Friday, January 9, 2009

ಆಶಾವಾದ?

ಒಬ್ಬಳೇ ನಡೆಯುತ್ತಿದ್ದೆ. ನಡೆಯುತ್ತ ನಡೆಯುತ್ತ ನಡೆಯುತ್ತಲೇ ಇದ್ದೆ.ದೂರದಲ್ಲಿ ಬೆಳಕಿನ ಗೊಂಚಲು ಕಾಣಿಸಿತು.ಓಡಿ ಓಡಿ ಹತ್ತಿರ ಬಂದೆ. ದಿನವೂ ನನ್ನ ಕನಸಿನಲ್ಲಿ ಮೂಡಿ ಮಾಯವಾಗುತ್ತಿದ್ದ ಅರಮನೆ ಕಣ್ಣೆದುರೇ ನಿಂತಿತ್ತು. ಅದೇ ಭವ್ಯತೆ. ಬೆಳಕಿನರಮನೆ ಕೈಬೀಸಿ ಕರೆಯಿತು. ಮುಂದಡಿಯಿಟ್ಟೆ , ಮಹಾದ್ವಾರ ತಾನೇ ತಾನಾಗಿ ತೆರೆಯಿತು. ಆವರಣವನ್ನು ಪ್ರವೇಶಿಸಿದೆ.ಸುಂದರ ತೋಟ ಹಣತೆಯ ಬೆಳಕಿನಲ್ಲಿ ಹೊಳೆಯುತ್ತಿತ್ತು.ಆ ಗುಲಾಬಿ, ಮಲ್ಲಿಗೆ, ಸೇವಂತಿಗೆಗಳ ನಡುವೆ ಓಲಾಡುತ್ತಿದ್ದ ನನ್ನ ಕೈಯಲ್ಲಿ ಗಡಿಯಾರವಿರಲಿಲ್ಲ.ಆದರೆ ಹೂವಿನ ತೂಗಾಟಕ್ಕೆ ಎಲೆಗಳ ಬಳುಕಾಟಕ್ಕೆ ಸಂಗೀತ ನೀಡುವ ಬಳೆಗಳಿದ್ದವು.

ದಿನ,ವಾರ ತಿಂಗಳುಗಳುರುಳಿದವು.ಒಂದೊಂದೇ ಹೆಜ್ಜೆ ಇಡುತ್ತಾ, ಪ್ರತಿಯೊಂದು ಹೂವಿನ ಸೊಬಗನ್ನೂ ಮನದಲ್ಲಿ ತುಂಬಿಕೊಳುತಾ,ನಿಧಾನವಾಗಿ ಬಲು ನಿಧಾನವಾಗಿ ಮನೆಯನ್ನು ಪ್ರವೇಶಿಸಿದೆ. ಒಳಗೆಲ್ಲಾ ಕತ್ತಲೆ.ಆದರೆ ಸುಖದ ಮತ್ತಿನಲ್ಲಿದ್ದ ನನಗೆ ಅದರ ಪರಿವೆಯೇ ಇರಲಿಲ್ಲ. ಹಣತೆಯ ಬೆಳಕಿನ ಕಿರಣವೊಂದು ತೂರಿ ಬಂದು ಮೆತ್ತನೆಯ ಹಾಸಿಗೆಯ ದರ್ಶನ ಮಾಡಿಸಿತು.ನಾನು ಹಾಯಾಗಿ ನಿದ್ರಿಸಿದೆ.ಕನಸಿನಲ್ಲೆಲ್ಲಾ ಹೂಗಳು ನರ್ತನ ಮಾಡಿದವು-ಹಣತೆಯ ಬೆಳಕಿನಲ್ಲಿ. ಆದರೆ ಹಟಾತ್ತನೆ ಆ ಬೆಳಕು ಆರಿತು.ಹೂಗಳ ನಾಟ್ಯ ನಿಂತಿತು.

ನಾನು ಎದ್ದೆ .ಮೈಯಡಿಗೆ ತಣ್ಣನೆಯ ನೆಲ ಕೊರೆಯುತ್ತಿತ್ತು.ಸುಪ್ಪತ್ತಿಗೆ ಮಾಯವಾಗಿತ್ತು.ಇಲ್ಲ, ಇದು ನನ್ನ ಕನಸಿನರಮನೆಯಲ್ಲ.
ಗೋಡೆಗೆ ತಿಳಿ ಗುಲಾಬಿ ಬಣ್ಣದ ಬದಲು ರಕ್ತ ಕೆಂಪಿನ ಬಣ್ಣ. ಶುಭ್ರವಾಗಿ ಹೊಳೆಯುತ್ತಿದ್ದ ನೆಲದ ಬದಲು ಧೂಳು ತುಂಬಿ ಅಲ್ಲಲ್ಲಿ ಮಸುಕಾಗಿ, ಕಿತ್ತುಹೋಗಿರುವ ನೆಲ. ಇಲ್ಲ-ಇದು ನಾನು ಹುಡುಕಿ ಬಂದ ಸ್ಥಳವಲ್ಲ. ಈ ಧೂಳು ತುಂಬಿದ ಪರಿಸರಕ್ಕೆ ನನ್ನ ಶುಭ್ರ ಉಡುಗೆ ಒಪ್ಪುತ್ತಿಲ್ಲ. ಇಲ್ಲಿ ಏನೋ ತಪ್ಪಾಗಿದೆ. ತಪ್ಪಿಸಿಕೊಳ್ಳಲು ಓಡಿದೆ.ಆದರೆ ಎಲ್ಲ ಕಡೆಯೂ ಗೋಡೆ ಎದುರಾಯಿತು.ಇಲ್ಲ ಇನ್ನೊಂದು ಕ್ಷಣವೂ ಅಲ್ಲಿರಲಾರೆನೆಂದು ತಪ್ಪಿಸಿಕೊಳ್ಳಲು ಬಾಗಿಲು ಹುಡುಕಿದೆ. ಸಿಗಲಿಲ್ಲ.
ಇದೇನಿದು ಎಲ್ಲಿಂದಲೋ ಬೆಳಕಿನ ಕೋಲೊಂದು ನನ್ನ ಮುಂದೆ ಕುಣಿಯುತ್ತಿದೆ.ಎಲ್ಲಿಂದ ಬಂತಿದು? ಆ ಕೋಲನ್ನೇ ಅನುಸರಿಸಿ ನೋಡಿದೆ.ಮೇಲೆ ಆ ಮನೆಯ ಮಾಡಿನಲ್ಲಿ ಬೆಳಕಿಂಡಿ ಇದೆ. ಹೌದು ನಾನು ಅಲ್ಲಿಂದ ಪಾರಾಗಬಹುದು.ಏಣಿಗಾಗಿ ಹುಡುಕಿದೆ.ಆದರೆ ಸಿಕ್ಕಿದ್ದು ಒಂದು ಪೊರಕೆ, ಒರಸುವ ಬಟ್ಟೆ, ಒಂದು ಡಬ್ಬ ಬಣ್ಣ ಮತ್ತು ಕುಂಚ.
ಪೊರಕೆಯಿಂದ ಧೂಳನ್ನು ಗುಡಿಸಿದೆ. ಬಟ್ಟೆಯಿಂದ ಒರೆಸಿದೆ. ನೆಲ ಕನ್ನಡಿಯಂತಾಗದಿದ್ದರೂ ಅಡ್ಡಿಯಿಲ್ಲ ಎನ್ನಿಸಿತು. ಕುಂಚವನ್ನು ಬಣ್ಣದಲ್ಲಿ ಅದ್ದಿ ಏಣಿಯನ್ನು ಬಿಡಿಸತೊಡಗಿದೆ. ಒಂದರ ಮೇಲೊಂದು ಪದರ ಬಣ್ಣ ಬಳಿದು ಅದು ಗಟ್ಟಿಯಾದ ನಂತರ ಅದನ್ನು ಏರಿ ಬೆಳಕಿಂಡಿಯಿಂದ ಬೆಳಕಿನ ಪ್ರಪಂಚಕ್ಕೆ ಕಾಲಿಡುತ್ತೇನೆ.
ನಾನು ಒಬ್ಬಂಟಿ. ನನಗೆ batman supermanಗಳ ಸಹಾಯವಿಲ್ಲ. ಆದರೂ ನೂರು, ಸಾವಿರ, ಲಕ್ಷ , ಕೋಟಿ ವರ್ಷಗಳಾದರೂ ಸಹ ನಾನು ಹೊರಗೆ ಬಂದೇ ಬರುತ್ತೇನೆ. ಇದು ಸತ್ಯ.

3 comments:

 1. ಉಷಾ ಮೇಡಮ್,

  ನಿಮ್ಮ ಕಲ್ಪನೆಯ ಕತೆ ನಿಜಕ್ಕೂ ತುಂಬಾ ಚೆನ್ನಾಗಿದೆ...ಚೆನ್ನಾಗಿಲ್ಲದ್ದನ್ನು ಚೆಂದ ಮಾಡಿಕೊಂಡು ಬದುಕುವುದು ಹೀಗೆ ಅಲ್ಲವೇ...

  ReplyDelete
 2. ಉಷಾ ಮೇಡಂ,
  ಡಿ.ವಿ.ಜಿ. ಯವರ ಈ ಕವನ ನಮಗೆ ಎಂಟರಲ್ಲೋ ಒಂಭತ್ತರಲ್ಲೋ ಪಠ್ಯ ಪುಸ್ತಕದ ಕವನ ಸರಣಿಯಲ್ಲಿತ್ತು...
  ಆಗ ನಾನು ..ಈ ಕವನದ ಮೊದಲ ಪಂಕ್ತಿಯ ಕೊನೆಯ ಜೀ..ಮತ್ತು ಎರಡನೇ ಪಂಕ್ತಿಯ ಮೊದಲ ಪದ - ವನದ ಇವುಗಳನ್ನು ತೋರಿಸಿ ನಮ್ಮ ಟೀಚರ್ (ಕನ್ನಡವನ್ನು ಬೋಧಿಸುತ್ತಿದ್ದ ಹಿಂದಿ ಟೀಚರ್) ಗೆ ಮೇಡಮ್ ಇದು ತಪ್ಪಾಗಿ ಪ್ರಿಂಟ್ ಆಗಿದೆ ಜೀ, ವನದ ಜೊತೆ ಇರಬೇಕಿತ್ತು...ಜೀವನ ಬೇರೆ ಬೇರೆ ಯಾಗಿದೆ ಎಂದೆ. ಅದಕ್ಕವರು...ಶಹಬ್ಬಾಷ್ ಇದನ್ನು ಇಲಾಖೆಗೆ ತಿಳಿಸೋಣ ಅಂತ ನನ್ನ ಬುದ್ಧಿವಂತಿಕೆಗೆ certificate ಕೊಟ್ಟಿದ್ದರು...ಮತ್ತೆ ಇದೇ ಕವನವನ್ನು ನನ್ನ ಎರಡನೇ ಪಿ.ಯು.ಸಿ ಯಲ್ಲಿ ಬೆಂಗಳೂರಿನ Govt Science College ನ ನಮ್ಮ second PUC ಯಲ್ಲಿ ಕನ್ನಡ ಬೋಧಿಸುತ್ತಿದ್ದ ನಮ್ಮ ಅಚ್ಚುಮೆಚ್ಚಿನ lecturer ಡಾ. ಓಂಕಾರಪ್ಪ (ಅವರ ರನ್ನನ ಗಧಾಯುದ್ಧ ನಾಟಕ ಪಾಠಮಾಡುವಾಗ BSc ಹುಡುಗರೂ ಬಂದುಬಿಡುತ್ತಿದ್ದರು..ಅಷ್ಟೊಂದು ಅದ್ಭುತವಾಗಿರುತ್ತಿತ್ತು ಅವರ ಶೈಲಿ). ಅವರನ್ನು ಈ ಬಗ್ಗೆ ಕೇಳಿದಾಗ...ಇಲ್ಲಪ್ಪ..ಇದು ಡಿ.ವಿ.ಜಿ. ಜೀ ಯನ್ನು ಮನಸ್ಸಿಗೆ ಮತ್ತು ವನವನ್ನು ಅಭಿವೃದ್ಧಿಗೆ ಹೋಲಿಸಿ ಬರೆದ ಪದ ಜೋಡಣೆಯ ಪ್ರಯೋಗ ಎಂದು ವಿವರಿಸಿದಾಗಲೇ ತಿಳಿದದ್ದು..ಈ ಮಹಾನ್ ಕವಿಯ ಬರವಣಿಗೆಯ ಆ ಅಮೂಲ್ಯ ಅರ್ಥ.
  ನನ್ನ ಹಳೆಯ ನೆನಪುಗಳನ್ನು ಮತ್ತೆ ಹೊಸತುಗೊಳಿಸಿದ್ದಕ್ಕೆ ಧನ್ಯವಾದಗಳು..

  ReplyDelete
 3. ಜಲನಯನ ಅವರಿಗೆ ಧನ್ಯವಾದಗಳು.ಬಿಡಿಸಿ ಬರೆದ ಪದದ ಅರ್ಥ ತಿಳಿದಿರಲಿಲ್ಲ. ನಾನು ಕವನದ ಛಂದಸ್ಸಿಗಾಗಿ ಬಿಡಿಸಿದ್ದಾರೆಂದು ತಿಳಿದಿದ್ದೆ.ನಿಮ್ಮ ಭೇಟಿ ಹೀಗೆ ಮುಂದುವರಿಯಲಿ.

  ReplyDelete