ನಾನು
ಮಾಡಿದ ಯಡವಟ್ಟು- ನೀವೇ ಓದಿ
ಅವತ್ತು ಭಾನುವಾರ. ಕಡಲೆಕಾಳು ಉಸಲಿ ಮಾಡಬೇಕು ಅನ್ಕೊಂಡಿದ್ದೆ. ನೆನಪಿಟ್ಟು ಕಾಳು
ನೆನೆ ಹಾಕಿದ್ದೆ. ಕಾಳು ಬೇಯಿಸಿದೆ. ಬೆಳಗಿನ ತಿಂಡಿ
ಮಾಡುವಷ್ಟರಲ್ಲಿ ಯಜಮಾನರು ಹೊರ ಹೋಗುವ ಕಾರ್ಯಕ್ರಮ ತಿಳಿಸಿದರು. ಬೇಗ ಬೇಗ
ಕಾಳು ಸೋಸಿ, ಉಸಲಿ ತಯಾರಿಸಿದೆ. ಕಾಳು ಬೆಂದ ನೀರಿಂದ
ಸಾರು ಮಾಡಲು ಪಾತ್ರೆಯಲ್ಲಿ ತೆಗೆದಿಟ್ಟು ಯಜಮಾನರ ಹಿಂದೆ ಹೊರಟೆ.
ಬರುವಾಗ ಸಂಜೆಯಾಗಿತ್ತು. ಪರಿಚಿತರ ಮನೆಯಲ್ಲಿ ಕಾಫಿ ಕಾರ್ಯಕ್ರಮ ಸಹ ಮುಗಿದಿತ್ತು.
ಮನೆಗೆ
ಬಂದು ಕೂರುವಷ್ಟರಲ್ಲಿ ಯಜಮಾನರ ಸಹೋದ್ಯೋಗಿಗಳು ಬಂದರು. ಪಾತ್ರೆಯಲ್ಲಿ ಬೆರೆಸಿದ
ಲೈಟಾದ ಕಾಫಿ ಇತ್ತು. ಅದಕ್ಕೆ ಹಾಲು ಡಿಕಾಕ್ಷನ್ ಸೇರಿಸಿದೆ. ಕಾಫಿ ಮಾಡಿಕೊಟ್ಟೆ. ಅತ್ತೆ ನಾದಿನಿ ಕುಡಿದು ದೇವಸ್ಥಾನಕ್ಕೆ ಹೊರಟರು.
ಮುಖ ಸೊಟ್ಟಗಾದಂಗೆ ಅನ್ನಿಸಿತು. ಸಕ್ಕರೆ ಕಮ್ಮಿಯಾಯಿತೇನೋ
ಅಂತ ಅನ್ಕೊಂಡು, ಪಾತ್ರೆಗಳನ್ನು ತೊಳೆಯಲು ಬಿಡುವು ಮಾಡತೊಡಗಿದೆ.
ಮೈದುನನ ಗೆಳೆಯರು ಬಂದರು. ಪಾತ್ರೆಯಲ್ಲಿದ್ದ ಕಾಫಿಗೆ ಇನ್ನಷ್ಟು ಅದಕ್ಕೆ ಹಾಲು ಡಿಕಾಕ್ಷನ್ ಸೇರಿಸಿದೆ.
ಕಾಫಿ ಮಾಡಿಕೊಟ್ಟೆ. ಅವರು ಲೋಟ ಕೆಳಗಿಡುವಾಗ ನಾದಿನಿ ಬಂದಳು.
ನಿಮಗೆಲ್ಲಾ ಕಾಫೀ ಕೇಳುತ್ತಾ ಬಂದಳು. ನಮದಾಯಿತು ಅಂತ ಕುರ್ಚಿಯಿಂದ
ಎಗರಿದರು. ಯಾಕೋ ರಿಯಾಕ್ಷನ್ ತೀವ್ರವಾಯಿತೆನ್ನಿಸಿದರೂ ಪಾತ್ರೆ ತೊಳೆಯಲು
ಹೊರಟೆ. ನಾದಿನಿಗೆ ಯಜಮಾನರೇ ಕಾಫಿ ಕೊಟ್ಟರು. ಪಾತ್ರೆ ಕೆಲಸ ಮುಗಿದ ಮೇಲೆ ಹೊರ ಬಂದಾಗ ನಾದಿನಿ ಹೇಳಿದಳು. ಅಣ್ಣ
ಕೊಟ್ಟ ಕಾಫಿ ರುಚಿಯಿರಲಿಲ್ಲ. ಅತ್ತಿಗೆ ನೀವೆ ಕಾಫಿ ಮಾಡಿಕೊಡಿ.
ಒಳಗೆ ಹೋದಾಗ ಹಾಗೇ ಸಾರಿಗೆ ಇಡೋಣ ಅಂತ ಕಾಳಿನ ಕಟ್ಟು ಹುಡುಕಿದಾಗಲೇ ಗೊತ್ತಾದದ್ದು
– ನಾನು ಮಾಡಿದ ಯಡವಟ್ಟು. ಎಲ್ಲರಿಗೂ ಕಟ್ಟು ಕಾಫಿ ಕುಡಿಸಿದ್ದೆ.
ಬೆಳಿಗ್ಗೆ ಅವಸರದಲ್ಲಿ ಕಾಫಿ ಮಾಡುವ ಪಾತ್ರೆಯಲ್ಲಿ ಕಟ್ಟು ಇಟ್ಟಿದ್ದೇ ಈ ಯಡವಟ್ಟಿಗೆಲ್ಲಾ
ಕಾರಣ.
ಕೊನೆಯ
ಕೊಸರು----
ನನ್ನ ಮೈದುನನ ಗೆಳೆಯ ಇದುವರೆಗೂ ನಮ್ಮ ಮನೆಯಲ್ಲಿ ಕಾಫಿ ಕುಡಿಯುವ ಧೈರ್ಯ ಮಾಡಿಲ್ಲ.
ಇದನ್ನು
ಓದಿ ನೀವು ಮಾಡಿದ ಯಡವಟ್ಟು ಜ್ಞಾಪಿಸಿಕೊಂಡು ಒಮ್ಮೆ ನಕ್ಕುಬಿಡಿ.
No comments:
Post a Comment