Sunday, August 2, 2009

ಮಕ್ಕಳು

ಖಲೀಲ್ ಗಿಬ್ರಾನ್ ಕಾಲ ಜನವರಿ ೬ ೧೮೮೩ ---- ಏಪ್ರಿಲ್ ೧೦ ೧೯೩೧ ಲೆಬನೀಸ್ ಅಮೆರಿಕನ್ ಕವಿ, ಲೇಖಕ ಹಾಗೂ ಚಿತ್ರಗಾರ ಸ್ಫೂರ್ತಿಯನ್ನ ಕೊಡುವ ಬರವಣಿಗೆಯ (inspirational fiction) ಮಾದರಿಯಾಗಿರುವ The prophet ಒಂದು ಅತ್ಯುತ್ತಮ ಪುಸ್ತಕ. ಪುಸ್ತಕದಿಂದ----------- ಆಲ್ ಮುಸ್ತಫಾ ದೇವರಿಗೆ ಹಾಗೂ ಆ ನಗರದ ಜನಗಳಿಗೆ ಪ್ರಿಯವಾದ ವ್ಯಕ್ತಿ. ಅವನು ತನ್ನ ಜನ್ಮಸ್ಥಾನಕ್ಕೆ ಹಿಂದಿರುಗಲು ಹೊರಟಾಗ, ಅಗಲಿಕೆಯ ನೋವನ್ನು ಅನುಭವಿಸುವ ಜನರು ವಿವಿಧ ವಿಚಾರಗಳ ಬಗ್ಗೆ ತಿಳಿಸಲು ಕೇಳುತ್ತಾರೆ.ಶ್ರೀಮಂತನೊಬ್ಬ ಕೊಡುವುದರ ಬಗ್ಗೆ ಕೇಳುತ್ತಾನೆ. ಹೋಟೆಲಿನ ಮಾಲೀಕನೊಬ್ಬ ತಿನ್ನುವುದು ಕುಡಿಯುವುದರ ಬಗ್ಗೆ, ರೈತನೊಬ್ಬ ಕೆಲಸದ ಬಗ್ಗೆ, ಮೇಸ್ತ್ರಿ ಮನೆಗಳ ಬಗ್ಗೆ, ನ್ಯಾಯಾಧೀಶ crime and punishment ಬಗ್ಗೆ , ಶಾಂತಿ, ಸುಖ ದುಃಖ ಇನ್ನಿತರ ತಮ್ಮನ್ನು ಕಾಡುವ ವಿಚಾರಗಳ ಬಗ್ಗೆ ಮಾತನಾಡಲು ಹೇಳುತ್ತಾರೆ. ಅವನು ಪ್ರತಿಯೊಂದರ ವಿಚಾರವಾಗಿಯೂ ಹೇಳುತ್ತಾ ಹೋಗುತ್ತಾನೆ. ಆಗ ಪುಟ್ಟಮಗುವನ್ನು ಎದೆಗೊತ್ತಿಕೊಂಡಿದ್ದ ತಾಯಿಯೊಬ್ಬಳು ಮಕ್ಕಳ ಬಗ್ಗೆ ಮಾತನಾಡಲು ಹೇಳುತ್ತಾಳೆ.ಮಕ್ಕಳ ಬಗ್ಗೆ ಅವನಾಡುವ ನುಡಿಗಳು ಪ್ರತಿಯೊಬ್ಬ ತಾಯಿ ತಂದೆಯರು ಹಾಗೂ ಶಿಕ್ಷಕರು ಓದಲೇಬೇಕಾದದ್ದು. ನಿಮ್ಮ ಮಕ್ಕಳು ನಿಮ್ಮವರಲ್ಲ. ಅವರು ಜೀವನದ ಪ್ರತೀಕ್ಷೆಯ ಫಲಗಳು. ಅವರು ನಿಮ್ಮ ಮೂಲಕ ಬರುತ್ತಾರೆ, ನಿಮ್ಮಿಂದಲ್ಲ.ನಿಮ್ಮ ಜೊತೆಗಿದ್ದರೂ ಅವರು ನಿಮ್ಮವರಲ್ಲ. ನಿಮ್ಮ ಪ್ರೀತಿಯನ್ನು ಅವರಿಗೆ ಕೊಡಬಹುದು. ನಿಮ್ಮ ಆಲೋಚನೆಗಳನ್ನಲ್ಲ.ಯಾಕೆಂದರೆ ಅವರಿಗೆ ತಮ್ಮದೇ ಆದ ಆಲೋಚನೆಳಿರುತ್ತವೆ. ನೀವು ಅವರ ದೇಹಕ್ಕೆ ಆಶ್ರಯದಾತರು, ಅವರಆತ್ಮಕ್ಕಲ್ಲ.ಯಾಕೆಂದರೆ ಅವರ ಆತ್ಮಗಳು ನೀವು ಕನಸಿನಲ್ಲೂ ಭೇಟಿ ಕೊಡಲಾಗದ ನಾಳೆಗಳಲ್ಲಿ ವಾಸಿಸುತ್ತಿರುತ್ತವೆ. ನೀವು ಅವರಂತಾಗಲು ಪ್ರಯತ್ನ ಪಡಬಹುದು. ಆದರೆ ಅವರನ್ನು ನಿಮ್ಮಂತಾಗಿಸಲು ಯತ್ನಿಸದಿರಿ. ಯಾಕೆಂದರೆ ಜೀವನ ಹಿಮ್ಮುಖವಾಗಿ ಚಲಿಸುವುದೂ ಇಲ್ಲ, ನೆನ್ನೆಯೊಂದಿಗೆ ಅಂಟಿಕೊಂದಿರುವುದೂ ಇಲ್ಲ. ನೀವು ಬಿಲ್ಲುಗಳು. ನಿಮ್ಮ ಮೂಲಕ ಆ ಬಿಲ್ಲುಗಾರ ಬಿಟ್ಟ ಜೀವಂತ ಬಾಣಗಳೇ ನಿಮ್ಮ ಮಕ್ಕಳು. ನಾಳಿನ ಹಾದಿಯಲ್ಲಿ ಗುರಿಯಿಟ್ಟು, ನಿಮ್ಮನ್ನು ತನ್ನ ಅಪಾರ ಶಕ್ತಿಯಿಂದ ಬಗ್ಗಿಸಿ, ಆ ಬಿಲ್ಲುಗಾರ ಬಾಣಗಳು ವೇಗವಾಗಿ ಅತಿ ದೂರದ ಗುರಿ ತಲುಪುವಂತೆ ಮಾಡುತ್ತಾನೆ. ಆ ಬಿಲ್ಲುಗಾರನ ಕೈಯಲ್ಲೇ ಬಗ್ಗಿದ್ದರಲ್ಲೇ ನಿಮ್ಮ ಸಾರ್ಥಕ್ಯವಿದೆ. ಯಾಕೆಂದರೆ ಆ ಬಿಲ್ಗಾರ ಚಲಿಸುವ ಬಾಣಗಳನ್ನು ಪ್ರೀತಿಸುವಂತೆಯೇ ಅಚಲವಾದ ಬಿಲ್ಲನ್ನೂ ಸಹ ಪ್ರೀತಿಸುತ್ತಾನೆ. ಅನುವಾದದಲ್ಲಿ ನನ್ನ ಮೊದಲ ಪ್ರಯತ್ನ. ನಿಮ್ಮ ಅಭಿಪ್ರಾಯ ತಿಳಿಸಿ. ಇದನ್ನು ಓದಿ ಯಾರಿಗಾದರೂ ಮೂಲ ಪುಸ್ತಕ ಓದಬೇಕೆನಿಸಿದರೆ ನನ್ನ ಪ್ರಯತ್ನ ಸಾರ್ಥಕ.

8 comments:

  1. ಉಷಾ ಮೇಡಮ್

    ಇದು ನಿಜಕ್ಕೂ ತುಂಬಾ ಚೆನ್ನಾಗಿರುವ ಜೀವನ್ಮುಖಿ ಸಾಲುಗಳು. ಮಕ್ಕಳ ಬಗ್ಗೆ ತುಂಬಾ ವಿವರಣೆಯಿದೆ. ಧನ್ಯವಾದಗಳು.

    ReplyDelete
  2. ಶಿವುರವರಿಗೆ ವಂದನೆಗಳು. ಪ್ರೋತ್ಸಾಹ ಹೀಗೆ ಮುಂದುವರೆಯಲಿ.

    ReplyDelete
  3. ಚೆನ್ನಾಗಿದೆ...
    ಉಪಯುಕ್ತ....

    ReplyDelete
  4. ಉಷಾರವರೇ,

    ಇಟ್ಟಿಗೆ ಸಿಮೆಂಟ್ ಬ್ಲಾಗಿನಲ್ಲಿ ನಿಮ್ಮ ಕಾಮೆಂಟ್ ನೋಡಿ ಇಲ್ಲಿಗೆ ಬಂದೆ. ಅನುವಾದ ಚೆನ್ನಾಗಿದೆ. ಮಕ್ಕಳ ಬಗ್ಗೆ ಇಲ್ಲಿ ಇರುವ ಸಾಲುಗಳು ಪ್ರತಿಯೊಬ್ಬ ತಂದೆ ತಾಯಿಯೂ ಓದಬೇಕಾದಂತವು. ಮಕ್ಕಳನ್ನು ತಮ್ಮ ನೆರಳಂತೆ ಬೆಳೆಸಲು ಯತ್ನಿಸುವ ತಂದೆ ತಾಯಂದಿರಿಗೆ ಕಿವಿಮಾತುಗಳು. ಜನವರಿ ನಂತರ ಒಮ್ಮೆಲೇ ಆಗಸ್ಟ್ ನಲ್ಲಿ ಬರೀತಿದಿರಾ.. ಇನ್ನಷ್ಟು ನಿರಂತರವಾಗಿ ಬರೆಯಿರಿ.

    - ಉಮೇಶ್

    ReplyDelete
  5. ಉಷಾರವರೆ....

    ಖಲೀಲ್ ಗಿಬ್ರಾನ್ ನನಗಿಷ್ಟ...

    ’ಪ್ರವಾದಿ" ಅವನ ಪುಸ್ತಕ ನನ್ನ ಬಳಿ ಇದೆ...

    ಅವನ ಬಗೆಗೆ ಇನ್ನಷ್ಟು ತಿಳಿಸಿ...
    "ಸಂತೋಷ ಮತ್ತು ದುಃಖ ಎರಡೂ ಒಂದೇ...
    ಆ... ಎರಡೂ ಸಮಯವನ್ನು...
    ನಾವು ಒಂಟಿಯಾಗೇ ಅನುಭವಿಸುತ್ತೇವೆ..."

    ಅವನ ಸಾಲುಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು...

    ReplyDelete
  6. ಉಮೇಶ್ ಹಾಗೂ ಪ್ರಕಾಶ್ ರವರಿಗೆ ನನ್ನ ಬ್ಲಾಗಿಗೆ ಸ್ವಾಗತ. ಪ್ರೋತ್ಸಾಹ ಹೀಗೆ ಮುಂದುವರೆಯಲಿ.

    ReplyDelete
  7. ಉಷಾರವರೇ, ನಿಮ್ಮ ಪ್ರಯತ್ನ ಚನ್ನಾಗಿದೆ ಎಂದಷ್ತೇ ಸದ್ಯಕ್ಕೆ ಹೇಳಬಲ್ಲೆ, ನೀವು ಸಂಕ್ಷೇಪವಾಗಿ ಕಥೆಯನ್ನು (ಒಂದೆರಡು ಪುಟದಲ್ಲಿ) ಅನುವಾದಿಸಿದ್ದರೆ ಅಥವಾ ನಿಮ್ಮ ಅನ್ನಿಸಿಕೆಯ ಸಾರ ತಿಳಿಸಿದ್ದರೆ ಮೂಲ ಲೇಖಕನ ತುಡಿತ ಮತ್ತು ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸಬಹುದು. ಪ್ರವಾದಿಯ ವಿವರಗಳನ್ನು ಕೊಡಲು ಸಾಧ್ಯವೇ? ಇಟ್ಟಿಗೆ ಸಿಮೆಂಟಿನ ಮೂಲಕ ನಿಮ್ಮಲ್ಲಿಗೆ ಬಂದೆ. ನನ್ನ ಬ್ಲಾಗ್ ಗಳಿಗೂ (ಜಲನಯನ, ಭಾವ ಮಂಥನ, science & share) ಗೆ ಭೇಟಿ ನೀಡಿ ಕಾಮೆಂಟಿಸಿ.

    ReplyDelete
  8. ಖಲೀಲ್ ಗಿಬ್ರಾನ್ ನನ್ನ ಮೆಚ್ಚಿನ ದಾರ್ಶನಿಕ..

    "ಪ್ರವಾದಿ" ನಾನು ತುಂಬಾ ಇಷ್ಟ ಪಟ್ಟ ಮೆಚ್ಚಿದ ಪುಸ್ತಕ.

    ನೆನಪಿಸಿದ್ದಕ್ಕೆ ಥ್ಯಾಂಕ್ಸ್...

    ReplyDelete