Thursday, February 2, 2017

 


                                                     ಪುಟ್ಟಿಯ ಬಾಲ್ಯ                                        

ಉಯ್ಯಾಲೆ ಆಡೋಣ ಬನ್ನಿರೋ



    ಬಟ್ಟೆ ಒಣಗ್ಹಾಕಕ್ಕೆ ಬಾಲ್ಕನಿಗೆ ಬಂದ ರತ್ನ ,ಕೆಲಸ ಮುಗಿದ ಮೇಲೆ ಒಳಗೆ ಹೋಗದೆ ಉಯ್ಯಾಲೆಯಲ್ಲಿ ಕುಳಿತಳು.
ಹಿಂದಿನ ದಿನ ಯಜಮಾನರ ಹುಟ್ಟಿದ ಹಬ್ಬಕ್ಕಾಗಿ ಮಕ್ಕಳು ಉಡುಗೊರೆಯಾಗಿ ಕೊಟ್ಟ ಬೆತ್ತದ ಸ್ಪ್ರಿಂಗ್ ಉಯ್ಯಾಲೆ. ಉಯ್ಯಾಲೆ ತೂಗಿದಾಗ ಅವಳ ಕಣ್ಣ ಮುಂದೆ ಕಂದು ಬಣ್ಣದ ಫ಼್ರಾಕ್ ತೊಟ್ಟ ಪುಟ್ಟಿ ಬಂದಳು.ಫ಼್ರಾಕಿನ ಎದೆಯ ಭಾಗದಲ್ಲಿ ಕಸೂತಿ ಹಾಕಿದ ಎರಡು ತೆಂಗಿನ ಮರಗಳು ಹಾಗೂ ಒಂದು ಮನೆಯಿತ್ತು. ಅದು ಕಾಲೇಜಿನಲ್ಲಿ ಓದುತ್ತಿದ್ದ ಪುಟ್ಟಿಯ ಅಣ್ಣ ಅವಳಿಗಾಗಿ ತಂದ ಫ಼್ರಾಕ್.ಅದು ಹಳೆಯದು ತುಂಬಾ ಚಿಕ್ಕದಾಗಿದೆ ಎಂದು ಅಮ್ಮ ಹೇಳಿದರೂ ಕೇಳದೆ ಅದನ್ನೇ ತೊಟ್ಟಿದ್ದಳು. ಆವತ್ತಷ್ಟೇ ಅವಳ
ಪರೀಕ್ಷೆ ಮುಗಿದಿತ್ತು.ಮಾರನೆಯ ದಿನ ಉಗಾದಿ ಹಬ್ಬ. ತೋಳಿಗೆ ಹಗ್ಗದ ಸುರುಳಿ ಸೇರಿಸಿ, ಅಣ್ಣನ ಹಿಂದೆ "ಉಯ್ಯಾಲೆ ಕಟ್ಕೊಡೋ" ಅಂತ ಬೇಡುತ್ತಾ ಸುತ್ತುತ್ತಿದ್ದಳು. ಅಣ್ಣ - ನೀರು ತಂದ್ಕೊಡು,  ನಾಳೆ ಕಾಯಿ ಒಬ್ಬಟ್ಟು ಮಾಡ್ತಾರೋ, ಬೇಳೆ ಒಬ್ಬಟ್ಟು ಮಾಡ್ತಾರೋ ಅಮ್ಮನ್ನ ಕೇಳ್ಕೊಂಡ್ ಬಾ , ತುಲಸಿಗಿಡದ ಪಕ್ಕದ ಬಿಳಿ ದಾಸವಾಳದ ಗಿಡದಲ್ಲಿ ಎಷ್ಟು ಹೂ ಬಿಟ್ಟಿದೆ ಎಣಸಿಕೊಂಡು ಬಾ - ಅಂತ ಒಂದಾದ ಮೇಲೊಂದು ಕೆಲಸ ಹೇಳಿ ಅವಳನ್ನ ಒಂದು ಗಂಟೆ ಸತಾಯಿಸಿ, ಕೊನೆಗೂ ಉಯ್ಯಾಲೆ
ಕಟ್ಟಿಕೊಟ್ಟು ಬಿಟ್ಟ.ಹಗ್ಗದ ಉಯ್ಯಾಲೆ ಒತ್ತದಂತೆ, ಅಕ್ಕ ಅಮ್ಮನ ಹಳೆಯ ಹತ್ತಿಯ ಸೀರೆಯೊಂದನ್ನು ಅದರಮೇಲೆ ಹಾಕಿದಳು.
ಪುಟ್ಟಿ ಉಯ್ಯಾಲೆಯ ಮೇಲೆ ಕುಳಿತು ಜೀಕಿದಳು. ಅವಳ ಆನಂದಕ್ಕೆ ಪಾರವೇ ಇರಲಿಲ್ಲ. ಆಗ ಅವಳ ಆತ್ಮೀಯ ಗೆಳತಿ ಚಿನ್ನಿ,
ಒಂದು ಜಡೆ ಹಾಕಿಕೊಂಡು ಇನ್ನೊಂದು ಜಡೆ ಬಿಚ್ಚಿಕೊಂಡು ಗೇಟಿನ ಬಳಿ ಬಂದಳು.  ಪುಟ್ಟಿ "ಉಯ್ಯಾಲೆ ಆಡೋಣ ಬಾರೆ ",ಎಂದು ಕೂಗಿದಳು." ನಾನೂ ಉಯ್ಯಾಲೆ ಕಟ್ಟಿಸ್ಕೊಳ್ತೀನಿ" ಎನ್ನುತ್ತ ಚಿನ್ನಿ ಓಡಿದಳು. ಕೆಲವು ಕ್ಷಣದಲ್ಲೇ ’ಪುಟ್ಟಿ ಉಯ್ಯಾಲೆ ಆಡ್ತಿದಾಳೆ ನಂಗೂ ಕಟ್ಕೊಡು" ಎನ್ನುವ ರಾಗ ಪಕ್ಕದ ಮನೆಯಿಂದ ತೇಲಿಬಂತು.
      ಅವರೂರಿನಲ್ಲಿ ಉಗಾದಿಯನ್ನ ಉಯ್ಯಾಲೆ ಹಬ್ಬ ಅಂತಾನೇ ಕರೀತಿದ್ರು. ಮನೆಮನೆಯಲ್ಲಿ ಉಯ್ಯಾಲೆ ಕಟ್ಟುವುದಲ್ಲದೆ ಊರಿನ ಬೀದಿಯ ಮರಗಳಿಗೆಲ್ಲಾ ಉಯ್ಯಾಲೆ ಕಟ್ಟಿರುತ್ತಿದ್ದರು.ಮನೆಯಲ್ಲಿ ಆಡುವುದಷ್ಟೇ ಅಲ್ಲದೆ ಪುಟ್ಟಿ ಮರಕ್ಕೆ ಕಟ್ಟಿದ ಉಯ್ಯಾಲೆಯಲ್ಲಿ ಸಹ ಯಾರದಾದರೂ ತೊಡೆಯ ಮೇಲೆ ಕುಳಿತು ಜೀಕೇ ಬಿಡ್ತಿದ್ಲು.ಎತ್ತರದ ಮರದ ಜೋಕಾಲಿಯಲ್ಲಿ ಕುಳಿತು.ಬೀದಿಯ ಆ ಕಡೆಯ ಮರದ ಎಲೆಯನ್ನು ಕೈಯಲ್ಲೋ ಎರಡು ಕಾಲುಗಳ ಮಧ್ಯನೋ ತರಿದು ತಂದು "ಅದ್ದು ಮಜಾ"
ಅಂತ ಕೂಗ್ತಿದ್ದಳು.
     ಪುಟ್ಟಿಗೆ ಚಿಕ್ಕವಳಿದ್ದಾಗಿನಿಂದಲೂ  ಉಯ್ಯಾಲೆಯ ಮೇಲೆ ವಿಶೇಷ ಪ್ರೀತಿ.ಅದರ ಮೇಲೆ ಕೂರಿಸಿ ಹಾಡು ಹೇಳುತ್ತಾ
ಅಕ್ಕ ಊಟ ತಿನ್ನಿಸುತ್ತಿದ್ದಳು.ಅವಳು ಯುವತಿಯಾದ ನಂತರ ನಿದ್ದೆಯಲ್ಲಿ  ಸಹಾ ಅವಳು ಒಂದು ಸುಂದರವಾದ ಜಲಪಾತದ ಬದಿಯಲ್ಲಿ ಎತ್ತರವಾದ ಮರಕ್ಕೆ ಕಟ್ಟಿದ ಉಯ್ಯಾಲೆಯಾಡುತ್ತಿದ್ದ ಕನಸೇ ಪದೇ ಪದೇ ಬೀಳುತ್ತಿತ್ತು. ಮನೆಯ ಮುಂದೆ ಪಾರ್ಕ್ನಲ್ಲಿ
ಉಯ್ಯಾಲೆ ಜಾರುಬಂಡೆ ಬಂದ ನಂತರ ಪುಟ್ಟಿ ಒಂದು ಉಯ್ಯಾಲೆಯ ಮೇಲೆ ಸದಾ ಇರ್ತಾಳೆ ಬೇರೆಯವರಿಗೆ ಆಡಕ್ಕೇ ಬಿಡಲ್ಲ
ಎಂಬ ದೂರು ಸಹ ಇತ್ತು.
        ’ಅತ್ತೇ’ ಸೊಸೆಯ ದನಿ ಕೇಳಿ ರತ್ನಾ ಒಳ ನಡೆದಳು.

1 comment: