ಪುಟ್ಟಿಯ ಬಾಲ್ಯ
ಬೂದುಗುಂಬಳಕಾಯಿ ಸಿಪ್ಪೆಯ ಸಂಡಿಗೆ
ರತ್ನ ಅಡಿಗೆಮನೆ ಕೆಲಸ ಮುಗಿಸಿ ಹೊರಬಂದಳು. ಬೆಲ್ ಸದ್ದಾಯಿತು. ಮನೆಯಲ್ಲಿದ್ದ ಮಗ ಬಾಗಿಲು ತೆಗೆದ. ಗಾರ್ಡನರ್ ಬಂದಿದ್ದಾನೆಂದು ಹೇಳಿ. ಹಿಂದಿನ ದಿನ ತಂದಿದ್ದ ಪಾಟ್, ಗಿಡಗಳನ್ನು ಕೊಡಲು ಹೋದ. ಯಜಮಾನರು ಗಡಿಬಿಡಿಯಿಂದ ಅವರಿಗೆ ಸೂಚನೆಗಳನ್ನು ಕೊಡಲು ಹೊರಗೆ ಹೋದರು. ರತ್ನ ಸೋಫಾದ ಮೇಲೆ ಕುಳಿತಳು. ಅವಳ ಮನಸ್ಸು ಅವಳು ಪುಟ್ಟಿಯಾಗಿದ್ದ ಕಾಲಕ್ಕೆ ಕುಪ್ಪಳಿಸುತ್ತಾ ಹೋಯಿತು.
ಪುಟ್ಟಿಯ ಅಜ್ಜಿ ಪುಟ್ಟಿಯನ್ನು ಕೂಗುತ್ತಾ ಹೊರಗೆ ಬಂದರು. ಕಪ್ಪೆಯಂತೆ ಕುಪ್ಪಳಿಸುತ್ತಾ ತೆಂಗಿನಮರ ಹತ್ತುತ್ತಿದ್ದ ಪುಟ್ಟಿ "ನಾನಿಲ್ಲಿದೀನಿ ಚಿಕ್ಕಮ್ಮಾ" ಎಂದು ಉತ್ತರಿಸಿದಳು. ಅಜ್ಜಿಗೆ ಹೃದಯ ಬಾಯಿಗೆ ಬಂತು. ಹಿತ್ತಲಲ್ಲಿ ಕೆಲಸ ಮಾಡುತ್ತಿದ್ದ ಮೋನನನ್ನು ಪುಟ್ಟಿಯನ್ನು ಇಳಿಸಲು ಕೂಗಿದರು. ಅವನು ಬರುವಷ್ಟರಲ್ಲಿ ಪುಟ್ಟಿ ಜರ್ ಎಂದು ಕಿರುಚುತ್ತಾ ಜಾರಿ ಅರ್ಧ ಹತ್ತಿದ ತೆಂಗಿನಮರದಿಂದ ಇಳಿದಾಗಿತ್ತು.
ಅಜ್ಜಿಯ ಬಳಿ ಬಂದು ಏನು ಬೇಕೆಂದು ಕೇಳಿದಳು. ಅವಳಿಗೆ ನಿರಾಸೆಯಾಗಿತ್ತು. ಹಿಂದಿನದಿನ ಚಿಕ್ಕ ತೆಂಗಿನಮರ ಹತ್ತಿ ಎಳನೀರು ಮುಟ್ಟಿ ಬಂದಿದ್ದಳು. ಯಾರೂ ನೋಡಿರಲಿಲ್ಲ. ಇವತ್ತು ಮನೆಯಲ್ಲಿ ಅಜ್ಜಿ ,ದೊಡ್ಡಕ್ಕ ಮಾತ್ರ ಇದ್ದರು. ಅಜ್ಜಿ ಹಿತ್ತಲಲ್ಲಿದ್ದರು. ಜಗಲಿಯ ಮೇಲೆ ಚಂದಮಾಮ ಓದುವುದರಲ್ಲಿ ಮುಳುಗಿದ್ದ ಪುಟ್ಟಿಯನ್ನು ನೋಡಿ ಸದ್ಯ ಪರವಾಗಿಲ್ಲವೆಂದುಕೊಂಡು ಅಕ್ಕ ಸ್ನಾನಕ್ಕೆ ಹೋಗಿದ್ದಳು. ಪುಟ್ಟಿ ಅದೇ ಸಮಯವೆಂದು ಆ ಬೀದಿಯಲ್ಲಿ ಇರುವ ಉಳಿದ ಮರಗಳಿಗಿಂತ ಎತ್ತರವಾಗಿದ್ದ ಬಹಳ ದೊಡ್ಡ ಕಾಯಿ ಬಿಡುತ್ತಿದ್ದ ದೊಡ್ಡ ಮರ ಹತ್ತುವ ಸಾಹಸ ಮಾಡಿದ್ದಳು.
ಅಕ್ಕ ಸ್ನಾನ ಮಾಡಿ ಸ್ತೋತ್ರ ಹೇಳುತ್ತಾ ತುಳಸಿ ಪೂಜೆಗೆಂದು ಬಂದಾಗ, ಜಗಲಿಯ ಮೇಲೆ ಒಂದು ಪ್ರಹಸನ ನಡೆಯುತ್ತಿತ್ತು. ಬಟ್ಟೆ ಒಣಗಿಹಾಕಲು ಕಟ್ಟಿದ್ದ ಹಗ್ಗ ಪುಟ್ಟಿಯ ಕೈಗೆ ಸುತ್ತಲಾಗಿತ್ತು. ಅಜ್ಜಿ ಅವಳ ಕಿವಿಹಿಂಡಿ ಗಂಡುಬೀರಿಯಂತೆ ಮರ ಹತ್ತುತ್ತೀಯಾ ಎಂದು ಗದರುತ್ತಿದ್ದರು. ಪಕ್ಕದ ಮನೆ ಮಗು ಪುಟ್ಟೀನ ಕಟ್ಳಿ ಹಾಕ್ಬೇಡಿ ಬೈಬೇಡಿ ಎಂದು ಅಳುತ್ತಿತ್ತು. ಅವಳಿಗೆ ಏನೂ ಗೊತ್ತಾಗಲಿಲ್ಲ. ತುಳಸಿಗೆ ಬೇಗ ಬೇಗ ಕೈಮುಗಿದು ಪುಟ್ಟಿಯ ಬಳಿ ಬಂದಳು. ಅಜ್ಜಿ ಪುಟ್ಟಿ ತೆಂಗಿನಮರ ಹತ್ತಿದ ಕತೆ ಹೇಳುತ್ತಿದ್ದರು. ಅಷ್ಟೊತ್ತಿಗೆ ಮೋನ ಪುಟ್ಟಿಗೆ ಕೊಡಲು ಸೀಬೆಕಾಯಿ ತಂದ. ಪುಟ್ಟಿ ಮೋನನಿಗೆ ದೂರು ಹೇಳಿದಳು. ಅಜ್ಜಿ ಅಕ್ಕನ ಗಾಬರಿ ಕಂಡು ನಗುತ್ತಾ ಪುಟ್ಟಿಯ ಹಿಂದಿನ ದಿನದ ಸಾಹಸ ಬಣ್ಣಿಸಿದ. ತಾನು ಮರ ಹತ್ತುವುದನ್ನು ಯಾರೂ ನೋಡಿಲ್ಲವೆಂದು ತಿಳಿದಿದ್ದ ಪುಟ್ಟಿಗೆ ತನ್ನ ಸಾಹಸ ಮೋನ ನೋಡಿರುವುದನ್ನು ತಿಳಿದು ಸಂತೋಷವಾಯಿತು. ಅಪ್ಪ ಅಮ್ಮ ಏನೆನ್ನುವರೋ ಎಂದು ಅಕ್ಕನಿಗೆ ಭಯದಿಂದ ನಡುಕ. ಅಜ್ಜಿಗೆ ಪುಟ್ಟಿಯನ್ನು ಹುಡುಕಿ ಬಂದ ಕಾರಣ ನೆನಪಾಯಿತು. ಸೀಗುಂಬಳದ ಬೀಜ ನೆಡಲು ಪುಟ್ಟಿಯ ಕಟ್ಟು ಬಿಡಿಸಿ ಕರೆದೊಯ್ದರು. ಪುಟ್ಟಿ ನೆಟ್ಟರೆ ಗಿಡ ಚೆನ್ನಾಗಿ ಬೆಳೆಯುವುದೆಂದು ಅವರ ನಂಬಿಕೆ.
ರತ್ನ ತಕ್ಷಣ ಅವಳ ಅಕ್ಕನಿಗೆ ಫೋನ್ ಮಾಡಿದಳು.
ಇಬ್ಬರಿಗೂ ಅಜ್ಜಿಯ ನೆನಪಿಂದ ಹೃದಯತುಂಬಿ ಬಂತು. ಅಜ್ಜಿಗೆ ಅಮ್ಮ ಒಬ್ಬರೇ ಮಗಳು. ಹಾಗಾಗಿ ಇವರ ಮನೆಯಲ್ಲೇ ಇದ್ದರು. ಅಜ್ಜಿ ಹಾಡು ಹಸೆ ಅಡುಗೆ ಎಲ್ಲದರಲ್ಲೂ ಮುಂದು. ಹತ್ತಿರದಲ್ಲಿದ್ದ ಆಸ್ಪತ್ರೆಗೆ ಹೋಗಿ ಸಹಾಯಕ್ಕೆ ಯಾರೂ ಇಲ್ಲದ ಬಾಣಂತಿಯರಿಗೆ ಅಡುಗೆ ಮಾಡಿ ಕೊಟ್ಟು ಬರುತ್ತಿದ್ದ ಹೃದಯವಂತೆ. ಚಿಕ್ಕ ವಯಸ್ಸಿನವರಿದ್ದಾಗ ಯಾರೋ ಹಾಡು ಕಲಿಸಿಕೊಡಲು ನಿರಾಕರಿಸಿದರೆಂದು ಅಟ್ಟದ ಮೇಲೆ ಕುಳಿತು ಅವರ ಹಾಡನ್ನು ಕಲಿತು ಅವರ ಮುಂದೆಯೇ ಹಾಡಿದ ಛಲಗಾತಿ. ಪತಿ ಪತ್ರಕರ್ತ. ಸಾಯುವವರೆಗೆ ಪೇಪರ್ ತಪ್ಪದೆ ಓದುತ್ತಿದ್ದ ಅಕ್ಷರಸ್ಥೆ. ಇಂದಿರಾ ಗಾಂಧಿಯನ್ನು ಬಹಳ ಇಷ್ಟ ಪಡುತ್ತಿದ್ದರೂ ಆಕೆ ಸೊಸೆಯನ್ನು ಹೊರ ಹಾಕಿದಳೆಂದು ಪೇಪರ್ ನಲ್ಲಿ ಓದಿ ಆ ನಡತೆಯನ್ನು ಮೊಮ್ಮಗಳೆದುರು ಖಂಡಿಸಿದ ನ್ಯಾಯವಾದಿ. ಗಾಂಧಿಯ ಬಗ್ಗೆ ಮಾತನಾಡಿರೆಂದು ಕೇಳಿದಾಗ ಮಹಾತ್ಮ ಎಂಬ ಒಂದೇ ಪದ ಹೇಳಿ ಕೈ ಮುಗಿದಾಕೆ. ಅಣ್ಣನ ಸಂಸಾರ ದೊಡ್ಡದೆಂದು ಸಾಮಾನು ಹೊತ್ತು ದೂರದವರೆಗೆ ನಡೆದು ಕೊಟ್ಟು ಬರುತ್ತಿದ್ದ ವಾತ್ಸಲ್ಯಮಯಿ. ಕ್ರೋಷಾ, ಕಸೂತಿ ಎಲ್ಲಾ ತಿಳಿದಿದ್ದ ಕಲಾವಿದೆ.
ಪುಟ್ಟಿ ಅಕ್ಷರ ಕಲಿಯುವಾಗ ಅಜ್ಜಿ, ಅಮ್ಮ ಸಂಡಿಗೆಯಿಟ್ಟರೆ ಅದರಲ್ಲಿ ಮನೆಯವರ ಹೆಸರಿನ ಅಕ್ಷರ ಬರುವಂತೆ ಒರಳಿನಲ್ಲಿ ಒತ್ತುತ್ತಿದ್ದರು. ಪುಟ್ಟಿ ಅದನ್ನು ಓದಿ ಸಂಡಿಗೆ ತಿನ್ನುತ್ತಿದ್ದಳು. ಕಲಿಕೆಯ ಸುಂದರ ವಿಧಾನ ಅಲ್ವಾ. ಸೌಟಿನಲ್ಲಿ ಪುಟ್ಟ ಪುಟ್ಟ ರೊಟ್ಟಿ ತಟ್ಟಿ ಕೊಡುತ್ತಿದ್ದರು. ಈರುಳ್ಳಿ ಸಂಡಿಗೆ ಕರಿದಾಗಲೆಲ್ಲಾ ಪುಟ್ಟಿ ಈರುಳ್ಳಿ ತಿನ್ನುವುದಿಲ್ಲವೆಂದು ಅವಳಿಗಾಗಿ ಬೂದುಗುಂಬಳದ ಸಿಪ್ಪೆ ಒಣಗಿಸಿ ಮಾಡಿದ ಸಂಡಿಗೆ ಕರಿದು ಕೊಡುತ್ತಿದ್ದರು.
ಅಜ್ಜಿಯ ಅಪ್ಪ ಶಿವರಾತ್ರಿಯ ದಿನ ಮರಳಿನ ಲಿಂಗಗಳನ್ನು ಮಾಡಿ ಪೂಜೆ ಮಾಡುತ್ತಿದ್ದರಂತೆ. ರಾತ್ರಿಯೆಲ್ಲಾ ಪೂಜೆ ಮಾಡಿ ಬೆಳಿಗ್ಗೆ ಮಂಗಳಾರತಿ. ಮಂಗಳಾರತಿ ತೆಗೆದುಕೊಳ್ಳಲು ಬಂದ ಅಜ್ಜಿಯ ಅತ್ತಿಗೆಯ ಹಣೆಯ ಮೇಲೆ ನಾಮ. ಮುಖ ತೊಳೆದು ಬರಲು ಸೊಸೆಗೆ ಹೇಳಿದ ಅಜ್ಜಿಯ ಅಪ್ಪ. ಅಲ್ಲಿದ್ದವರಿಗೆಲ್ಲಾ ಗೊತ್ತು ಇದು ಮುಸಿ ಮುಸಿ ನಗುತ್ತಿದ್ದ ಅಜ್ಜಿಯದೇ ಕೆಲಸವೆಂದು. ಆಗಿನ ಕಾಲ ಮಕ್ಕಳಾಗಿದ್ದಾಗಲೇ ಮದುವೆ. ನಿದ್ದೆ ತಡೆಯಲಾಗದೇ ಮಲಗಿದ್ದ ಅತ್ತಿಗೆಯ ಮುಖದ ಮೇಲೆ ನಾಮ ಮೂಡಿತ್ತು. ಇನ್ನೊಮ್ಮೆ ಅತ್ತಿಗೆಯನ್ನು ಫೋಟೋ ತೆಗೆಯುತ್ತೇನೆಂದು ಕುರ್ಚಿಯ ಮೇಲೆ ಕೂರಿಸಿ ಸಿಟ್ ಸ್ತ್ಯಾಂಡ್, ಸಿಟ್ ಸ್ತ್ಯಾಂಡ್ ಹೇಳುತ್ತಾ ಕುರ್ಚಿ ಎಳೆದು ಬೀಳಿಸಿದ್ದರು. ಎಲ್ಲಾ ಮಕ್ಕಳಾಟಿಕೆ ಹುಡುಗಾಟ ಎಂದು ನೆನಪು ಹಂಚಿಕೊಳ್ಳುತ್ತಿದ್ದ ಅಜ್ಜಿಯ ಪಕ್ಕ ಕುಳಿತು ನಗುತ್ತಿದ್ದ ಅವರ ಅತ್ತಿಗೆ, ಪುಟ್ಟಿಯ ಇನ್ನೊಬ್ಬ ಅಜ್ಜಿ.(ಅಪ್ಪನ ಅಮ್ಮ). ಅತ್ತಿಗೆ ನಾದಿನಿಯರಲ್ಲಿ ಎಷ್ಟು ಪ್ರೀತಿ, ವಿಶ್ವಾಸ. ಅಮ್ಮ ಅತ್ತೆಯ ನಡುವೆ ಸಹ ಅಂತಹುದೇ ಮಧುರ ಬಾಂಧವ್ಯ. ಅಕ್ಕ ತಂಗಿಯರ ಮಾತು ತಮ್ಮ ಮೇಲೆ ಅದೇ ರೀತಿಯ ಅಕ್ಕರೆ ತೋರುವ ಅತ್ತಿಗೆಯ ಕಡೆಗೆ ಹೊರಳಿತು. ತಾವು ಹಿಂದಿನ ಬಾರಿ ಹೋದಾಗ ಮಾಡಿದ್ದ ಡ್ರೈ ಫ್ರೂಟ್ಸ್ ಪಾಯಸ ಮತ್ತು ಮುದ್ದೆ ಸೊಪ್ಪು ಕೂಟಿನ ರುಚಿ ಬಾಯಿಗೆ ಬಂತು. ಅಷ್ಟರಲ್ಲಿ ಮೊಮ್ಮಗನ ಅಳು ಕೇಳಿ ಮಗು ಎದ್ದಿತೆಂದು ಹೇಳುತ್ತಾ ಫೋನಿಟ್ಟ ರತ್ನ ತೊಟ್ಟಿಲ ಬಳಿ ನಡೆದಳು.
ಅಜ್ಜಿ ಎನ್ನುವ ರಸಭರಿತ ಮಾಗಿದ ಹಣ್ಣಿಗೆ ಅರ್ಪಣೆ.
ಅಜ್ಜಿಯ ಮನೆಯ ಬಳಿ ಇದ್ದ ಅವರ ಅಕ್ಕನ ಮಕ್ಕಳು ಚಿಕ್ಕಮ್ಮಾ ಎಂದು ಕರೆಯುತ್ತಿದ್ದರಿಂದ ಅಣ್ಣ ಮಾತು ಕಲಿಯುವಾಗ ಹಾಗೇ ಕರೆಯುತ್ತಿದ್ದರಿಂದ ಅಜ್ಜಿ ಮೊಮ್ಮಕ್ಕಳಿಗೆಲ್ಲಾ ಚಿಕ್ಕಮ್ಮನಾದರು. ಹೊಸದಾಗಿ ಮನೆಗೆ ಬಂದ ಗೆಳತಿಯರ ಮುಂದೆ " ಚಿಕ್ಕಮ್ಮಾ" ಎಂದು ಕೂಗಿ ಅಜ್ಜಿ ಹೊರಬಂದಾಗ ಅವರ ಮುಖದಲ್ಲಿ ಮೂಡುತ್ತಿದ್ದ ಅಚ್ಚರಿ ನೋಡುವುದು ಪುಟ್ಟಿಗೆ ಒಂದು ಮೋಜು.
Rumba chennagide
ReplyDelete