇ ಕೇಳಿದ್ದು. ಅವತ್ತು ಧೃವನ ಕತೆ ಹೇಳಿ ಧೃವ ನಕ್ಷತ್ರ ತೋರಿಸಿದರು. ಮರಣಹೊಂದಿದ ಮಹಾಪುರುಷರಲ್ಲದೆ, ಮಹಾನುಭಾವರಂತೆ ಬದುಕಿದ ತನ್ನ ತಾತಂದಿರು ಸಹ ನಕ್ಷತ್ರಗಳಾಗಿದ್ದಾರೆಂದು ಪುಟ್ಟಿಗೆ ಅವತ್ತು ಗೊತ್ತಾಯಿತು. ತಾನು ನೋಡದೇ ಇದ್ದ ತಾತಂದಿರನ್ನು ತಾರೆಗಳ ರೂಪದಲ್ಲಿ ನೋಡಿ ಆಗಾಗ ಅವರೊಂದಿಗೆ ಪುಟ್ಟಿ ಮಾತಾಡುವುದಿತ್ತು. ಧೃವ ತಂದೆಯ ಪ್ರೀತಿಗಾಗಿ ದೇವರನ್ನು ಹುಡುಕುತ್ತಾ ಹೋಗಿದ್ದು ಪುಟ್ಟಿಯ ಮನಮುಟ್ಟಿತ್ತು. ತಾನೂ ತಮ್ಮ/ತಂಗಿಗಾಗಿ ಬೇಡಲು, ದೇವರ ಭೇಟಿ ಮಾಡಲು ನಿರ್ಧರಿಸಿದಳು. ಆಗ ಕತ್ತಲೆಯಾದ್ದರಿಂದ ಭಯವಾಯಿತು. ರಾತ್ರಿ ಅದೇ ಯೋಚನೆ ಮಾಡುತ್ತಾ ಮಲಗಿದಳು. ಬೆಳಗಾಯಿತು. ಹಾಲು ಕುಡಿದು, ಹಿಪ್ಪುನೇರಳೆ ಹಣ್ಣು, ಕಾಚಿ ಹಣ್ಣು, ಒಂದು ಟೊಮೇಟೊ ಎಲ್ಲಾ ಲಂಗದಲ್ಲಿ ತುಂಬಿಕೊಂಡು ಹೊರಟಳು. ದಾರಿಯಲ್ಲಿ ಎದುರಿಗೆ ಗಡ್ಡದ ರಾಮಯ್ಯ ಬಂದರು. ಪಕ್ಕದಲ್ಲಿದ್ದ ಚಿನ್ನು ಮನೆಗೆ ನುಗ್ಗಿ ಬಾಗಿಲ ಹಿಂದೆ ಅವಿತಳು. ಇಲ್ಯಾಕೆ ನಿಂತಿದೀಯ ಪುಟ್ಟಿ ಅಂತ ಚಿನ್ನು ಅಪ್ಪ ಕೇಳಿದರು. ಯಾರೋ ಗಡ್ಡ ಬಿಟ್ಟವರು ಮನೆ ಮುಂದೆ ಹೋದ್ರೆನೋ. ಅವಳಿಗೆ ಭಯ ಅದಕ್ಕೆ ಬಚ್ಚಿಟ್ಟುಕೊಂಡಿದಾಳೆ -ಚಿನ್ನು ಅಣ್ಣ ಹೇಳಿದ. ಮನೆಗಳನ್ನೆಲ್ಲಾ ದಾಟಿ ಮಾವಿನ ತೋಪಿನ ಕಡೆ ಪುಟ್ಟಿ ಹೊರಟಳು. ಮೋರಿ ಪಕ್ಕದಲ್ಲಿ ಹಸಿರು ಹಾವೊಂದು ಸರ ಸರ ಎಂದು ಹರಿದು ಹೋಯಿತು. ಮಾವಿನ ಮರದ ಮೇಲೆ ಅಳಿಲುಗಳೆರಡು ಚಿನ್ನಾಟವಾಡುತ್ತಿದ್ದವು. ಲಂಗದಲ್ಲಿದ್ದ ಹಣ್ಣೆರಡನ್ನು ಅಳಿಲಿಗೆ ಎಸೆದಳು. ಅಳಿಲುಗಳು ತಿರುಗೂ ನೋಡಲಿಲ್ಲ. ಹಣ್ಣುಗಳು ಕೆಳಗೆ ಬಿದ್ದು ಮಣ್ಣಾಯಿತು. ಭೂಮಿಗೆ ಆಕಾಶಕ್ಕೆಂದು ಒಂದೊಂದು ಹಣ್ಣು ಎಸೆದ ಪುಟ್ಟಿ, ಉಳಿದ ಹಣ್ಣುಗಳನ್ನು ನಿಧಾನವಾಗಿ ಸವಿಯುತ್ತಾ ಸುತ್ತ ಮುತ್ತ ನೋಡಿಕೊಂದು ಹೋಗುತ್ತಿದ್ದಳು. ಬಸವನ ಹುಳವೊಂದು ಮೆಲ್ಲಗೆ ನಡೆಯುತ್ತಾ ಹೋಗುತ್ತಿತ್ತು. ಬಿಳಿ ತುಣುಕನ್ನು ಬಾಯಲ್ಲಿ ಹಿಡಿದ ಕರಿ ಇರುವೆಗಳು, ಇರುವೆ ಗೂಡಿನಿಂದ ಸಾಲಾಗಿ ಹೊರಟಿದ್ದವು. ಸುತ್ತ ಮತ್ತ ನೋಡುತ್ತಾ ಲಂಗದಲ್ಲಿದ್ದ ಹಣ್ಣು ತಿನ್ನುತ್ತಾ ಪುಟ್ಟಿ ಮುಂದೆ ಹೋದಳು. ನಾರದರು ಆಕಾಶದಿಂದ ಇಳಿಯಬಹುದೆಂದು ಮಧ್ಯೆ ಮಧ್ಯೆ ತಲೆ ಮೇಲೆತ್ತಿ ನೋಡುತ್ತಿದ್ದಳು. ನಾರದರಿಗೆ ಕೇಳಿಸಲೆಂದು ನಾರಾಯಣ ನಾರಾಯಣ ಎಂದು ಜೋರಾಗಿ ಹೇಳುತ್ತಾ ಹೋಗುತ್ತಿದ್ದಳು. ದೂರದಲ್ಲಿ ಯಾರೋ ಮಾತಾಡುವ ಸದ್ದು ಕೇಳಿಸಿತು. ಅವರು ದಾಟುವವರೆಗೆ ಮರದ ಮರೆಯಲ್ಲಿ ಅಡಗಿ ಕುಳಿತಳು. ದೇವರು ಪಾಪು ಕೊಟ್ಟರೆ ಹೇಗೆ ಕರ್ಕೊಂಡು ಹೋಗೋದು-ಯೋಚನೆ ಬಂತು. ತಾನೇ ಎತ್ತಿಕೊಂಡು ಹೋಗುವೆನೆಂದು ಅಂದುಕೊಂಡಳು. ನಾರಾಯಣ ಸ್ಮರಣೆ ನಡದೇ ಇತ್ತು. ಇನ್ನೂ ನಾರದ ಏಕೆ ಬರಲಿಲ್ಲ. ಬೇರೆ ಯಾರಿಗೋ ದಾರಿ ತೋರಿಸಲು ಹೋಗಿರಬಹುದು- ಅಂತ ಅನಿಸಿತು. ತಮ್ಮ ಸಿಗುತ್ತಾ ತಂಗಿನಾ ಒಂದ್ಸಲ ತಮ್ಮ ಇರಲಿ ಅನಿಸಿದರೆ ಇನ್ನೊಮ್ಮೆ ತಂಗಿ ಬೇಕು ಎನಿಸುತ್ತಿತ್ತು. ಕೊನೆಗೆ ಯಾವುದಾದರೂ ಸರಿ ಒಂದು ಪಾಪು ಬೇಕು ಅನಿಸಿತು. ಅಷ್ಟರಲ್ಲಿ ಸ್ನಾನ ಮಾಡಿಸಲು ಪುಟ್ಟಿಯನ್ನು ಕರೆಯಲು ಬಂದ ದೊಡ್ಡಕ್ಕನಿಗೆ ಪುಟ್ಟಿ ಹಿತ್ತಿಲಲ್ಲಿ ಕಾಣಲಿಲ್ಲ. ಮನೆಯ ಸುತ್ತ ಹುಡುಕಿದರೂ ಪುಟ್ಟಿ ಸಿಗಲಿಲ್ಲ. ಚಿನ್ನು, ವಿಜಿಗೂ ಗೊತ್ತಿರಲಿಲ್ಲ. ಅಕ್ಕಂದಿರಿಗೆ ಗಾಬರಿ ಶುರು ಆಯಿತು. ಅಣ್ಣನಿಗೆ ಹೇಳಿದರು. ಅಣ್ಣ ಸೈಕಲ್ ಹತ್ತಿ ಹುಡುಕಲು ಹೊರಟ. ದಾರಿಯಲ್ಲಿ ಯಾರೋ - ಮಾವಿನ ತೋಪಿನ ಕಡೆ ಹೋಗುವುದನ್ನು ನೋಡಿದೆ. ಮಗು ಒಂದೇ ಬಂದಿರಲ್ಲ. ನೀವು ಮುಂದೆ ಇರಬಹುದು ಅಂದುಕೊಂಡೆ –ಅಂದರು. ಅಣ್ಣ ತೋಪಿನ ಕಡೆ ಸೈಕಲ್ ತಿರುಗಿಸಿದ. ಪುಟ್ಟಿ ಗಿಣಿ ಕಚ್ಚಿ ಕೆಳಗೆ ಹಾಕಿದ ಮಾವಿನಕಾಯನ್ನು ತಿನ್ನುತ್ತಾ ನಾರಾಯಣ ಎಂದು ಹೇಳುತ್ತಾ ಹೋಗುತ್ತಿದ್ದಳು. ದೂರದಲ್ಲಿ ನರಿ ಊಳಿಡುವುದು ಕೇಳಿಸಿತು. ಭಯ ಶುರುವಾಯಿತು. ತಮ್ಮನೂ ಬೇಡ ತಂಗಿನೂ ಬೇಡ ಅನಿಸಲು ಶುರುವಾಯಿತು. ಅಷ್ಟರಲ್ಲಿ ಅಣ್ಣನ ಕರೆ ಕೇಳಿಸಿತು. ಹತ್ತಿರ ಓಡಿದಳು. ಅಣ್ಣ ಎತ್ತಿಕೊಂಡು ಬಂದು ಸೈಕಲ್ ಮೇಲೆ ಕೂರಿಸಿದ. ಪುಟ್ಟಿಯ ಸಾಹಸಗಾಥೆ ಮುಗಿಯಿತು. ಅವಳ ಕತೆ ಕೇಳಿ ನಗು ಬಂದರೂ, ಅವಳು ಕಾಣದಾದಾಗಿನ ಅನುಭವ ನೆನೆದರೆ ದೊಡ್ಡಕ್ಕನಿಗೆ ಈಗಲೂ ಮೈಮೇಲೆ ಮುಳ್ಳುಗಳೇಳುತ್ತವೆ. ಅಜ್ಜಿ- ಮೊಮ್ಮಗನ ದನಿ ಕೇಳಿ ರತ್ನ ಬಾಲ್ಯದ ರಮ್ಯಲೋಕದಿಂದ ವಾಸ್ತವಕ್ಕೆ ಮರಳಿದಳು.