Monday, October 5, 2020

ಸುಖದ ಘಳಿಗೆ

 ಸುಮ್ಮನೆ ಕೂತಿದ್ದಾಗ ಅನಿಸಿದ್ದು ಬರೆದಿದ್ದೀನಿ.

ಮನುಷ್ಯರಾಗಿ ನಾವು ಸುಖ ದುಃಖಗಳನ್ನು ಬೇಕಾದಷ್ಟು ಅನುಭವಿಸಿರ್ತೀವಿ. ಸುಖದ ಘಳಿಗೆಗಳನ್ನು ಪಟ್ಟಿ ಮಾಡಿದೀನಿ

ತಾಯ ಮಡಿಲಲ್ಲಿ ಮಲಗಿ ಎದೆಹಾಲ ಕುಡಿಯುವ ಸುಖ

ತಂದೆಯ ತೋಳಲ್ಲಿ ತೂಗುವ ಸುಖ

ಅಜ್ಜಿಯ ಲಾಲಿ ಕೇಳುವ ಸುಖ

ತಾತನ ಕೈಹಿಡಿದು ತಿರುಗಾಡುವ ಸುಖ

ಹಲ್ಲುಜ್ಜಿ ಬಂದು ತಾಯ  ಸೆರಗಲ್ಲಿ ಮುಖ ಒರೆಸುವ ಸುಖ  

ಅಣ್ಣನಿಂದ ತಲೆ ಮೊಟಕಿಸಿಕೊಳ್ಳವ ಸುಖ

ಬಿದ್ದು ಆದ ಗಾಯಕ್ಕೆ ಅಕ್ಕನಿಂದ ಆಯಿಂಟ್ಮೆಂಟ್ ಹಚ್ಚಿಸಿಕೊಳ್ಳುವ ಸುಖ

ಅಮ್ಮ ಕೊಟ್ಟ ತಿಂಡಿಯನ್ನು ತಂಗಿ ತಮ್ಮಂದಿರೊಂದಿಗೆ ಹಂಚಿಕೊಳ್ಳುವ ಸುಖ

ರಾತ್ರಿ ಪಕ್ಕದಲ್ಲಿ ಮಲಗಿ ಅವರಿಂದ ಒದೆಸಿಕೊಳ್ಳುವ ಸುಖ

ಗೆಳೆಯ/ಗೆಳತಿಯ ಕೈ ಹಿಡಿದು ಶಾಲೆಗೆ ಹೋಗುವ ಸುಖ

ಶಾಲೆಯ ಗಂಟೆ ಬಾರಿಸಿದೊಡನೆ ಹೋ ಎಂದು ಕಿರುಚುತ್ತಾ ಮನೆಗೆ ಓಡುವ ಸುಖ

ಪುಸ್ತಕದ ಬ್ಯಾಗು ಮನೆಯಲ್ಲೆಸೆದು ಆಟಕ್ಕೆ ಓಡುವ ಸುಖ

ಹೊಸದಾಗಿ ಕಲಿತಿದ್ದನ್ನು ಎಲ್ಲರ ಮುಂದೆ ಪ್ರದರ್ಶಿಸುವ ಸುಖ

ನೆಟ್ಟ ಬೀಜ ಮೊಳಕೆಯೊಡೆಯುವುದನ್ನು ನೋಡುವ ಸುಖ

ಮಳೆ ಬರುವ ಮೊದಲ ಮಣ್ಣಿನ ವಾಸನೆಯ ಸುಖ

ಯಾರ ಮಾತೂ ಕೇಳದೆ ಮಳೆಯಲ್ಲಿ ನೆನೆಯುವ ಸುಖ

ಪ್ರಕೃತಿಯ ಬಣ್ಣಗಳಿಗೆ ಬೆರಗಾಗುವ ಸುಖ

ಇಂಪಾದ ಸಂಗೀತ ಕೇಳುವ ಸುಖ

ಹಾಸಿಗೆಯಲ್ಲೊರಗಿ ಕತೆ ಪುಸ್ತಕ ಓದುವ ಸುಖ

ಏಲಕ್ಕಿ ಬೆರೆಸಿದ ನಿಂಬೆ ಪಾನಕ ಕುಡಿಯುವ ಸುಖ

ಚಳಿಯಲ್ಲಿ ಬೆಚ್ಚಗೆ ಕಾಫಿ/ಟೀ ಹೀರುವ ಸುಖ

ಗೆಳೆಯ/ಗೆಳತಿಯರಿಂದ ಛೇಡಿಸಿಕೊಳ್ಳುವ ಸುಖ

ಅತ್ತೆ/ಮಾವರೊಂದಿಗೆ ಚೌಕಾಭಾರ ಆಡುವ ಸುಖ

ಚಿಕ್ಕಪ್ಪ /ಚಿಕ್ಕಮ್ಮರೊಂದಿಗೆ ಕೇರಂ ಆಡುತ್ತಾ ಮೋಸದಿಂದ ರೆಡ್ ಹೊಡೆಯುವ ಸುಖ

ಹಬ್ಬದಲ್ಲಿ ಹೊಸ ಬಟ್ಟೆ ತೊಟ್ಟು ಸಿಹಿಯೂಟ ಮಾಡುವ ಸುಖ

ಗೆಳೆಯ/ಗೆಳತಿಯರೊಡನೆ  ಪಾನಿಪುರಿ ತಿನ್ನುತ್ತಾ ಹರಟೆ ಹೊಡೆಯುವ ಸುಖ

ಸಂಗಾತಿ ತೋಳ ದಿಂಬಿನ ಮೇಲೆ ಮಲಗುವ ಸುಖ

ಪುಟ್ಟ ಮಕ್ಕಳನ್ನು ಮುದ್ದಾಡುವ ಸುಖ

ಹದವಾದ ಬಿಸಿ ನೀರಲ್ಲಿ ಸ್ನಾನ ಮಾಡುವ ಸುಖ

ಮನೆಯವರೆಲ್ಲಾ ಕುಳಿತು ಭಾರತ ಕ್ರಿಕೆಟ್ ನಲ್ಲಿ ಗೆಲ್ಲುವುದನ್ನು ಟೀವಿಯಲ್ಲಿ ನೋಡುವ ಸುಖ

ಇತರರ ಸಾಧನೆ ನೋಡಿ ಹೆಮ್ಮೆ ಪಡುವ ಸುಖ

ಕಿರಿಯರ ಪ್ರಗತಿ ನೋಡಿ ಆನಂದಿಸುವ ಸುಖ

ಹಿರಿಯರಿಂದ ತುಂಬು ಹೃದಯದ ಆಶೀರ್ವಾದ ಪಡೆಯುವ ಸುಖ

ಕಿರಿಯರನ್ನು ಮನಸಾರೆ ಹರಸುವ ಸುಖ

 ಇದರಲ್ಲಿ ನೀವು ಅನುಭವಿಸಿದ ಸುಖ ನೆನಪಿಸಿಕೊಳ್ಳಿ. ಪಟ್ಟಿಯಲ್ಲಿಲ್ಲದ, ಪಟ್ಟಿಯಲ್ಲಿ ಸೇರಿಸಲು ಆಗದ ಸುಖ ನೆನಪಿಸಿಕೊಂಡು ಖುಷಿಪಡಿ. Be happy today. And always remain so.


Friday, July 24, 2020

ನಾನು ಮಾಡಿದ ಯಡವಟ್ಟು- ನೀವೇ ಓದಿ
    ಅವತ್ತು ಭಾನುವಾರ. ಕಡಲೆಕಾಳು ಉಸಲಿ ಮಾಡಬೇಕು ಅನ್ಕೊಂಡಿದ್ದೆ. ನೆನಪಿಟ್ಟು ಕಾಳು ನೆನೆ ಹಾಕಿದ್ದೆ. ಕಾಳು ಬೇಯಿಸಿದೆ. ಬೆಳಗಿನ ತಿಂಡಿ ಮಾಡುವಷ್ಟರಲ್ಲಿ ಯಜಮಾನರು ಹೊರ ಹೋಗುವ ಕಾರ್ಯಕ್ರಮ ತಿಳಿಸಿದರು. ಬೇಗ ಬೇಗ ಕಾಳು ಸೋಸಿ, ಉಸಲಿ ತಯಾರಿಸಿದೆ. ಕಾಳು ಬೆಂದ ನೀರಿಂದ ಸಾರು ಮಾಡಲು ಪಾತ್ರೆಯಲ್ಲಿ ತೆಗೆದಿಟ್ಟು ಯಜಮಾನರ ಹಿಂದೆ ಹೊರಟೆ.
  ಬರುವಾಗ ಸಂಜೆಯಾಗಿತ್ತು. ಪರಿಚಿತರ ಮನೆಯಲ್ಲಿ ಕಾಫಿ ಕಾರ್ಯಕ್ರಮ ಸಹ ಮುಗಿದಿತ್ತು.
ಮನೆಗೆ ಬಂದು ಕೂರುವಷ್ಟರಲ್ಲಿ ಯಜಮಾನರ ಸಹೋದ್ಯೋಗಿಗಳು ಬಂದರು. ಪಾತ್ರೆಯಲ್ಲಿ ಬೆರೆಸಿದ ಲೈಟಾದ ಕಾಫಿ ಇತ್ತು. ಅದಕ್ಕೆ ಹಾಲು ಡಿಕಾಕ್ಷನ್ ಸೇರಿಸಿದೆ. ಕಾಫಿ ಮಾಡಿಕೊಟ್ಟೆ. ಅತ್ತೆ ನಾದಿನಿ ಕುಡಿದು ದೇವಸ್ಥಾನಕ್ಕೆ ಹೊರಟರು. ಮುಖ ಸೊಟ್ಟಗಾದಂಗೆ ಅನ್ನಿಸಿತು. ಸಕ್ಕರೆ ಕಮ್ಮಿಯಾಯಿತೇನೋ ಅಂತ ಅನ್ಕೊಂಡು, ಪಾತ್ರೆಗಳನ್ನು ತೊಳೆಯಲು ಬಿಡುವು ಮಾಡತೊಡಗಿದೆ. ಮೈದುನನ ಗೆಳೆಯರು ಬಂದರು. ಪಾತ್ರೆಯಲ್ಲಿದ್ದ ಕಾಫಿಗೆ  ಇನ್ನಷ್ಟು ಅದಕ್ಕೆ ಹಾಲು ಡಿಕಾಕ್ಷನ್ ಸೇರಿಸಿದೆ. ಕಾಫಿ ಮಾಡಿಕೊಟ್ಟೆ. ಅವರು ಲೋಟ ಕೆಳಗಿಡುವಾಗ ನಾದಿನಿ ಬಂದಳು. ನಿಮಗೆಲ್ಲಾ ಕಾಫೀ ಕೇಳುತ್ತಾ ಬಂದಳು. ನಮದಾಯಿತು ಅಂತ ಕುರ್ಚಿಯಿಂದ ಎಗರಿದರು. ಯಾಕೋ ರಿಯಾಕ್ಷನ್ ತೀವ್ರವಾಯಿತೆನ್ನಿಸಿದರೂ ಪಾತ್ರೆ ತೊಳೆಯಲು ಹೊರಟೆ. ನಾದಿನಿಗೆ ಯಜಮಾನರೇ ಕಾಫಿ ಕೊಟ್ಟರು. ಪಾತ್ರೆ ಕೆಲಸ ಮುಗಿದ ಮೇಲೆ ಹೊರ ಬಂದಾಗ ನಾದಿನಿ ಹೇಳಿದಳು. ಅಣ್ಣ ಕೊಟ್ಟ ಕಾಫಿ ರುಚಿಯಿರಲಿಲ್ಲ. ಅತ್ತಿಗೆ ನೀವೆ ಕಾಫಿ ಮಾಡಿಕೊಡಿ. ಒಳಗೆ ಹೋದಾಗ ಹಾಗೇ ಸಾರಿಗೆ ಇಡೋಣ ಅಂತ ಕಾಳಿನ ಕಟ್ಟು ಹುಡುಕಿದಾಗಲೇ ಗೊತ್ತಾದದ್ದುನಾನು ಮಾಡಿದ ಯಡವಟ್ಟು. ಎಲ್ಲರಿಗೂ ಕಟ್ಟು ಕಾಫಿ ಕುಡಿಸಿದ್ದೆ. ಬೆಳಿಗ್ಗೆ ಅವಸರದಲ್ಲಿ ಕಾಫಿ ಮಾಡುವ ಪಾತ್ರೆಯಲ್ಲಿ ಕಟ್ಟು ಇಟ್ಟಿದ್ದೇ ಈ ಯಡವಟ್ಟಿಗೆಲ್ಲಾ ಕಾರಣ.
ಕೊನೆಯ ಕೊಸರು---- ನನ್ನ ಮೈದುನನ ಗೆಳೆಯ ಇದುವರೆಗೂ ನಮ್ಮ ಮನೆಯಲ್ಲಿ ಕಾಫಿ ಕುಡಿಯುವ ಧೈರ್ಯ ಮಾಡಿಲ್ಲ.

ಇದನ್ನು ಓದಿ ನೀವು ಮಾಡಿದ ಯಡವಟ್ಟು ಜ್ಞಾಪಿಸಿಕೊಂಡು ಒಮ್ಮೆ ನಕ್ಕುಬಿಡಿ.

Sunday, July 19, 2020

ಪುಟ್ಟಿಯ ಬಾಲ್ಯ

ದೆವ್ವ ಭೂತ ಪಿಶಾಚಿ

ರತ್ನ ಊಟ ಮುಗಿಸಿ ಹಾಸಿಗೆಯ ಮೇಲೆ ಉರುಳಿದಳು. ಅವಳ ಮನ ಅವಳು ಪುಟ್ಟಿಯಾಗಿದ್ದ ಕಾಲಕ್ಕೆ ಓಡಿತು. ಅವಳ ಪರೀಕ್ಷೆ ಮುಗಿದಿತ್ತು. ಆಡಲು ಯಾರೂ ಇರಲಿಲ್ಲ. ಚಿನ್ನು ಅಜ್ಜಿ ಮನೆಗೆ ಹೋಗಿದ್ದಳು. ಒಬ್ಬಳೇ ಕುಳಿತು ಕಲ್ಲಾಟವಾಡಿದಳು. ಬೇಸರ ಬಂತು. ಅಷ್ಟರಲ್ಲಿ ಪರೀಕ್ಷೆಗೆ ಓದುತ್ತಾ ಕುಳಿತ ಅಣ್ಣ ಹೊರಗೆ ಬಂದ. 
   ನೀಲಿ ಆಕಾಶದಲ್ಲಿ ಮೋಡಗಳು ತೇಲುತ್ತಿತ್ತು. ದೊಡ್ಡ ಮೋಡವೊಂದನ್ನು ತೋರಿಸಿ ಅದೆಲ್ಲಿಂದ ಬಂತೆಂದು ಪುಟ್ಟಿ ಕೇಳಿದಳು. ಅಣ್ಣ ಮೈಸೂರೆಂದು ಹೇಳಿದ. ಇನ್ನೊಂದು ಮೋಡ ಮಂಡ್ಯದಿಂದ ಬಂದಿತ್ತು.ಮತ್ತೊಂದು ಹುಲಿಕೆರೆಯಿಂದ, ಗಾಣದಾಳು, ಮಲ್ಲನಾಯಕನ ಕಟ್ಟೆ, ಶಿವಳ್ಳಿ, ದುದ್ದ ಸುತ್ತಮುತ್ತಿನ ಎಲ್ಲ ಊರುಗಳಿಂದ ಬಂದ ಮೋಡಗಳು ಸರಿದು ಹೋದವು. ಅಣ್ಣ ತಾಳ್ಮೆಯಿಂದ ಹೇಳುತ್ತಲೇ ಇದ್ದ. ಪುಟ್ಟಿಯ ಗಮನ ಬೇಲಿಯಲ್ಲಿ ಅರಳಿದ್ದ ಕೆಂಪು ದಾಸವಾಳದ ಕಡೆ ಹರಿಯಿತು. ಅಣ್ಣ ಕಿತ್ತುಕೊಟ್ಟ
ಹೂಗಳನ್ನು ಸ್ವಲ್ಪ ಹೊತ್ತಿಗೆ ಮುಂಚೆ ಕಟ್ಟಿದ್ದ ಮರಳಿನ ಕಪ್ಪೆಗೂಡಿಗೆ ಸಿಕ್ಕಿಸಿದಳು. ಗೂಡಲ್ಲಿ ಮುತ್ತಿರುವ ಕಪ್ಪೆಚಿಪ್ಪು ಇದೆಯಾ ಅಂತ ನೋಡಿದಳು. ಮನೆಗೆ ಮರಳಿ ಬಂದಳು.
  ಏನು ಮಾಡಲು ತೋಚಲಿಲ್ಲ. ಚಂದಮಾಮ ಓದಲು ತೆಗೆದಳು. ಎಲ್ಲಾ ಕತೆಗಳನ್ನೂ ಓದಿದ್ದಾಗಿತ್ತು. ಅಕ್ಕನ ಗೆಳತಿಯ ಮನೆಗೆ ಹೋಗಿ ಬೇರೆ ಪುಸ್ತಕ ತರ್ತೀನೆಂದು ಚಂದಮಾಮ ಹಿಡಿದು ಅಮ್ಮನಿಗೆ ಹೇಳಿ ಹೊರಟಳು. ದಾರಿಯಲ್ಲಿ ನಾಗರಾಜ ಸಿಕ್ಕಿದ. ಚಂದಮಾಮದಲ್ಲಿದ್ದ ಚಿತ್ರ ನೋಡುವುದಾಗಿ ಹೇಳಿದ. ಪಕ್ಕದಲ್ಲಿದ್ದ  ಮರದ ಕೆಳಗಿನ ಕಲ್ಲಿನ ಮೇಲೆ ಕೂರಲು ಪುಟ್ಟಿ ಹೊರಟಳು. ನಾಗರಾಜ - ಹುಣಸೆಮರದ ಕೆಳಗೆ  ಕೂತ್ಕೊಬೇಡ್ವೆ ಅದರಲ್ಲಿ ದೆವ್ವ ಇರ್ತೈತೆ- ಅಂತ ಹೇಳಿದ.
ಪುಟ್ಟಿಗೆ ನಗು ಬಂತು.
 ಪುಟ್ಟಿಯ ಅಪ್ಪ ಹೇಳ್ತಿದ್ದರು. ದೆವ್ವ ಭೂತ ಯಾವ್ದೂ ಇಲ್ಲ. ಎಲ್ಲಾ ಭ್ರಮೆ ಅಂತ. ವಾಕಿಂಗ್ ಹೋದಾಗ ದೆವ್ವ ಇದೆಯೆಂದು ಕೆಲವರು ನಂಬಿದ್ದ ಸುರಗಿ ತೋಪನ್ನು ತೋರಿಸಿದ್ದರು. ರಾತ್ರಿಹೊತ್ತು ಒಬ್ಬರೇ ಅದನ್ನು ಯಾರೂ ದಾಟುವುದಿಲ್ಲವೆಂದೂ, ತಾವು ಹಲವಾರು ಬಾರಿ ದಾಟಿದ್ದರೂ ತಮ್ಮನ್ಯಾವ  ದೆವ್ವ ಮೋಹಿನಿಯೂ ಹಿಡಿಯಲಿಲ್ಲವೆಂದು ನಗೆಯಾಡಿದ್ದರು. ತಮ್ಮ ಸಹೋದ್ಯೋಗಿಯೊಬ್ಬರು ಒಬ್ಬರೇ ದಾಟಬೇಕಾದಾಗ ಮನೆಗೆ ಬಂದು ಕುಳಿತು ಪರದಾಡಿದ್ದು, ಕೊನೆಗೆ ತಾವೇ ಅವರನ್ನು ಮನೆಗೆ ತಲುಪಿಸಿ ಬಂದದ್ದನ್ನು ಹೇಳಿ ನಗಿಸಿದ್ದರು.
ಬೇರೆ ಪುಸ್ತಕ ತೊಗೊಂಡು ಪುಟ್ಟಿ ಮನೆಗೆ ಬಂದಳು. ಮನೆಯೆಲ್ಲಾ ಬೆಲ್ಲ, ತುಪ್ದದ ಘಮಲು ತುಂಬಿತ್ತು. ಅಜ್ಜಿ ಗುಲಪಾವಟೆ ಮಾಡಿರಬಹುದೆಂದು ಅಡಿಗೆ ಮನೆಗೆ ಹೋದಳು. ಅಮ್ಮ ಉಂಡೆ ಕೊಡುವುದಾಗಿ ಕರೆದರು. ಪುಟ್ಟಿ ಅಮ್ಮನಿಗೆ ಒರಗಿ ಕುಳಿತಳು. ಅಮ್ಮ ಗುಲಪಾವಟೆಯಲ್ಲಿ ಸೌಟು, ಚಮಚ, ಎಲೆ, ಹೂ ಎಲ್ಲಾ ಮಾಡಿಕೊಡುತ್ತಿದ್ದರು. ಪುಟ್ಟಿ ಗುಳುಂ ಮಾಡುತ್ತಿದ್ದಳು. ಗಮನ ಅಜ್ಜಿ ಅಮ್ಮನ ಮಾತಿನ ಕಡೆಗೆ ಹೋಯಿತು.
ಅಜ್ಜಿ-- ಮಧ್ಯರಾತ್ರಿಲಿ ನಿಮ್ಮೆಜಮಾನರು, ಮರಿ ಬ್ಯಾಟರಿ ಹಿಡಿದು ಓಡಾಡುತ್ತಿದ್ದರು. ಏನಾಯ್ತು.
ಅಮ್ಮ- ಮರಿ ದಿನಾ ರಾತ್ರಿ ಓದ್ಕೊಳ್ಳೋವಾಗ ಬಳೆ ಶಬ್ದ ಕೇಳ್ತಿತ್ತಂತೆ. ಅವರಪ್ಪನಿಗೆ ಹೇಳಿದಾನೆ. ಅದೇನು ನೋಡೇಬಿಡೋಣ ಅಂತ ಎದ್ದಿದ್ದರು.
ಅಜ್ಜಿ-ಹಾಳು ಹುಣಸೆಮರ ಬೇರೆ ಮನೆ ಮುಂದೆ.
ಅಮ್ಮ- ಅಮ್ಮ ನೀನೂ ಸರಿ. ಆ ಹುಣಸೆಹಣ್ನಿನ ಗೊಜ್ಜು ತೊಕ್ಕು ಬಾಯಿ ಚಪ್ಪರಿಸಿ ತಿಂತಿಯಾ. ಈಗ ಹಾಳು ಹುಣಸೆಮರ ಅಂತೀಯಾ .
ಅಜ್ಜಿ- ಅದ್ಸರಿ ಬಳೆ ಶಬ್ದ?
ಅಮ್ಮ- ಅದೆಲ್ಲಾ ಈ ಚೇಷ್ಟೆಪುರಕಿಯ ಕೆಲಸ. ಬಳೆ ಆಟ ಆಡಿ  ಬಳೆ ಚೂರನ್ನೆಲ್ಲಾ ಕಿಟಕಿಯ ಮೇಲೆ ಇಟ್ಟಿದಾಳೆ. ಬೆಕ್ಕು ಅದರ ಮೇಲೆ ಓಡಾಡಿದಾಗ ಘಲ್ ಘಲ್ ಅಂತ ಸದ್ದಾಗಿದೆ. ಮರಿನೂ ಮೊದಲು ತಲೆ ಕೆಡಸ್ಕೊಂಡಿಲ್ಲ. ದಿನಾ ಶಬ್ದ ಬಂದಿದ್ದರಿಂದ  ಅವರಪ್ಪನಿಗೆ ಹೇಳಿದಾನೆ. 
ಅಜ್ಜಿ- ಅಂತೂ ಅಪ್ಪ ಮಗ ಪತ್ತೆದಾರಿ ಮಾಡಿ ಕಂಡುಹಿಡಿದರೆನ್ನು.
ಪುಟ್ಟಿಗೆ ಬೆಳಿಗ್ಗೆ ಎದ್ದ ತಕ್ಷಣ ನಿನಗೆ ಕಾದಿದೆಯೆಂದು ಚಿಕ್ಕಕ್ಕ ಬೆರಳು ತೋರಿಸಿದ್ದು ಅಣ್ಣ ತಲೆಯ ಮೇಲೆ ಮೊಟಕಿ ಕಿವಿ ಹಿಂಡಿದುದರ ರಹಸ್ಯ ಬಯಲಾಯಿತು. 
ಕಾಲಿಂಗ್ ಬೆಲ್ ಸದ್ದಾಯಿತು. ರತ್ನ ಎದ್ದು ಕೂತಳು. ಯಜಮಾನರು ಬಾಗಿಲು ತೆರೆದರು. ಬೇಗ ಬೇಗ ರೆಡಿಯಾಗಿ, ಇವತ್ತು ರವೀಂದ್ರ ಕಲಾಕ್ಷೇತ್ರಕ್ಕೆ ನಾಟಕಕ್ಕೆ ಟಿಕೆಟ್ ತೊಗೊಂಡಿದೀನಿ. ಗಣೇಶಂದೇ ಡೈರೆಕ್ಷನ್ --ಮಗಳ ಧ್ನನಿ. ರತ್ನ ಸಂಭ್ರಮದಿಂದ  ಎದ್ದಳು.

Sunday, March 29, 2020

ಹಿಗ್ಗಿನ ಬುಗ್ಗೆ ಹಿಗ್ಗಿನ ಬುಗ್ಗೆ –ನಾನು ಕೊಂಡ ಮೊದಲ ಪುಸ್ತಕ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಪುಸ್ತಕ ಮಾರಲು ಶಾಲೆಗೆ ಯಾರೋ ಬಂದಿದ್ದರು. ಆಗ ಎರಡು ರೂ ಕೊಟ್ಟು ಕೊಂಡ ಪುಸ್ತಕ. ಈಗಲೂ ನನ್ನ ಬಳಿ ಇದೆ. ಮೊನ್ನೆ ಮನೆ ಬದಲಿಸುವಾಗ, ಅದನ್ನು ಕಂಡು ನಾನು ಹಿಗ್ಗಿನ ಬುಗ್ಗೆಯೇ ಆದೆ. ಹೆಸರೇ ಎಷ್ಟು ಚಂದ. ಮನಸ್ಸಿಗೆ ಖುಷಿ, ಉಲ್ಲಾಸ ತರುವ ಪದಗಳು—ಹಿಗ್ಗಿನ ಬುಗ್ಗೆ. ಅದರಲ್ಲಿ ಕೆಲವು ಕುವೆಂಪುರವರ ಕವನಗಳು (ಒಂದು ಕವನದಲ್ಲಿ ಚಂದಿರ ದೇವರ ಪೆಪ್ಪರಮೆಂಟೇನಮ್ಮ ಅಂತ ಇದೆ-ಎಂತಹ ಸುಂದರ ಕಲ್ಪನೆ.), ಜನಪದ ಹಾಡು, ದಾಸರ ಪದ, ವೀ.ಸೀ, ಪುತಿನ ರವರ ಕವನಗಳ ಜೊತೆ ಜನಗಣಮನದ ಪೂರ್ಣರೂಪ ಸಹ ಇದೆ. ಎಷ್ಟೊಂದು ಪುಸ್ತಕಗಳು ಅಷ್ಟೇ ನೆನಪುಗಳು. ಗೆಳತಿಯರು ಕೊಟ್ಟ ಉಡುಗೊರೆಯ ಪುಸ್ತಕಗಳು, ಹಿರಿಯರು ಆಶಿರ್ವದಿಸಿ ಕೊಟ್ಟ ಪುಸ್ತಕಗಳು, ಪುಸ್ತಕದಂಗಡಿಯಲ್ಲಿ ದುಡ್ಡು ಸಾಲದೆ, ಮೊದಲ ಬಾರಿ ಹೇಳದೆ ಕೇಳದೆ ಯಜಮಾನರ ಡೆಬಿಟ್ ಕಾರ್ಡ್ ಉಜ್ಜಿ, ಕೊಂಡ ಪುಸ್ತಕ. ಶಾಲೆಗೆ ಬಹುಮಾನಕ್ಕಾಗಿ ಪುಸ್ತಕ ತರಲು ಹೋದಾಗ ಕೊಲೀಗ್ ರಿಂದ ಸಾಲ ಪಡೆದು ಕೊಂಡ ಪುಸ್ತಕ. ಅಪ್ಪನ ಕೆಲವು ಪುಸ್ತಕಗಳು, ಅಣ್ಣ ಕೊಂಡ ಪುಸ್ತಕ, ಯಾರದ್ದೋ ಎರವಲು ತಂದು ಹಿಂದಿರುಗಿಸದ ಪುಸ್ತಕಗಳು, ಅಕ್ಕನ ಮಕ್ಕಳಿಗೆ ಅಣ್ಣನ ಮಗನಿಗೆ ನಾದಿನಿ ಭಾವಂದಿರ ಮಕ್ಕಳಿಗೆ ಕತೆ ಹೇಳಲು ತಂದ ಈಗ ಒಂದೇ ಉಳಿದಿರುವ ದಿನಕ್ಕೊಂದು ಕತೆ ಪುಸ್ತಕ(ಅನುಪಮಾ ನಿರಂಜನ ಅವರದ್ದು). ಮಗನಿಗೆ ತಿಂಗಳಾನುಗಟ್ಟಳೆ ಹೇಳಿದ್ದೆ ಹೇಳಿ ಕೇಳಿದ್ದೆ ಕೇಳಿ ಅವನಿಗೂ ನನಗೂ ಬೇಜಾರೇ ಆಗದ ಕತೆಗಳ ಪುಸ್ತಕ. ಯಾವುದೋ ಹಳೆ ಪುಸ್ತಕದಂಗಡಿಯಿಂದ ತಂದ ಜಿ. ಪಿ ರಾಜರತ್ನಂರವರ ಮಕ್ಕಳ ಕವನಗಳ ಪುಸ್ತಕ, ಬೈಂಡ್ ಮಾಡಿದ ಹಲವಾರು ಕಾಮಿಕ್ ಗಳ ಪುಸ್ತಕ. ಅದರಲ್ಲಿದ್ದ ರಾಮ, ಶಿವ ಪಾರ್ವತಿಯರ ಕತೆ ಮತ್ತು ಅಭಿಮನ್ಯುವಿನ ಕತೆ ಪ್ರತಿದಿನ ಮಗನಿಗೆ ಹೇಳಬೇಕಿತ್ತು. ರಾಮ ಮಂತ್ರ ತಾರಕ ಮಂತ್ರ ಅಂತಾರೆ. ಮಗ ಚಿಕ್ಕವನಿದ್ದಾವಾಗ ಪ್ರತಿದಿನ ರಾಮಧ್ಯಾನ ಮಾಡ್ಸಿದಾನೆ.ಜೊತೆಗೆ ಹಳೆಯ ಡೈರಿಗಳು. ಅಪ್ಪ ಬರೆದಿರುವ ವಿಳಾಸಗಳು. ಅಮ್ಮ ಬರೆದಿರುವ ಸೋಪ್ ಮಾಡುವ ವಿಧಾನ. ದೊಡ್ಡಕ್ಕನ ಕೈಬರಹದ ಸ್ವೆಟರ್ ಡಿಸೈನುಗಳು, ಮದ್ಯೆ ಮಧ್ಯೆ ಒಂದೊಂದು ಎಂಬ್ರಾಯಿಡರಿ ಡಿಸೈನಿನ ಟ್ರೇಸಿಂಗ್ ಪೇಪರ್ಗಳು. ಚಿಕ್ಕಕ್ಕ ಬರೆದಿಟ್ಟುಕೊಂಡಿದ್ದ ಕಿವಿ ಮಾತುಗಳು ಮತ್ತು ಸಾಮಾನ್ಯಜ್ಞಾನದ ಅಂಶಗಳು. ಅಕ್ಕನ ಮಗಳು ರೆಡ್ ಪೆನ್ನಿನಲ್ಲಿ ಬರೆದ ಮುದ್ದಾದ ಜಿಂಕೆಮರಿಯ ಚಿತ್ರ. ಅಣ್ಣನ ಮಗ ಎಲ್ಲರ ಹೆಸರು ಬರೆಯಲು ಕಲಿತಾಗ ಬರೆದ ಹೆಸರುಗಳ ಪಟ್ಟಿ,ಜೊತೆಗೆ ಮಕ್ಕಳು ಚಿಕ್ಕವರಾಗಿದ್ದಾಗ ಮಾಡಿದ ಲೆಕ್ಕಗಳು, ನನ್ನ ಮದುವೆಗೆ ಆಹ್ವಾನಿಸಬೇಕಾದವರ ಪಟ್ಟಿ, ಚಿಕ್ಕಕ್ಕನನ್ನು ಅಣಕಿಸಲು ನಾನು ಬರೆದಿದ್ದ ಭಾವ ಮತ್ತು ಅವರ ಅಪ್ಪನ ತೀರಾ ಕೆಟ್ಟ ಚಿತ್ರ –ಎಲ್ಲವೂ ಅವುಗಳಲ್ಲಿದೆ.ಅಪ್ಪನ ಹತ್ತಿರ ಪುಸ್ತಕಗಳ ದೊಡ್ಡ ಸಂಗ್ರಹವೇ ಇತ್ತಂತೆ. ಅವರ ಮದುವೆಯ ನಂತರ ಅಮ್ಮ ಮತ್ತು ಅವರು ಇಬ್ಬರೇ ಹೈದರಾಬಾದಿನಲ್ಲಿ ನೆಲಸಿದ್ದರು. ರಜಾ಼ಕರ ಗಲಾಟೆಯ ಸಮಯದಲ್ಲಿ ಅಲ್ಲಿಂದ ಹೊರಟು ಬರುವಾಗ ಕೆಲವು ಪುಸ್ತಕಗಳನ್ನು ಮಾತ್ರ ತರಲಾಯಿತೆಂದು ಹೇಳುತ್ತಿದ್ದರು. ಅಮ್ಮನಿಗೂ ಓದುವ ಹವ್ಯಾಸವಿತ್ತು. ನಮ್ಮ ಅಜ್ಜಿ ಸಹ ಬಿಡುವಿನ ವೇಳೆಯಲ್ಲೆಲ್ಲಾ ದೇವಿ ಭಾಗವತ ಮತ್ತು ದಿನಪತ್ರಿಕೆ ಓದುತ್ತಿದ್ದರು. ಅವರುಗಳು ಹೇಳುತ್ತಿದ್ದ ಕತೆಗಳು ಮತ್ತು ಹಾಡುಗಳು, ಅವರು ಕೊಟ್ಟ ಓದುವ ಮತ್ತು ಹಾಡು ಕೇಳುವ ಸಂಸ್ಕಾರ ನಾನು ಯಾವಾಗಲೂ ಖುಷಿಯಾಗಿರಲು ಮತ್ತು ನೆಮ್ಮದಿಯಾಗಿರಲು ಕಾರಣವೆಂದು ನನ್ನ ನಂಬಿಕೆ. ನಾನು ಮೊದಮೊದಲು ಓದಿದ ಪುಸ್ತಕಗಳಲ್ಲಿ ಸುಧಾ ಸಹ ಸೇರಿತ್ತು .ಅದರಲ್ಲಿ ಶೂಜ, ಡಾಬೂ ಮತ್ತು ಟಾರ್ಜಾ಼ನಿನ ಕಾರ್ಟೂನ್ ಬರುತ್ತಿತ್ತು. ಸುಧಾ ಬರುವ ದಿನ ಗೇಟಿನ ಬಳಿ ಕಾದಿದ್ದು ಅದನ್ನು ಓದಿದ ನೆನಪು. ನಂತರದ ದಿನಗಳಲ್ಲಿ ಓದಿದ್ದು ಚಂದಮಾಮ ಮತ್ತು ಬಾಲಮಿತ್ರ. ಕೆಲವು ಪುಸ್ತಕಗಳನ್ನು ಅಕ್ಕನ ಗೆಳತಿಯ ಮನೆಯಿಂದ ತಂದು ಓದಿದ ನೆನಪು. ಯಾರೋ ಪುಸ್ತಕ ಮಾರುವವರು ಮನೆಗೆ ತಂದು ಮಾರಿದ ಭಾರತ - ಭಾರತಿ ಮಾಲಿಕೆಯ ಪುಸ್ತಕಗಳು. ಅಂಗೈಯಷ್ಟೇ ಅಗಲದ ಚೌಕದ ಪುಸ್ತಕಗಳು ಅದರಲ್ಲಿ ಚಂದ್ರಶೇಖರ ಆಜಾ಼ದ್ , ವಲ್ಲಭಭಾಯಿ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿಯಂತಹ ದೇಶಭಕ್ತರ, ಲಕ್ಷ್ಮಣ, ದಶರಥ, ಭೀಮ, ದ್ರೌಪದಿಯಂತಹ ಪೌರಾಣಿಕ ಪಾತ್ರಗಳ ಮತ್ತು ಅಶೋಕ, ತೆನಾಲಿ ರಾಮಕೃಷ್ಣ, ಬುದ್ಧ, ಬಸವಣ್ಣ ನಂತಹ ಐತಿಹಾಸಿಕ ಪುರುಷರ ಮತ್ತು ವಾಲ್ಮೀಕಿ, ವಿಶ್ವಾಮಿತ್ರನಂತಹ ಮುನಿಗಳ ಕಿರು ಜೀವನಚರಿತ್ರೆಯಿತ್ತು. ನಮಗಾಗ ಅವರೇ ಸೆಲೆಬ್ರಟಿಗಳು. ಆ ಪುಸ್ತಕಗಳು ಅಪಾರ ಆನಂದ ಕೊಟ್ಟವು. ಆ ಸಮಯದಲ್ಲೇ ಹರ್ಷವರ್ಧನನ ಕಾಮಿಕ್ ಪುಸ್ತಕ ತಂದುಕೊಟ್ಟಿದ್ದರು. ಅದರ ಕೊನೆಗೆ ಪ್ರಶ್ನೆಗಳು ಸಹ ಇದ್ದವು ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿದ್ದೂ ನೆನಪಿದೆ. ನನ್ನ ಬಳಿ ಶ್ರೀನಿವಾಸ ಕಲ್ಯಾಣದ ಕಾಮಿಕ್ ಪುಸ್ತಕವಿತ್ತು. ದೊಡ್ಡವರೆಲ್ಲ ನವರಾತ್ರಿಯ ಸಮಯದಲ್ಲಿ ರಾಮಾಯಣ, ಮಹಾಭಾರತ ಅಥವಾ ಬೇರೆ ಯಾವುದಾದರೂ ದೇವರ ಪುಸ್ತಕ ಓದುವಾಗ, ನಾನು ಶ್ರೀನಿವಾಸ ಕಲ್ಯಾಣವನ್ನೇ ಪ್ರತಿದಿನ ಒಂದುಬಾರಿ ಓದುತ್ತಿದ್ದೆ. ಹೊಸ ಪಠ್ಯ ಪುಸ್ತಕ(ಕನ್ನಡ ಮಾತ್ರ) ನೋಡಿದಾಗ ಆಗುತ್ತಿದ್ದ ಸಂತೋಷವೇ ಬೇರೆ. ರಾತ್ರಿ ನಾನು ಮಲಗಿದ ಮೇಲೆ ಹೊಸ ಪುಸ್ತಕ ತಂದಾಗ ನಮ್ಮಪ್ಪ ನನ್ನನ್ನು ಎಬ್ಬಿಸಿ ಪುಸ್ತಕ ತೋರಿಸಿದ ಸವಿನೆನಪು.(ಇಲ್ಲದಿದ್ದರೆ ಅತ್ತು ಭೂಮಿ ಆಕಾಶ ಒಂದು ಮಾಡುತ್ತಿದ್ದೆ) ; ನಂತರ ಓದಿದ್ದು ಬಾಬು ಕೃಷ್ಣಮೂರ್ತಿಗಳ ಅಜೇಯ. ಅಕ್ಕಂದಿರು ಓದಿದ ಪುಸ್ತಕಗಳ ಬಗ್ಗೆ ಚರ್ಚೆ ಮಾಡುವಾಗ, ನಾನೂ ಅವನ್ನೆಲ್ಲಾ ಓದಬೇಕೆಂಬ ಹಂಬಲ.(ನಿರುಪಮಾರ ಒಂದು ಪುಸ್ತಕ ನಾನು ಓದಲೇ ಇಲ್ಲ)ಆದರೆ ಎಸ್ಎಸ್ಎಲ್ಸಿಗೆ ಮುಂಚೆ ಕಾದಂಬರಿ ಓದುವಂತಿಲ್ಲವೆಂದು ಅಮ್ಮನ ಆಜ್ಞೆ. ಅಣ್ಣ ತರುತ್ತಿದ್ದ ನಿಯತಕಾಲಿಕಗಳ ಕತೆ ಓದಲಷ್ಟೇ ಅನುಮತಿಯಿತ್ತು. ಪಾಠದ ಪುಸ್ತಕದಲ್ಲಿ ಅಡಗಿಸಿ ಕತೆ ಓದುತ್ತಿದ್ದ ಗೆಳತಿಯರನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತಿತ್ತು. ನನಗಾವತ್ತೂ ಆ ನಿರ್ಬಂದವೇ ಇರಲಿಲ್ಲ. ಎಸ್ಎಸ್ಎಲ್ಸಿಗೆ ಮುಂಚೆಯೇ ಅನುಮತಿ ಸಿಕ್ಕು ಓದಿದ ಪುಸ್ತಕ ಕೆ.ವಿ ಅಯ್ಯರ್ ರವರ ಶಾಂತಲಾ.ಅದು ಒಂದು ರಮ್ಯ ಲೋಕಕ್ಕೆ ನನ್ನನ್ನು ಕರೆದೊಯ್ದಿತ್ತು. ಅದೇ ಸುಮಾರಿಗೆ ರಜಾದಲ್ಲಿ ಓದು ಅಂತ ಅಣ್ಣ ಲೈಬ್ರರಿಯಿಂದ ತಂದುಕೊಟ್ಟ ನವರತ್ನ ರಾಮರಾಯರ ಕೆಲವು ನೆನಪುಗಳು ಪುಸ್ತಕ -ನಂತರ ನಾನೇ ಕೊಂಡುಕೊಂಡೆ. ಮತ್ತೆ ಮತ್ತೆ ಓದಿದ ಪುಸ್ತಕಗಳಲ್ಲಿ ಅದೂ ಒಂದು.ಎಸ್ಎಸ್ಎಲ್ಸಿ ಮುಗಿಸಿದ ನಂತರ ಕಾದಂಬರಿ ಓದಲು ಆರಂಭಿಸಿದ್ದಾಯಿತು. ಲೈಬ್ರರಿಯಿಂದ ತಂದು ಓದಿದ ಹಲವಾರು ಪುಸ್ತಕಗಳು ನನಗೆ ಹೊತ್ತು ಕಳೆಯುವ ಸಮಸ್ಯೆಯೇ ಇಲ್ಲದಂತೆ ಮಾಡಿದವು. ತ್ರಿವೇಣಿ, ವಾಣಿ, ಎಂ ಕೆ ಇಂದಿರಾ, ಭೈರಪ್ಪ, ತ.ರಾ.ಸು. ಶಿವರಾಮ ಕಾರಂತರ ಕಾದಂಬರಿಗಳು, ಕುವೆಂಪುರವರ ಎರಡೂ ಕಾದಂಬರಿಗಳು ಆಗಲೇ ಓದಿದ್ದು. ನಂತರ ಇಂಗ್ಲೀಶ್ ಪುಸ್ತಕಗಳನ್ನೂ ಓದಲು ಆರಂಬಿಸಿದ ಮೇಲೆ ಆಯ್ಕೆ ವಿಸ್ತಾರವಾಯಿತು. ಮೊದಮೊದಲು ಓದಿದ ಜೇನ್ ಆಸ್ಟಿನ್ ಕಾದಂಬರಿಗಳು, ಅಗಾಥ ಕ್ರಿಸ್ಟಿಯ ಪತ್ತೇದಾರಿ ಕಾದಂಬರಿಗಳು ಈಗಲೂ ಇಷ್ಟ. ಪಿ.. ಜಿ. ವುಡ್ ಹೌಸರ ತಿಳಿಹಾಸ್ಯದ ಚಿತ್ರವಿಚಿತ್ರ ಪಾತ್ರಗಳಿರುವ ಕಾದಂಬರಿಗಳು ಬಹಳ ಖುಷಿಕೊಟ್ಟಿವೆ. ಖಲೀಲ್ ಗಿಬ್ರಾನ್ ಮಕ್ಕಳ ಬಗ್ಗೆ ಬರೆದ ಸಾಲುಗಳಂತೂ ನಾನು ಮೊದಲ ಬಾರಿಗೆ ಅನುವಾದ ಮಾಡಲು ಪ್ರೇರೇಪಿಸಿತು. ಈಗ ಅದೇ ನನ್ನ ವೃತ್ತಿಯಾಗಿದೆ.ನಾನು ಬರೆಯಲು ಕುಳಿತದ್ದು ಪುಸ್ತಕಳು ನನ್ನ ಮೇಲೆ ಮಾಡಿದ ಪ್ರಭಾವದ ಬಗ್ಗೆ. ಆದರೆ ಬರೆದದ್ದು ಇದು. ಕೊನೆಯ ಕೊಸರು ಮುಗುಳ್ನಗೆಗಾಗಿ,ಮೇಲೆ ಹೇಳಿದ ರಾಮನ ಕಾಮಿಕ್ ನಲ್ಲಿ ಕೈಕೇಯಿ ರಾಮ ಸೀತೆಯರಿಗೆ ನಾರುಮಡಿ ಕೊಟ್ಟಳು ಎಂದಿದೆ. ನನ್ನ ಮಗನ ಪ್ರಶ್ನೆ ಕೈಕೇಯಿ ಯಾಕೆ ಅರಮನೆಯಲ್ಲಿ ನಾರುಮಡಿ ಇಟ್ಟುಕೊಂಡಿದ್ದಳು? ನಾನು ಕಾಲೇಜಿನಲ್ಲಿ ಓದುವಾಗ ನಮ್ಮ ಇಂಗ್ಲೀಶ್ ಲೆಕ್ಚರರ್ ನೆನಪಿನ ಬಗ್ಗೆ ಮಾತಾಡ್ತಾ ಇದ್ದರು. ಕುವೆಂಪುರವರ ಆತ್ಮಚರಿತ್ರೆ-ಹೆಸರೇ ನೆನಪಿನ ದೋಣಿ ನಮ್ಮ ಲೈಬ್ರರಿಯಲ್ಲಿದೆ ನೋಡಿದೀರಾ ಅಂದರು. ನಾನು ಕೈಯೆತ್ತಿದೆ. ನಿಮಗೆ ಹೇಗನ್ನಿಸಿತು ಅದರ ಬಗ್ಗೆ ಅಂದರು. ನಾನು ಓದಿರಲೇ ಇಲ್ಲ. ಬರೀ ನೋಡಿದ್ದೆ ಅಷ್ಟೆ.

Monday, February 3, 2020

ನಕ್ಕುಬಿಡಿ

ಒಂದು ಹಳೆಯ ಹಾಡಿದೆ, ನೀವೆಲ್ಲಾ ಕೇಳಿರಬಹುದು. ಬಹುಶಃ ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾದು. ನಯನದಲಿ ದೊರೆಯಿರಲು ಯಾರ ಕಾಣಲಿ ಒಂದು ವೆಬ್ ಸೈಟಲ್ಲಿ ಅದು ಹೀಗಿದೆ--- ನಯನದಲಿ ಪೊರೆಯಿರಲು ಯಾರ ಕಾಣಲಿ ಪುಣ್ಯಾತ್ಮರು ಯಾರೋ ಸರಿಯಾಗೇ ಬರೆದಿದ್ದಾರೆ ಇದನ್ನು ಹೇಳಿದಾಗ , ಸ್ನಾನ ಮಾಡುತ್ತಿದ್ದ ನನ್ನ ಮಗ ಕಿರುಚಿದ್ದು--- ನಯನದಲಿ ನೊರೆಯಿರಲು ಯಾರ ಕಾಣಲಿ