Sunday, March 5, 2017

< ಪುಟ್ಟಿಯ ಬಾಲ್ಯ ಫೋಟೋ ತಂದ ನೆನಪು ಆವತ್ತು ಮನೆಯಲ್ಲಿ ರತ್ನ ಒಬ್ಬಳೆ.ಯಜಮಾನರು ಗೆಳೆಯರೊಬ್ಬರ ಮಗಳ ಮದುವೆಯ ಮಾತುಕತೆಗೆ ಹೋಗಿದ್ದರು.ಮಕ್ಕಳು ,ಅಳಿಯಂದಿರು ಸೊಸೆ ಎಲ್ಲಾ ಒಂದು ದಿನದ ಪ್ರವಾಸ ಹೋಗಿದ್ದರು.ಅಕ್ಕ ಹೊಲಿದುಕೊಟ್ಟಿದ್ದರವಿಕೆಗೆ ಹುಕ್ಸ್ ಹೊಲಿಯಲು ಕುಳಿತಳು. ಯಾಕೋ ಬೇಡವೆನಿಸಿತು. ತವರುಮನೆಗೆ ಹೋದಾಗ ಅಳಿಯ ಮೊಬೈಲಲ್ಲಿ ಪತ್ನಿಯ ಬಾಲ್ಯದ ಫೋಟೋ ಜೊತೆಗೆ ರತ್ನಳ ಬಾಲ್ಯದ ಫೋಟೋ ಸಹ ಹಾಕಿಕೊಟ್ಟಿದ್ದರು.ರತ್ನ ಅದನ್ನು ನೋಡುತ್ತಾ ಕುಳಿತಳು. ಪುಟ್ಟಿ ಫೋಟೋದಲ್ಲಿ ಕೆಂಪು ಡಮಾಸ್ ಬಟ್ಟೆಯ ಫ್ರಾಕ್ ಧರಿಸಿ ಕೈಯಲ್ಲಿ ಬೊಂಬೆ ಹಿಡಿದಿದ್ದಳು. ದೊಡ್ಡಕ್ಕ ಅದನ್ನು ಹೊಲಿದಿದ್ದಳು. ಎದೆಯ ಭಾಗದಲ್ಲಿ ಬಿಳಿಯ ಹೊಳೆಯುವ ದಾರದಲ್ಲಿ ಕಸೂತಿ ಮಾಡಿ ಅಂಚಿನಲ್ಲಿ ಬಿಳಿ ಲೇಸಿಟ್ಟು ಹೊಲಿದಿದ್ದಳು.ಆಗಿನ ಫ್ಯಾಶನ್ನಂತೆ ಅದಕ್ಕೆ ಪಫ್ ತೋಳು ಇಟ್ಟಿದ್ದಳು. ಫೋಟೋದ ಒಂದು ಕೊನೆಯಲ್ಲಿ ಕೈಕಟ್ಟಿ ನಿಂತ ಅಕ್ಕ ಕಾಣ್ತಿದ್ದಳು.ಇನ್ನೊಂದು ಫೋಟೋದಲ್ಲೂ ಅದೇ ಫ್ರಾಕ್ ತೊಟ್ಟ ಪುಟ್ಟಿ ಉಯ್ಯಾಲೆ ಮೇಲೆ ಕುಳಿತಿದ್ದಳು.ದೂರದಿಂದ ತೆಗೆದ ಆ ಫೋಟೋದಲ್ಲಿ ತುಳಸಿ ಕಟ್ಟೆಯ ಮುಂದೆ ಅಮ್ಮ ಹಾಕಿದ ಸುಂದರ ರಂಗೋಲಿ ಸಹ ಕಾಣುತ್ತಿತ್ತು. ಅಪ್ಪ ಹೊಸದಾಗಿ ಕ್ಯಾಮೆರಾ ಕೊಂಡಿದ್ದರು. ಅಣ್ಣ ಧೂಳು ಹೊಡೆಯುತ್ತಿದ್ದ ತಂಗಿಯರನ್ನು ಬಲವಂತವಾಗಿ ನಿಲ್ಲಿಸಿ ತೆಗೆದ ಫೋಟೋ,. ಪೆನ್ಸಿಲ್ನಲ್ಲಿ ಕಾಪಿ ಬರೆಯುತ್ತಿದ್ದ ಪುಟ್ಟಿಯನ್ನು ಕರೆದು ಹಿತ್ತಿಲ ಮೆಟ್ಟಿಲ ಮೇಲೆ ಕೂರಿಸಿ ತೊಡೆಯ ಮೇಲೆ ಪಕ್ಕದ ಮನೆಯವರ ಅಳುತ್ತಿದ್ದ ಮಗುವನ್ನು ಕೂರಿಸಿ ತೆಗೆದ ಫೋಟೋ . ಪುಟ್ಟಿಯ ಕೈಯಲ್ಲಿ ಪೆನ್ಸಿಲ್ ಹಾಗೇ ಇತ್ತು.ಫೋಟೋ ತೆಗಿಸಿಕೊಳ್ಳಲು ಒಪ್ಪದ ಅಜ್ಜಿಯ ಫೋಟೋ ಸಹ ಇತ್ತು, ಅಜ್ಜಿ ತೊಟ್ಟಿಯ ಬಳಿ ಬಂದ ಮೊಮ್ಮಗನಿಗೆ ನೀರು ಬೇಕಾಗಿರಬಹುದೆಂದು ಬಗ್ಗಿ ಮಗ್ಗಲ್ಲಿ ನೀರು ತೆಗೆಯುತ್ತಿರುವ -ಮೋಸದಿಂದ ತೆಗೆದ- ಫೋಟೊ. ಅಪ್ಪ ಅಮ್ಮನ ಫೋಟೋ ಎಲ್ಲ ಇತ್ತು. ಪುಟ್ಟಿನೂ ಅಣ್ಣನದೊಂದು ಫೋಟೋ ಕ್ಲಿಕ್ಕಿಸಿದ್ದಳು. ಒಂದು ದಪ್ಪ ಜಡೆ ಮುಂದೆ ಹಾಕಿ ಸೊಂಟದ ಮೇಲೆ ಕೈಯಿಟ್ಟು ಚಿಕ್ಕಕ್ಕ ಫೋಟೋದಲ್ಲಿ ಸುಂದರವಾಗಿ ನಗುತ್ತಿದ್ದಳು. ಇನ್ನೊಂದು ಫೋಟೋ ತಿರುಪತಿಯಲ್ಲಿ ನಡೆದ ಅಣ್ಣನ ಮುಂಜಿಯ ನಂತರ ತೆಗೆದದ್ದು. ಪುಟ್ಟಿ ಗುಂಡು ತಲೆಯ ಮೇಲೆ ಟೋಪಿ ಧರಿಸಿದ್ದಳು.ಅಕ್ಕ ಹೊಲಿದುಕೊಟ್ಟ ಆನಂದ ಬಣ್ಣದ (ಒಂದು ರೀತಿಯ ನೀಲಿ)ಪಂಜಾಬಿ ಡ್ರೆಸ್ ತೊಟ್ಟಿದ್ದಳು. ಅದರ ಮೇಲೆ ಸಹ ಅಕ್ಕ  ಮೆಶಿನ್ನಲ್ಲಿ ಮಾಡಿದ ಕಸೂತಿಯಿತ್ತು. ಹೊಸ ಬಟ್ಟೆಯೆಂದು ಅದನ್ನೇ ಹಾಕಿಕೊಂಡು ಮಾರನೆಯ ದಿನ ಶಾಲೆಗೆ ಹೋಗಿದ್ದಳು. ಶಾಲೆಯಿಂದ ವಾಪಸ್ ಬರುವಾಗ ಅಳುತ್ತಾ ಬಂದ ಪುಟ್ಟಿಯನ್ನು ನೋಡಿ ಎಲ್ಲರಿಗೂ ಗಾಬರಿ. ತನ್ನ ಹೊಸ ಬಟ್ಟೆ ಹರಿದಿದೆಯೆಂದು ಪುಟ್ಟಿ ಅಳುತ್ತಿದ್ದಳು. ಮೂರು ಕಡೆ ಸಣ್ಣ ಗೆರೆಯಂತೆ ಕಾಲಿನ ಭಾಗದಲ್ಲಿ ಹರಿದಿತ್ತು.ಹೇಗೆ ಹರಿಯಿತೆಂದು ಕೇಳಿದರೆ ಪುಟ್ಟಿ ಗೊತ್ತಿಲ್ಲವೆಂದು ಅಳುತ್ತಿದ್ದಳು. ಪುಟ್ಟಿ ಎಲ್ಲಾದರೂ ಬಿದ್ದು ಬಂದಿರಬಹುದೆಂದುಕೊಂಡರೆ ಹರಿದದ್ದು ಹಾಗಿರಲಿಲ್ಲ. ತಂತಿ ಅಥವಾ ಮುಳ್ಳಿಗೆ ಸಿಕ್ಕು ಹರಿದಂತೂ ಇರಲಿಲ್ಲ. ಹೊಸ ಬಟ್ಟೆ ಹೇಗೆ ಹರಿಯಿತೆಂಬುದು ಎಲ್ಲರಿಗೂ ಸೋಜಿಗವಾಗಿತ್ತು.ಅಣ್ಣ ಉಪಾಯವಾಗಿ ಬಟ್ಟೆ ಹರಿದುದರ ರಹಸ್ಯ ಪುಟ್ಟಿಯಿಂದ ಹೊರ ತೆಗೆದ. ಅಣ್ಣನ ಮಾತಿಗೆ ಮರುಳಾಗಿ ಪುಟ್ಟಿ ಬಾಯ್ಬಿಟ್ಟಳು. ಚಿನ್ನಿ ಕೊಟ್ಟ ಬ್ಲೇಡ್ ಚೂಪಾಗಿದಿಯೋ ಇಲ್ಲವೋ ಎಂದು ನೋಡಲು ತನ್ನ ಹೊಸ ಬಟ್ಟೆಗೆ ಬ್ಲೇಡ್ ಹಾಕಿದ್ದಳು ಪುಟ್ಟಿ.ಆದರೆ ಮೂರು ಬಾರಿ ಯಾಕೆ ಖಂಡಿತ ಪುಟ್ಟಿಗೆ ಸಹಾ ಗೊತ್ತಿಲ್ಲ. ಕಪ್ಪು ಬಿಳಿ ಫೋಟೋಗಳು ಬಣ್ಣ ಬಣ್ಣದ ನೆನಪನ್ನು ತಂದವು. ಕರೆಗಂಟೆಯ ಶಬ್ದ ಕೇಳಿ ರತ್ನ ಎದ್ದಳು.

No comments:

Post a Comment