Friday, February 10, 2017

                                           ಪುಟ್ಟಿಯ ಬಾಲ್ಯ 

   ಪುಟ್ಟಿಯ ಒಂದು ದಿನ

          ಮನೆ ಕೆಲಸವನ್ನೆಲ್ಲಾ ಮುಗಿಸಿದ ರತ್ನ ಕೈಯಲ್ಲಿ ಅವತ್ತಿನ ಪೇಪರ್ ಹಿಡಿದು ಮಂಚದ ಮೇಲೆ ಉರುಳಿಕೊಂಡಳು .
ಪೇಪರ್ನಲ್ಲಿ ಎಲ್ಲಾ ಶಾಲೆಗಳಲ್ಲೂ  ರೋಗನಿರೋಧಕ ಚುಚ್ಚುಮದ್ದು ನೀಡುತ್ತಿರುವ ವಿಚಾರ ಓದುತ್ತಿದ್ದಂತೆ ಅವಳ ಕಣ್ಣ ಮುಂದೆ ಪುಟ್ಟಿ ಬಂದಳು, ಅವಳು ಪುಟ್ಟಿಯೇ ಆಗಿಬಿಟ್ಟಳು.ಅಂದು ಪುಟ್ಟಿಯ ಶಾಲೆಗೆ ಚುಚ್ಚುಮದ್ದು ಹಾಕಲು ಜನ ಬಂದಿದ್ದರು.ದಾಂಡಿಗ
ಹುಡುಗರನೇಕರು ಹೆದರಿ ಓಡಿಹೋಗಿದ್ದರು. ಮೇಷ್ಟ್ರು ಅವರನ್ನು ಎಳೆಸಿ ಕರೆತಂದಿದ್ದರು.ಪುಟ್ಟಿಗೆ ಮಾತ್ರ ಭಯವಿರಲಿಲ್ಲ.ಅವಳು
ಇನಾಕ್ಯುಲೇಶನ್ ಹಾಕಿಸಿಕೊಂಡುದಲ್ಲದೆ. "ಏನೂ ನೋವಾಗಲ್ಲ ಕಣ್ರೋ ಇರುವೆ ಕಚ್ಚಿದಂಗೆ ಆಗುತ್ತೆ ಅಷ್ಟೆ" ಅಂತ ಎಲ್ಲರಿಗೂ
ಹೇಳುತ್ತ ಅಲ್ಲೇ ನಿಂತಿದ್ದಳು."ಆ ಪುಟ್ಟ ಹುಡುಗಿಗಿಂತ ಕಡೆಯೇನ್ರೋ ನೀವು" ಅಂತ ಮೇಷ್ಟ್ರು ಸಹ ಆ ದಾಂಡಿಗರನ್ನ   ಚುಚ್ಚುತ್ತಿದ್ದರು.
    ಅಂದು ಶಾಲೆಯಿಂದ ಮನೆಗೆ ಬಂದ ಪುಟ್ಟಿ  ಗೇಟಿನ ಬಳಿ ಕಾದಿದ್ದ ಅಕ್ಕನ ಕೈಗೆ   ಪುಸ್ತಕದ ಚೀಲ ಕೊಟ್ಟು, "ಏನಾದರೂ ತಿಂದ್ಕೊಂಡು ಹೋಗು" ಎಂದು ಅಕ್ಕ ಹೇಳುತ್ತಿದ್ದರೂ ಕಿವಿ ಮೇಲೆ ಹಾಕಿಕೊಳ್ಳದೆ ಎದುರುಗಡೆಯ ಪಾರ್ಕಿಗೆ ಓಡಿದಳು.
ಜಾರುಬಂಡೆಯ  ಮೆಟ್ಟಿಲು ಹತ್ತದೆ, ಜಾರುವ ಕಡೆಯಿಂದ ಕೋತಿಯಂತೆ ಹತ್ತಿ, ಬೋರಲು ಮಲಗಿ ಜಾರಿದಳು. ಅಲ್ಲಿ ಗೆಳತಿಯರಾರೂ ಕಾಣಲಿಲ್ಲ. ಪಕ್ಕದ ಮನೆಗೆ ಹೋಗಿ "ವಿಜೀ ಕುಂಟೆಬಿಲ್ಲೆ ಆಡೋಣ ಬಾರೋ" ಅಂತ ಕೂಗಿದಳು. ವಿಜಿ
"ಆಟ ಆಡಕ್ಕೆ ಬರಲ್ಲ ಕಣೇ ", ಅಂದ . ಅಂತೂ ಪುಟ್ಟಿ ಮನೆಗೆ ಬಂದಳು.  ಮನೆಯನ್ನು ಬಳಸಿ ಹಿತ್ತಲಿಗೆ ಬಂದಳು.ಕಾಚಿ ಗಿಡದಲ್ಲಿದ್ದ ಹಣ್ಣನ್ನೆಲ್ಲಾ ಕಿತ್ತಳು. ಆಕಾಶಕ್ಕೊಂದು ಎನ್ನುತ್ತಾ ಒಂದು ಹಣ್ಣನ್ನು ಮೇಲೆ ಎಸೆದಳು. ಇನ್ನೊಂದನ್ನು ಭೂಮಿತಾಯಿಗೆನ್ನುತ್ತಾ ನೆಲಕ್ಕೆ ಹಾಕಿದಳು. ಉಳಿದದ್ದೆಲ್ಲಾ ತಿಂದು ಲಂಗಕ್ಕೆ ಕೈ ಒರಸಿಕೊಂಡು  ತೊಟ್ಟಿಯ ಬಳಿ ಬಂದಳು.
ಅಕ್ಕನ ದನಿ ಕೇಳಿದ್ದರಿಂದ ತೊಟ್ಟಿಯ ಹಿಂದೆ ಬಚ್ಚಿಟ್ಟುಕೊಂಡಳು.ಅಕ್ಕ ಹತ್ತಿರ ಬಂದೊಡನೆಯೇ ಎದ್ದು ಅಕ್ಕನ ಮೇಲೆ ನೀರು ಎರಚಿದಳು. ಅಕ್ಕ "ಥೂ ಕೋತಿ" ಎಂದು  ಬೈದಳು. ಪುಟ್ಟಿ ಹಲ್ಕಿರಿಯುತ್ತಾ ಹಿತ್ತಿಲ ಬಾಗಿಲಿಂದ ಮನೆಯ ಒಳಗೋಡಿದಳು.    

No comments:

Post a Comment