Wednesday, August 11, 2010

ಭೀಮನಮಾವಾಸ್ಯೆಯ ಬೆಳಿಗ್ಗೆ ಆರೂ ಮುಕ್ಕಾಲಿಗೆ ನನ್ನ ಕೈಗೆ ಕಣಜ ಕಚ್ಚಿತು.ಬೀದಿ ಬಾಗಿಲಿಗೆ ನೀರ್ಹಾಕಿ,ರಂಗೋಲಿಯಿಡಲು ಹೊರಟವಳು ಕಿರುಚಿ ಪೊರಕೆ ಬಿಸಾಕಿ ಒಳಗೋಡಿದೆ. ಅಸಾಧ್ಯ ನೋವು.ಕೈ ಅಯ್ಯಂಗಾರ್ ಬೇಕರಿ ಬನ್ ನಂತೆ ಉಬ್ಬಿತು. ಇಂಟರ್ನೆಟ್ ನಲ್ಲಿ ನೋಡಿದರೆ,ನೋವು ಹಾಗೂ ಊತ ವಾರಗಟ್ಟಲೆ ಇರುವ ಸಾಧ್ಯತೆ ಯ ಮಾಹಿತಿ ಸಿಕ್ಕಿತು. ಡಾಕ್ಟ್ರ ಹತ್ರ ಹೋದ್ರೆ--ಈ ಬೆಂಗಳೂರು ಪೇಟೇಲಿ ಕಣಜಾನ ಎಲ್ಲಿ ಹುಡುಕ್ಕೊಂಡ್ ಹೋದ್ರಿ-ಅಂತ ನಕ್ಕರು.ನಾನು ಕೊಡೋ ಔಷಧಿ ತೊಗೊಂಡ್ರೆ ನಾಳೆ ಕೆಲಸಕ್ಕೆ ಹೋಗಕ್ಕಾಗಲ್ಲ ಡ್ರೌಸಿನೆಸ್ಸ್ ಇರುತ್ತೆ ಅಂತ ಹೇಳಿದರು.ಡಾಕ್ಟ್ರ ಮಾತು ಮೀರೋದುಂಟೆ ಲಕ್ಷಣವಾಗಿ ರಜದ ಮಜ ಅನುಭವಿಸಿದೆ-ಇಡೀ ದಿನ ನಿದ್ದೆ ಮಾಡಿ. ಕೈ ನೋವು ಅಂತ ಪಾಪ ಯಜಮಾನರೇ ಅಡುಗೆ ಮಾಡಿದ್ದರು .ಕೈ ನೋವು ಇಲ್ಲದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು ಅನ್ನಿಸ್ತು. ಆದರೆ ಕೈನೋವಿಗಾಗಿ ತಾನೆ ರಜ ಸಿಕ್ಕಿದ್ದು ಎಂದು ನೆನಪಾಗಿ ನಗು ಬಂತು. ವಠಾರದವರಿಗೆಲ್ಲಾ ನನ್ನ ಕೈ ಪ್ರದರ್ಶನದ ವಸ್ತುವಾಯಿತು. ಒಬ್ಬೊಬ್ಬರೇ ಬಂದರು. ಮನೆಗೆ ಬಂದ ಪರಿಚಯದವರನ್ನು ಸಹಾ ಕರೆತಂದರು. ಕೊನೆಗೆ ಟಿಕೆಟ್ಟಾದರೂ ಇಟ್ಟಿದ್ದರೆ ಒಳ್ಳೆ ಕಲೆಕ್ಷನ್ ಆಗ್ತಿತ್ತು ಅಂದರು ಯಜಮಾನರು. ಪಕ್ಕದ ಮನೆಯವರ ಉವಾಚ-ಕಚ್ಚಿದ ತಕ್ಷಣ ಕೆಮ್ಮಣ್ಣು ಹಚ್ಚಿದ್ದರೆ ಇಷ್ಟೊತ್ತಿಗೆ ಊತ ಎಲ್ಲಾ ಇಳಿದು ಹೋಗಿ, ಆರಾಮಾಗಿರ್ಬಹುದಿತ್ತು. ಮೈದುನನ ಉವಾಚ --ಇದಕ್ಕೆಲ್ಲಾ ಡಾಕ್ಟ್ರ ಹತ್ರ ಹೋದ್ರೆ ಏನೂ ಉಪಯೋಗವಿಲ್ಲಾ, ಕಚ್ಚಿದ ತಕ್ಷಣ ಸುಣ್ಣ ಹಚ್ಚಬೇಕು. ಕೆಲಸದವಳ ಉವಾಚ-ಇದಕ್ಕೆ ಸರಿಯಾದ ಮದ್ದೆಂದರೆ ಸಿಂಬಳನೇ. (ಕಚ್ಚಿಸಿಕೊಂಡವರದ್ದೇನಾ ಅಥವಾ ಬೇರೆಯವರದ್ದೂ ಆಗುತ್ತಾ? fresh ಆಗಿರಬೇಕಾ ಅಥವಾ ಸಂಗ್ರಹಿಸಿದ್ದು ಆಗುತ್ತಾ? ಬ್ಲಡ್ ಬ್ಯಾಂಕ್ ತರಹಾ ಸಿಂಬಳದ ಬ್ಯಾಂಕ್ ಸಹಾ ಇದೆಯಾ? ಕಚ್ಚಿದ ತಕ್ಷಣ ತಾನಾಗಿ ಸಿಂಬಳ ಬರುತ್ತಾ ? ಈ ಅತ್ಯಮೂಲ್ಯ ಔಷಧಿಗೆ ಪೇಟೆಂಟ್ ಸಿಗಬಹುದಾ? ನಿಮ್ಮ ಮನದಲ್ಲಿ ಮೂಡುವ ಇಂತಹ ಪ್ರಶ್ನೆಗಳಿಗೆ ನನ್ನಲ್ಲಿ ಖಂಡಿತಾ ಉತ್ತರವಿಲ್ಲ.) ಅಯ್ಯೋ ಗೊತ್ತೇ ಇರ್ಲಿಲ್ವೇ ಅನ್ಯಾಯವಾಗಿ ಡಾಕ್ಟ್ರ ಹತ್ರ ಹೋಗಿ 5೦೦ ರೂ ಚೌರ ಮಾಡಿಸಿಕೊಂಡನಲ್ಲಾ ಅಂತ ಹೊಟ್ಟೇಲಿ ಉರಿ ಶುರುವಾಯಿತು. ನೋವು ಕಮ್ಮಿಯಾಗಿ ಕೆಲಸಕ್ಕೆ ಹೋದರೆ, ಅಯ್ಯೋ ನಿಮಗೆ ಕಣಜ ಕಚ್ತಾ ,ತುಂಬಾ ಒಳ್ಳೇದೂರೀ. ಕಣಜ ಲಕ್ಷ್ಮಿ ಸ್ವರೂಪ.ಅದೂ ಎಡಭಾಗಕ್ಕೆ ಕಚ್ಚಿದರೆ,ಮನೇಲಿ ಗೂಡು ಕಟ್ಟಿದರೆ ಶುಭ. ನಿಮಗೆ ಲಕ್ಷ್ಮಿ ಒಲಿದಿದಾಳೆ.--ಸಹೋದ್ಯೋಗಿ ಉವಾಚ. ತುಂಬಾ ಒಳ್ಳೇದು ಮೇಡಂ ಚುರುಕುತನ ಬರುತ್ತೆ.--ಕಸ ಗುಡಿಸುವವಳ ಉವಾಚ. ಹಣ ,ಚುರುಕುತನ ಎರಡೂ ನನಗೆ ಅತ್ಯಗತ್ಯವಾದ ಸರಕುಗಳು. ಕಣಜದ ಕೈಲಿ ಕಚ್ಚಿಸಿ ಎಂಟ್ರಿ ಕೊಡುತ್ತಿರುವ ಮಹಾಲಕ್ಷ್ಮಿಗೆ ಸ್ವಾಗತ ಹಾಗೂ ನಮೋನ್ನಮಹ

4 comments:

  1. - ಸಾಗರದಾಚೆಯ ಇಂಚರ ಅವರೆ,thanks for the concern. ಈಗ ಪೂರ್ತಿ ವಾಸಿ ಆಗಿದೆ.

    ReplyDelete
  2. ಉಷಾಜೀ,

    ಹ್ಹ ಹ್ಹ ಹ್ಹಾ... ನೀವು ಕಣಜದ ಕೈಯಲ್ಲಿ, ಅಲ್ಲಲ್ಲ, ಬಾಯಿಯಿಂದ ಕಚ್ಚಿಸಿಕೊಂಡದ್ದು ಇಷ್ಟೊಂದು ವಿಚಾರಗಳನ್ನು ಹುಟ್ಟುಹಾಕಿತು ಅಂದ್ರೆ ಸದ್ಯದಲ್ಲೇ ಏನೋ ಒಳ್ಳೇ ಸುದ್ದಿ ಇದೆ ಅಂತ ಅರ್ಥ... ನಿಮಗೆ ಸಿಗೋ ದುಡ್ಡನ್ನ ಅದ್ರ ಬಗ್ಗೆ ಮುಂಚಿತವಾಗಿ ಹೇಳಿದೋರಿಗೆ ಮತ್ತು ಇಲ್ಲಿ ಕಾಮೆಂಟ್ ಮಾಡಿದೋರಿಗೆಲ್ಲ (ನನಗೂ ಸೇರಿಸಿ :P) ಹಂಚಬೇಕು, ಆಯ್ತಾ!?

    ಸ್ವಾರಸ್ಯಕರ ಬರಹ. ನಿಮ್ಮ ಬರವಣಿಗೆ ಶೈಲಿ ಚೆನ್ನಾಗಿದೆ. ಒಳ್ಳೇ ಲಲಿತ ಪ್ರಬಂಧ ಓದಿದ ಹಾಗಿತ್ತು. ಅಭಿನಂದನೆಗಳು.

    ReplyDelete
  3. ಉಮೇಶ್ ರವರೇ ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು.
    ದುಡ್ಡು ಸಿಕ್ರೆ ಹಂಚೋಣ ಬಿಡಿ.

    ReplyDelete