Wednesday, September 25, 2024
ಗೌರಿ ಗಣಪ ತಂದ ನೆನಪು, ಮೂರ್ತಿಯ ಜೊತೆ ಹೋಗಲಿಲ್ಲ
ಗೌರಮ್ಮ ಗಣಪನನ್ನು ಕಳುಹಿಸಿದ ಮಾರನೆಯ ಬೆಳಗು, ಮನೆ ಮನ ಖಾಲಿ ಖಾಲಿ. ಮೂರು ನಾಲ್ಕು ದಿನಗಳಿಂದ ಮರೆತಿದ್ದ ಕಾಲು ನೋವು ಸೊಂಟ ನೋವುಗಳು ಮತ್ತೆ ಬಂದಿವೆ ಮರಳಿ. ಮಾಂಗಲ್ಯ ಸರದಲ್ಲಿ ಸುರುಟಿದ ಹತ್ತಿ, ತಟ್ಟೆಯಲ್ಲಿ ಸೋಬಲಕ್ಕಿಯ ಅಕ್ಕಿ ಕೊಬ್ಬರಿ ಮರದ ಜೊತೆ, ಒಣಗಿದ ಹೂವು, ಬಾಳೆಕಂದುಗಳು , ಬಳೆ, ರವಿಕೆ ಬಟ್ಟೆಗಳು ಕಳೆದ ದಿನಗಳ ಸಂಬ್ರಮವನ್ನು ನೆನಪಿಸುತ್ತಿವೆ. ಬಂಧುಗಳ ಮಾತಿಲ್ಲ, ಪೂಜೆಯ ಗಡಿಬಿಡಿಯಿಲ್ಲ, ಸಿಹಿ ಅಡುಗೆಗಳ ಘಮಲಿಲ್ಲ. ಕುಂಟುತ್ತಾ, ಮುಲುಗುತ್ತಾ ಎಲ್ಲಾ ವಸ್ತುಗಳನ್ನು ಸ್ವಸ್ಥಾನಕ್ಕೆ ಸೇರಿಸಬೇಕಿದೆ. ಮತ್ತದೇ ನಿತ್ಯದ ದಿನಚರಿಗೆ ಮರಳಬೇಕಿದೆ. ಗೌರಮ್ಮ ಗಣಪನನ್ನು ಕಳುಹಿಸಿದ ಮಾರನೆಯ ಬೆಳಗು, ಮನೆ ಮನ ಖಾಲಿ ಖಾಲಿ.
ಚಿಕ್ಕವರಿದ್ದಾಗ ಗಣೇಶನನ್ನು ಅಳುತ್ತಾ ಕಳುಹಿಸುತ್ತಿದ್ದ ನೆನಪು. ಮರದ ಕುರ್ಚಿಯ ಮೇಲೆ ಕೂರಿಸಿದ ಗೌರಮ್ಮ, ಒಂದರೊಳಗೊಂದು ಮಾವಿನೆಲೆಗಳನ್ನು ಸೇರಿಸಿ ಅಜ್ಜಿ ಕಟ್ಟುತ್ತಿದ್ದ ತೋರಣ, ಆ ಕಾಲದಲ್ಲಿ ಅರಳುತ್ತಿದ್ದ ಬಣ್ಣ ಬಣ್ಣದ ಡೇರಾ ಸೇವಂತಿಗೆ ಹೂಗಳು ಭಕ್ತಿಯಿಂದ ಪೂಜೆಮಾಡುತ್ತಿದ್ದ ಅಮ್ಮ, ಮಗುಟ ಉಟ್ಟು ಪೂಜೆ ಮಾಡಿಸಿತ್ತಿದ್ದ ಅಪ್ಪ, ಕಾಯಿ ಒಬ್ಬಟ್ಟು-ಕರಿಗಡಬುಗಳ ರುಚಿ, ಗಣಪನ ನೈವೇದ್ಯಕ್ಕೆ ವಿಶೇಷವಾಗಿ ಮಾಡುತ್ತಿದ್ದ ಎಳ್ಳು ಬೆಲ್ಲ (ಸಂಕ್ರಾಂತಿಯಲ್ಲಿ ಮಾಡುವಂತೆ), ಅಮ್ಮ ಅಕ್ಕ ಸೇರಿ ಹಾಡುತ್ತಿದ ಅಂಬಾ ಭಗವತಿ ತಾಯೆ ಹಾಡು, ಗೇಟಿನಿಂದ ಜಗುಲಿಯವರೆಗೆ ಸಗಣಿಯಿಂದ ಸಾರಿಸಿ ಹಾಕುತ್ತಿದ್ದ ಹಲವಾರು ರಂಗೋಲಿಗಳು. ಮನೆಗೆ ಬಂದವರನ್ನು “ನಮ್ ಗೌರಿಗೆ ಒಂದು ಹಾಡು ಹೇಳಿ” ಎಂದು ಅಜ್ಜಿ ಕೇಳುತ್ತಿದ್ದ ರೀತಿ. ನೆನಪಿನ ಸಂಚಿ ಬಿಚ್ಚಿದರೆ ಪದರ ಪದರವಾಗಿ ಹೊರಹೊಮ್ಮುವ ನೆನಪುಗಳು.
ಕೊನೆ ಹನಿ – ಅಪ್ಪ ಮಗುಟ ಉಟ್ಟು ಪೂಜೆ ಮಾಡಿಸಿ ಹೊರಬಂದಾಗ ನೋಡಿದ ಪಕ್ಕದ ಮನೆ ಮಗು ಹೇಳಿದ್ದು: “ಅಯ್ಯೋ ತಾತ ಸೀರೆ ಉಟ್ಕೊಂಡವ್ರೆ”
Subscribe to:
Posts (Atom)