Sunday, March 29, 2020
ಹಿಗ್ಗಿನ ಬುಗ್ಗೆ
ಹಿಗ್ಗಿನ ಬುಗ್ಗೆ –ನಾನು ಕೊಂಡ ಮೊದಲ ಪುಸ್ತಕ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ
ಪುಸ್ತಕ ಮಾರಲು ಶಾಲೆಗೆ ಯಾರೋ ಬಂದಿದ್ದರು. ಆಗ ಎರಡು ರೂ ಕೊಟ್ಟು ಕೊಂಡ ಪುಸ್ತಕ. ಈಗಲೂ ನನ್ನ ಬಳಿ
ಇದೆ. ಮೊನ್ನೆ ಮನೆ ಬದಲಿಸುವಾಗ, ಅದನ್ನು ಕಂಡು ನಾನು ಹಿಗ್ಗಿನ ಬುಗ್ಗೆಯೇ ಆದೆ. ಹೆಸರೇ ಎಷ್ಟು ಚಂದ.
ಮನಸ್ಸಿಗೆ ಖುಷಿ, ಉಲ್ಲಾಸ ತರುವ ಪದಗಳು—ಹಿಗ್ಗಿನ ಬುಗ್ಗೆ. ಅದರಲ್ಲಿ ಕೆಲವು ಕುವೆಂಪುರವರ ಕವನಗಳು
(ಒಂದು ಕವನದಲ್ಲಿ ಚಂದಿರ ದೇವರ ಪೆಪ್ಪರಮೆಂಟೇನಮ್ಮ ಅಂತ ಇದೆ-ಎಂತಹ ಸುಂದರ ಕಲ್ಪನೆ.), ಜನಪದ ಹಾಡು,
ದಾಸರ ಪದ, ವೀ.ಸೀ, ಪುತಿನ ರವರ ಕವನಗಳ ಜೊತೆ ಜನಗಣಮನದ ಪೂರ್ಣರೂಪ ಸಹ ಇದೆ.
ಎಷ್ಟೊಂದು ಪುಸ್ತಕಗಳು ಅಷ್ಟೇ ನೆನಪುಗಳು. ಗೆಳತಿಯರು ಕೊಟ್ಟ ಉಡುಗೊರೆಯ
ಪುಸ್ತಕಗಳು, ಹಿರಿಯರು ಆಶಿರ್ವದಿಸಿ ಕೊಟ್ಟ ಪುಸ್ತಕಗಳು,
ಪುಸ್ತಕದಂಗಡಿಯಲ್ಲಿ ದುಡ್ಡು ಸಾಲದೆ, ಮೊದಲ ಬಾರಿ ಹೇಳದೆ ಕೇಳದೆ ಯಜಮಾನರ ಡೆಬಿಟ್ ಕಾರ್ಡ್ ಉಜ್ಜಿ,
ಕೊಂಡ ಪುಸ್ತಕ. ಶಾಲೆಗೆ ಬಹುಮಾನಕ್ಕಾಗಿ ಪುಸ್ತಕ ತರಲು ಹೋದಾಗ ಕೊಲೀಗ್ ರಿಂದ ಸಾಲ ಪಡೆದು ಕೊಂಡ ಪುಸ್ತಕ.
ಅಪ್ಪನ ಕೆಲವು ಪುಸ್ತಕಗಳು, ಅಣ್ಣ ಕೊಂಡ ಪುಸ್ತಕ, ಯಾರದ್ದೋ ಎರವಲು ತಂದು ಹಿಂದಿರುಗಿಸದ ಪುಸ್ತಕಗಳು,
ಅಕ್ಕನ ಮಕ್ಕಳಿಗೆ ಅಣ್ಣನ ಮಗನಿಗೆ ನಾದಿನಿ ಭಾವಂದಿರ
ಮಕ್ಕಳಿಗೆ ಕತೆ ಹೇಳಲು ತಂದ ಈಗ ಒಂದೇ ಉಳಿದಿರುವ ದಿನಕ್ಕೊಂದು ಕತೆ ಪುಸ್ತಕ(ಅನುಪಮಾ ನಿರಂಜನ ಅವರದ್ದು).
ಮಗನಿಗೆ ತಿಂಗಳಾನುಗಟ್ಟಳೆ ಹೇಳಿದ್ದೆ ಹೇಳಿ ಕೇಳಿದ್ದೆ ಕೇಳಿ ಅವನಿಗೂ ನನಗೂ ಬೇಜಾರೇ ಆಗದ ಕತೆಗಳ ಪುಸ್ತಕ.
ಯಾವುದೋ ಹಳೆ ಪುಸ್ತಕದಂಗಡಿಯಿಂದ ತಂದ ಜಿ. ಪಿ ರಾಜರತ್ನಂರವರ ಮಕ್ಕಳ ಕವನಗಳ ಪುಸ್ತಕ, ಬೈಂಡ್ ಮಾಡಿದ
ಹಲವಾರು ಕಾಮಿಕ್ ಗಳ ಪುಸ್ತಕ. ಅದರಲ್ಲಿದ್ದ ರಾಮ, ಶಿವ ಪಾರ್ವತಿಯರ ಕತೆ ಮತ್ತು ಅಭಿಮನ್ಯುವಿನ ಕತೆ
ಪ್ರತಿದಿನ ಮಗನಿಗೆ ಹೇಳಬೇಕಿತ್ತು. ರಾಮ ಮಂತ್ರ ತಾರಕ ಮಂತ್ರ ಅಂತಾರೆ. ಮಗ ಚಿಕ್ಕವನಿದ್ದಾವಾಗ ಪ್ರತಿದಿನ
ರಾಮಧ್ಯಾನ ಮಾಡ್ಸಿದಾನೆ.ಜೊತೆಗೆ ಹಳೆಯ ಡೈರಿಗಳು. ಅಪ್ಪ ಬರೆದಿರುವ ವಿಳಾಸಗಳು. ಅಮ್ಮ ಬರೆದಿರುವ
ಸೋಪ್ ಮಾಡುವ ವಿಧಾನ. ದೊಡ್ಡಕ್ಕನ ಕೈಬರಹದ ಸ್ವೆಟರ್ ಡಿಸೈನುಗಳು, ಮದ್ಯೆ ಮಧ್ಯೆ ಒಂದೊಂದು ಎಂಬ್ರಾಯಿಡರಿ
ಡಿಸೈನಿನ ಟ್ರೇಸಿಂಗ್ ಪೇಪರ್ಗಳು. ಚಿಕ್ಕಕ್ಕ ಬರೆದಿಟ್ಟುಕೊಂಡಿದ್ದ ಕಿವಿ ಮಾತುಗಳು ಮತ್ತು ಸಾಮಾನ್ಯಜ್ಞಾನದ
ಅಂಶಗಳು. ಅಕ್ಕನ ಮಗಳು ರೆಡ್ ಪೆನ್ನಿನಲ್ಲಿ ಬರೆದ ಮುದ್ದಾದ ಜಿಂಕೆಮರಿಯ ಚಿತ್ರ. ಅಣ್ಣನ ಮಗ ಎಲ್ಲರ
ಹೆಸರು ಬರೆಯಲು ಕಲಿತಾಗ ಬರೆದ ಹೆಸರುಗಳ ಪಟ್ಟಿ,ಜೊತೆಗೆ ಮಕ್ಕಳು ಚಿಕ್ಕವರಾಗಿದ್ದಾಗ ಮಾಡಿದ ಲೆಕ್ಕಗಳು,
ನನ್ನ ಮದುವೆಗೆ ಆಹ್ವಾನಿಸಬೇಕಾದವರ ಪಟ್ಟಿ, ಚಿಕ್ಕಕ್ಕನನ್ನು ಅಣಕಿಸಲು ನಾನು ಬರೆದಿದ್ದ ಭಾವ ಮತ್ತು
ಅವರ ಅಪ್ಪನ ತೀರಾ ಕೆಟ್ಟ ಚಿತ್ರ –ಎಲ್ಲವೂ ಅವುಗಳಲ್ಲಿದೆ.ಅಪ್ಪನ ಹತ್ತಿರ ಪುಸ್ತಕಗಳ ದೊಡ್ಡ ಸಂಗ್ರಹವೇ ಇತ್ತಂತೆ. ಅವರ ಮದುವೆಯ ನಂತರ
ಅಮ್ಮ ಮತ್ತು ಅವರು ಇಬ್ಬರೇ ಹೈದರಾಬಾದಿನಲ್ಲಿ ನೆಲಸಿದ್ದರು. ರಜಾ಼ಕರ ಗಲಾಟೆಯ ಸಮಯದಲ್ಲಿ ಅಲ್ಲಿಂದ
ಹೊರಟು ಬರುವಾಗ ಕೆಲವು ಪುಸ್ತಕಗಳನ್ನು ಮಾತ್ರ ತರಲಾಯಿತೆಂದು ಹೇಳುತ್ತಿದ್ದರು. ಅಮ್ಮನಿಗೂ ಓದುವ ಹವ್ಯಾಸವಿತ್ತು.
ನಮ್ಮ ಅಜ್ಜಿ ಸಹ ಬಿಡುವಿನ ವೇಳೆಯಲ್ಲೆಲ್ಲಾ ದೇವಿ ಭಾಗವತ ಮತ್ತು ದಿನಪತ್ರಿಕೆ ಓದುತ್ತಿದ್ದರು. ಅವರುಗಳು
ಹೇಳುತ್ತಿದ್ದ ಕತೆಗಳು ಮತ್ತು ಹಾಡುಗಳು, ಅವರು ಕೊಟ್ಟ ಓದುವ ಮತ್ತು ಹಾಡು ಕೇಳುವ ಸಂಸ್ಕಾರ ನಾನು
ಯಾವಾಗಲೂ ಖುಷಿಯಾಗಿರಲು ಮತ್ತು ನೆಮ್ಮದಿಯಾಗಿರಲು
ಕಾರಣವೆಂದು ನನ್ನ ನಂಬಿಕೆ.
ನಾನು ಮೊದಮೊದಲು ಓದಿದ ಪುಸ್ತಕಗಳಲ್ಲಿ ಸುಧಾ ಸಹ ಸೇರಿತ್ತು .ಅದರಲ್ಲಿ
ಶೂಜ, ಡಾಬೂ ಮತ್ತು ಟಾರ್ಜಾ಼ನಿನ ಕಾರ್ಟೂನ್ ಬರುತ್ತಿತ್ತು. ಸುಧಾ ಬರುವ ದಿನ ಗೇಟಿನ ಬಳಿ ಕಾದಿದ್ದು
ಅದನ್ನು ಓದಿದ ನೆನಪು. ನಂತರದ ದಿನಗಳಲ್ಲಿ ಓದಿದ್ದು ಚಂದಮಾಮ ಮತ್ತು ಬಾಲಮಿತ್ರ. ಕೆಲವು ಪುಸ್ತಕಗಳನ್ನು
ಅಕ್ಕನ ಗೆಳತಿಯ ಮನೆಯಿಂದ ತಂದು ಓದಿದ ನೆನಪು. ಯಾರೋ
ಪುಸ್ತಕ ಮಾರುವವರು ಮನೆಗೆ ತಂದು ಮಾರಿದ ಭಾರತ - ಭಾರತಿ ಮಾಲಿಕೆಯ ಪುಸ್ತಕಗಳು. ಅಂಗೈಯಷ್ಟೇ ಅಗಲದ
ಚೌಕದ ಪುಸ್ತಕಗಳು ಅದರಲ್ಲಿ ಚಂದ್ರಶೇಖರ ಆಜಾ಼ದ್ , ವಲ್ಲಭಭಾಯಿ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿಯಂತಹ
ದೇಶಭಕ್ತರ, ಲಕ್ಷ್ಮಣ, ದಶರಥ, ಭೀಮ, ದ್ರೌಪದಿಯಂತಹ ಪೌರಾಣಿಕ ಪಾತ್ರಗಳ ಮತ್ತು ಅಶೋಕ, ತೆನಾಲಿ ರಾಮಕೃಷ್ಣ,
ಬುದ್ಧ, ಬಸವಣ್ಣ ನಂತಹ ಐತಿಹಾಸಿಕ ಪುರುಷರ ಮತ್ತು ವಾಲ್ಮೀಕಿ, ವಿಶ್ವಾಮಿತ್ರನಂತಹ ಮುನಿಗಳ ಕಿರು ಜೀವನಚರಿತ್ರೆಯಿತ್ತು.
ನಮಗಾಗ ಅವರೇ ಸೆಲೆಬ್ರಟಿಗಳು. ಆ ಪುಸ್ತಕಗಳು ಅಪಾರ
ಆನಂದ ಕೊಟ್ಟವು. ಆ ಸಮಯದಲ್ಲೇ ಹರ್ಷವರ್ಧನನ ಕಾಮಿಕ್
ಪುಸ್ತಕ ತಂದುಕೊಟ್ಟಿದ್ದರು. ಅದರ ಕೊನೆಗೆ ಪ್ರಶ್ನೆಗಳು ಸಹ ಇದ್ದವು ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿದ್ದೂ
ನೆನಪಿದೆ. ನನ್ನ ಬಳಿ ಶ್ರೀನಿವಾಸ ಕಲ್ಯಾಣದ ಕಾಮಿಕ್
ಪುಸ್ತಕವಿತ್ತು. ದೊಡ್ಡವರೆಲ್ಲ ನವರಾತ್ರಿಯ ಸಮಯದಲ್ಲಿ ರಾಮಾಯಣ, ಮಹಾಭಾರತ ಅಥವಾ ಬೇರೆ ಯಾವುದಾದರೂ
ದೇವರ ಪುಸ್ತಕ ಓದುವಾಗ, ನಾನು ಶ್ರೀನಿವಾಸ ಕಲ್ಯಾಣವನ್ನೇ ಪ್ರತಿದಿನ ಒಂದುಬಾರಿ ಓದುತ್ತಿದ್ದೆ. ಹೊಸ
ಪಠ್ಯ ಪುಸ್ತಕ(ಕನ್ನಡ ಮಾತ್ರ) ನೋಡಿದಾಗ ಆಗುತ್ತಿದ್ದ ಸಂತೋಷವೇ ಬೇರೆ. ರಾತ್ರಿ ನಾನು ಮಲಗಿದ ಮೇಲೆ
ಹೊಸ ಪುಸ್ತಕ ತಂದಾಗ ನಮ್ಮಪ್ಪ ನನ್ನನ್ನು ಎಬ್ಬಿಸಿ ಪುಸ್ತಕ ತೋರಿಸಿದ ಸವಿನೆನಪು.(ಇಲ್ಲದಿದ್ದರೆ ಅತ್ತು
ಭೂಮಿ ಆಕಾಶ ಒಂದು ಮಾಡುತ್ತಿದ್ದೆ) ; ನಂತರ ಓದಿದ್ದು ಬಾಬು
ಕೃಷ್ಣಮೂರ್ತಿಗಳ ಅಜೇಯ. ಅಕ್ಕಂದಿರು ಓದಿದ ಪುಸ್ತಕಗಳ ಬಗ್ಗೆ ಚರ್ಚೆ ಮಾಡುವಾಗ, ನಾನೂ ಅವನ್ನೆಲ್ಲಾ
ಓದಬೇಕೆಂಬ ಹಂಬಲ.(ನಿರುಪಮಾರ ಒಂದು ಪುಸ್ತಕ ನಾನು ಓದಲೇ ಇಲ್ಲ)ಆದರೆ ಎಸ್ಎಸ್ಎಲ್ಸಿಗೆ ಮುಂಚೆ ಕಾದಂಬರಿ
ಓದುವಂತಿಲ್ಲವೆಂದು ಅಮ್ಮನ ಆಜ್ಞೆ. ಅಣ್ಣ ತರುತ್ತಿದ್ದ ನಿಯತಕಾಲಿಕಗಳ ಕತೆ ಓದಲಷ್ಟೇ ಅನುಮತಿಯಿತ್ತು.
ಪಾಠದ ಪುಸ್ತಕದಲ್ಲಿ ಅಡಗಿಸಿ ಕತೆ ಓದುತ್ತಿದ್ದ ಗೆಳತಿಯರನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತಿತ್ತು.
ನನಗಾವತ್ತೂ ಆ ನಿರ್ಬಂದವೇ ಇರಲಿಲ್ಲ. ಎಸ್ಎಸ್ಎಲ್ಸಿಗೆ ಮುಂಚೆಯೇ ಅನುಮತಿ ಸಿಕ್ಕು ಓದಿದ ಪುಸ್ತಕ ಕೆ.ವಿ ಅಯ್ಯರ್
ರವರ ಶಾಂತಲಾ.ಅದು ಒಂದು ರಮ್ಯ ಲೋಕಕ್ಕೆ ನನ್ನನ್ನು ಕರೆದೊಯ್ದಿತ್ತು. ಅದೇ ಸುಮಾರಿಗೆ ರಜಾದಲ್ಲಿ ಓದು
ಅಂತ ಅಣ್ಣ ಲೈಬ್ರರಿಯಿಂದ ತಂದುಕೊಟ್ಟ ನವರತ್ನ ರಾಮರಾಯರ ಕೆಲವು ನೆನಪುಗಳು ಪುಸ್ತಕ -ನಂತರ ನಾನೇ ಕೊಂಡುಕೊಂಡೆ. ಮತ್ತೆ
ಮತ್ತೆ ಓದಿದ ಪುಸ್ತಕಗಳಲ್ಲಿ ಅದೂ ಒಂದು.ಎಸ್ಎಸ್ಎಲ್ಸಿ ಮುಗಿಸಿದ ನಂತರ ಕಾದಂಬರಿ ಓದಲು ಆರಂಭಿಸಿದ್ದಾಯಿತು. ಲೈಬ್ರರಿಯಿಂದ
ತಂದು ಓದಿದ ಹಲವಾರು ಪುಸ್ತಕಗಳು ನನಗೆ ಹೊತ್ತು ಕಳೆಯುವ ಸಮಸ್ಯೆಯೇ ಇಲ್ಲದಂತೆ ಮಾಡಿದವು. ತ್ರಿವೇಣಿ,
ವಾಣಿ, ಎಂ ಕೆ ಇಂದಿರಾ, ಭೈರಪ್ಪ, ತ.ರಾ.ಸು. ಶಿವರಾಮ ಕಾರಂತರ ಕಾದಂಬರಿಗಳು, ಕುವೆಂಪುರವರ ಎರಡೂ ಕಾದಂಬರಿಗಳು
ಆಗಲೇ ಓದಿದ್ದು. ನಂತರ ಇಂಗ್ಲೀಶ್ ಪುಸ್ತಕಗಳನ್ನೂ ಓದಲು ಆರಂಬಿಸಿದ ಮೇಲೆ ಆಯ್ಕೆ ವಿಸ್ತಾರವಾಯಿತು.
ಮೊದಮೊದಲು ಓದಿದ ಜೇನ್ ಆಸ್ಟಿನ್ ಕಾದಂಬರಿಗಳು, ಅಗಾಥ ಕ್ರಿಸ್ಟಿಯ ಪತ್ತೇದಾರಿ ಕಾದಂಬರಿಗಳು ಈಗಲೂ
ಇಷ್ಟ. ಪಿ.. ಜಿ. ವುಡ್ ಹೌಸರ ತಿಳಿಹಾಸ್ಯದ ಚಿತ್ರವಿಚಿತ್ರ ಪಾತ್ರಗಳಿರುವ ಕಾದಂಬರಿಗಳು ಬಹಳ ಖುಷಿಕೊಟ್ಟಿವೆ.
ಖಲೀಲ್ ಗಿಬ್ರಾನ್ ಮಕ್ಕಳ ಬಗ್ಗೆ ಬರೆದ ಸಾಲುಗಳಂತೂ ನಾನು ಮೊದಲ ಬಾರಿಗೆ ಅನುವಾದ ಮಾಡಲು ಪ್ರೇರೇಪಿಸಿತು.
ಈಗ ಅದೇ ನನ್ನ ವೃತ್ತಿಯಾಗಿದೆ.ನಾನು ಬರೆಯಲು ಕುಳಿತದ್ದು ಪುಸ್ತಕಳು ನನ್ನ ಮೇಲೆ ಮಾಡಿದ ಪ್ರಭಾವದ ಬಗ್ಗೆ.
ಆದರೆ ಬರೆದದ್ದು ಇದು.
ಕೊನೆಯ ಕೊಸರು ಮುಗುಳ್ನಗೆಗಾಗಿ,ಮೇಲೆ ಹೇಳಿದ ರಾಮನ ಕಾಮಿಕ್ ನಲ್ಲಿ ಕೈಕೇಯಿ ರಾಮ ಸೀತೆಯರಿಗೆ ನಾರುಮಡಿ
ಕೊಟ್ಟಳು ಎಂದಿದೆ. ನನ್ನ ಮಗನ ಪ್ರಶ್ನೆ ಕೈಕೇಯಿ ಯಾಕೆ ಅರಮನೆಯಲ್ಲಿ ನಾರುಮಡಿ ಇಟ್ಟುಕೊಂಡಿದ್ದಳು?
ನಾನು ಕಾಲೇಜಿನಲ್ಲಿ ಓದುವಾಗ ನಮ್ಮ ಇಂಗ್ಲೀಶ್ ಲೆಕ್ಚರರ್ ನೆನಪಿನ ಬಗ್ಗೆ
ಮಾತಾಡ್ತಾ ಇದ್ದರು. ಕುವೆಂಪುರವರ ಆತ್ಮಚರಿತ್ರೆ-ಹೆಸರೇ ನೆನಪಿನ ದೋಣಿ ನಮ್ಮ ಲೈಬ್ರರಿಯಲ್ಲಿದೆ ನೋಡಿದೀರಾ
ಅಂದರು. ನಾನು ಕೈಯೆತ್ತಿದೆ. ನಿಮಗೆ ಹೇಗನ್ನಿಸಿತು ಅದರ ಬಗ್ಗೆ ಅಂದರು. ನಾನು ಓದಿರಲೇ ಇಲ್ಲ. ಬರೀ
ನೋಡಿದ್ದೆ ಅಷ್ಟೆ.
Subscribe to:
Post Comments (Atom)
No comments:
Post a Comment