Sunday, July 19, 2020

ಪುಟ್ಟಿಯ ಬಾಲ್ಯ

ದೆವ್ವ ಭೂತ ಪಿಶಾಚಿ

ರತ್ನ ಊಟ ಮುಗಿಸಿ ಹಾಸಿಗೆಯ ಮೇಲೆ ಉರುಳಿದಳು. ಅವಳ ಮನ ಅವಳು ಪುಟ್ಟಿಯಾಗಿದ್ದ ಕಾಲಕ್ಕೆ ಓಡಿತು. ಅವಳ ಪರೀಕ್ಷೆ ಮುಗಿದಿತ್ತು. ಆಡಲು ಯಾರೂ ಇರಲಿಲ್ಲ. ಚಿನ್ನು ಅಜ್ಜಿ ಮನೆಗೆ ಹೋಗಿದ್ದಳು. ಒಬ್ಬಳೇ ಕುಳಿತು ಕಲ್ಲಾಟವಾಡಿದಳು. ಬೇಸರ ಬಂತು. ಅಷ್ಟರಲ್ಲಿ ಪರೀಕ್ಷೆಗೆ ಓದುತ್ತಾ ಕುಳಿತ ಅಣ್ಣ ಹೊರಗೆ ಬಂದ. 
   ನೀಲಿ ಆಕಾಶದಲ್ಲಿ ಮೋಡಗಳು ತೇಲುತ್ತಿತ್ತು. ದೊಡ್ಡ ಮೋಡವೊಂದನ್ನು ತೋರಿಸಿ ಅದೆಲ್ಲಿಂದ ಬಂತೆಂದು ಪುಟ್ಟಿ ಕೇಳಿದಳು. ಅಣ್ಣ ಮೈಸೂರೆಂದು ಹೇಳಿದ. ಇನ್ನೊಂದು ಮೋಡ ಮಂಡ್ಯದಿಂದ ಬಂದಿತ್ತು.ಮತ್ತೊಂದು ಹುಲಿಕೆರೆಯಿಂದ, ಗಾಣದಾಳು, ಮಲ್ಲನಾಯಕನ ಕಟ್ಟೆ, ಶಿವಳ್ಳಿ, ದುದ್ದ ಸುತ್ತಮುತ್ತಿನ ಎಲ್ಲ ಊರುಗಳಿಂದ ಬಂದ ಮೋಡಗಳು ಸರಿದು ಹೋದವು. ಅಣ್ಣ ತಾಳ್ಮೆಯಿಂದ ಹೇಳುತ್ತಲೇ ಇದ್ದ. ಪುಟ್ಟಿಯ ಗಮನ ಬೇಲಿಯಲ್ಲಿ ಅರಳಿದ್ದ ಕೆಂಪು ದಾಸವಾಳದ ಕಡೆ ಹರಿಯಿತು. ಅಣ್ಣ ಕಿತ್ತುಕೊಟ್ಟ
ಹೂಗಳನ್ನು ಸ್ವಲ್ಪ ಹೊತ್ತಿಗೆ ಮುಂಚೆ ಕಟ್ಟಿದ್ದ ಮರಳಿನ ಕಪ್ಪೆಗೂಡಿಗೆ ಸಿಕ್ಕಿಸಿದಳು. ಗೂಡಲ್ಲಿ ಮುತ್ತಿರುವ ಕಪ್ಪೆಚಿಪ್ಪು ಇದೆಯಾ ಅಂತ ನೋಡಿದಳು. ಮನೆಗೆ ಮರಳಿ ಬಂದಳು.
  ಏನು ಮಾಡಲು ತೋಚಲಿಲ್ಲ. ಚಂದಮಾಮ ಓದಲು ತೆಗೆದಳು. ಎಲ್ಲಾ ಕತೆಗಳನ್ನೂ ಓದಿದ್ದಾಗಿತ್ತು. ಅಕ್ಕನ ಗೆಳತಿಯ ಮನೆಗೆ ಹೋಗಿ ಬೇರೆ ಪುಸ್ತಕ ತರ್ತೀನೆಂದು ಚಂದಮಾಮ ಹಿಡಿದು ಅಮ್ಮನಿಗೆ ಹೇಳಿ ಹೊರಟಳು. ದಾರಿಯಲ್ಲಿ ನಾಗರಾಜ ಸಿಕ್ಕಿದ. ಚಂದಮಾಮದಲ್ಲಿದ್ದ ಚಿತ್ರ ನೋಡುವುದಾಗಿ ಹೇಳಿದ. ಪಕ್ಕದಲ್ಲಿದ್ದ  ಮರದ ಕೆಳಗಿನ ಕಲ್ಲಿನ ಮೇಲೆ ಕೂರಲು ಪುಟ್ಟಿ ಹೊರಟಳು. ನಾಗರಾಜ - ಹುಣಸೆಮರದ ಕೆಳಗೆ  ಕೂತ್ಕೊಬೇಡ್ವೆ ಅದರಲ್ಲಿ ದೆವ್ವ ಇರ್ತೈತೆ- ಅಂತ ಹೇಳಿದ.
ಪುಟ್ಟಿಗೆ ನಗು ಬಂತು.
 ಪುಟ್ಟಿಯ ಅಪ್ಪ ಹೇಳ್ತಿದ್ದರು. ದೆವ್ವ ಭೂತ ಯಾವ್ದೂ ಇಲ್ಲ. ಎಲ್ಲಾ ಭ್ರಮೆ ಅಂತ. ವಾಕಿಂಗ್ ಹೋದಾಗ ದೆವ್ವ ಇದೆಯೆಂದು ಕೆಲವರು ನಂಬಿದ್ದ ಸುರಗಿ ತೋಪನ್ನು ತೋರಿಸಿದ್ದರು. ರಾತ್ರಿಹೊತ್ತು ಒಬ್ಬರೇ ಅದನ್ನು ಯಾರೂ ದಾಟುವುದಿಲ್ಲವೆಂದೂ, ತಾವು ಹಲವಾರು ಬಾರಿ ದಾಟಿದ್ದರೂ ತಮ್ಮನ್ಯಾವ  ದೆವ್ವ ಮೋಹಿನಿಯೂ ಹಿಡಿಯಲಿಲ್ಲವೆಂದು ನಗೆಯಾಡಿದ್ದರು. ತಮ್ಮ ಸಹೋದ್ಯೋಗಿಯೊಬ್ಬರು ಒಬ್ಬರೇ ದಾಟಬೇಕಾದಾಗ ಮನೆಗೆ ಬಂದು ಕುಳಿತು ಪರದಾಡಿದ್ದು, ಕೊನೆಗೆ ತಾವೇ ಅವರನ್ನು ಮನೆಗೆ ತಲುಪಿಸಿ ಬಂದದ್ದನ್ನು ಹೇಳಿ ನಗಿಸಿದ್ದರು.
ಬೇರೆ ಪುಸ್ತಕ ತೊಗೊಂಡು ಪುಟ್ಟಿ ಮನೆಗೆ ಬಂದಳು. ಮನೆಯೆಲ್ಲಾ ಬೆಲ್ಲ, ತುಪ್ದದ ಘಮಲು ತುಂಬಿತ್ತು. ಅಜ್ಜಿ ಗುಲಪಾವಟೆ ಮಾಡಿರಬಹುದೆಂದು ಅಡಿಗೆ ಮನೆಗೆ ಹೋದಳು. ಅಮ್ಮ ಉಂಡೆ ಕೊಡುವುದಾಗಿ ಕರೆದರು. ಪುಟ್ಟಿ ಅಮ್ಮನಿಗೆ ಒರಗಿ ಕುಳಿತಳು. ಅಮ್ಮ ಗುಲಪಾವಟೆಯಲ್ಲಿ ಸೌಟು, ಚಮಚ, ಎಲೆ, ಹೂ ಎಲ್ಲಾ ಮಾಡಿಕೊಡುತ್ತಿದ್ದರು. ಪುಟ್ಟಿ ಗುಳುಂ ಮಾಡುತ್ತಿದ್ದಳು. ಗಮನ ಅಜ್ಜಿ ಅಮ್ಮನ ಮಾತಿನ ಕಡೆಗೆ ಹೋಯಿತು.
ಅಜ್ಜಿ-- ಮಧ್ಯರಾತ್ರಿಲಿ ನಿಮ್ಮೆಜಮಾನರು, ಮರಿ ಬ್ಯಾಟರಿ ಹಿಡಿದು ಓಡಾಡುತ್ತಿದ್ದರು. ಏನಾಯ್ತು.
ಅಮ್ಮ- ಮರಿ ದಿನಾ ರಾತ್ರಿ ಓದ್ಕೊಳ್ಳೋವಾಗ ಬಳೆ ಶಬ್ದ ಕೇಳ್ತಿತ್ತಂತೆ. ಅವರಪ್ಪನಿಗೆ ಹೇಳಿದಾನೆ. ಅದೇನು ನೋಡೇಬಿಡೋಣ ಅಂತ ಎದ್ದಿದ್ದರು.
ಅಜ್ಜಿ-ಹಾಳು ಹುಣಸೆಮರ ಬೇರೆ ಮನೆ ಮುಂದೆ.
ಅಮ್ಮ- ಅಮ್ಮ ನೀನೂ ಸರಿ. ಆ ಹುಣಸೆಹಣ್ನಿನ ಗೊಜ್ಜು ತೊಕ್ಕು ಬಾಯಿ ಚಪ್ಪರಿಸಿ ತಿಂತಿಯಾ. ಈಗ ಹಾಳು ಹುಣಸೆಮರ ಅಂತೀಯಾ .
ಅಜ್ಜಿ- ಅದ್ಸರಿ ಬಳೆ ಶಬ್ದ?
ಅಮ್ಮ- ಅದೆಲ್ಲಾ ಈ ಚೇಷ್ಟೆಪುರಕಿಯ ಕೆಲಸ. ಬಳೆ ಆಟ ಆಡಿ  ಬಳೆ ಚೂರನ್ನೆಲ್ಲಾ ಕಿಟಕಿಯ ಮೇಲೆ ಇಟ್ಟಿದಾಳೆ. ಬೆಕ್ಕು ಅದರ ಮೇಲೆ ಓಡಾಡಿದಾಗ ಘಲ್ ಘಲ್ ಅಂತ ಸದ್ದಾಗಿದೆ. ಮರಿನೂ ಮೊದಲು ತಲೆ ಕೆಡಸ್ಕೊಂಡಿಲ್ಲ. ದಿನಾ ಶಬ್ದ ಬಂದಿದ್ದರಿಂದ  ಅವರಪ್ಪನಿಗೆ ಹೇಳಿದಾನೆ. 
ಅಜ್ಜಿ- ಅಂತೂ ಅಪ್ಪ ಮಗ ಪತ್ತೆದಾರಿ ಮಾಡಿ ಕಂಡುಹಿಡಿದರೆನ್ನು.
ಪುಟ್ಟಿಗೆ ಬೆಳಿಗ್ಗೆ ಎದ್ದ ತಕ್ಷಣ ನಿನಗೆ ಕಾದಿದೆಯೆಂದು ಚಿಕ್ಕಕ್ಕ ಬೆರಳು ತೋರಿಸಿದ್ದು ಅಣ್ಣ ತಲೆಯ ಮೇಲೆ ಮೊಟಕಿ ಕಿವಿ ಹಿಂಡಿದುದರ ರಹಸ್ಯ ಬಯಲಾಯಿತು. 
ಕಾಲಿಂಗ್ ಬೆಲ್ ಸದ್ದಾಯಿತು. ರತ್ನ ಎದ್ದು ಕೂತಳು. ಯಜಮಾನರು ಬಾಗಿಲು ತೆರೆದರು. ಬೇಗ ಬೇಗ ರೆಡಿಯಾಗಿ, ಇವತ್ತು ರವೀಂದ್ರ ಕಲಾಕ್ಷೇತ್ರಕ್ಕೆ ನಾಟಕಕ್ಕೆ ಟಿಕೆಟ್ ತೊಗೊಂಡಿದೀನಿ. ಗಣೇಶಂದೇ ಡೈರೆಕ್ಷನ್ --ಮಗಳ ಧ್ನನಿ. ರತ್ನ ಸಂಭ್ರಮದಿಂದ  ಎದ್ದಳು.

No comments:

Post a Comment